Advertisement

ಈಗ ಎಟಿಎಂನಲ್ಲಿ ಕಾರ್ಡ್‌ಗಳು ಬೇಕಿಲ್ಲ ; ಕೋವಿಡ್ ಕಾರಣ ಸ್ಪರ್ಶ ಕಡಿಮೆ ಮಾಡಲು ಈ ಸೌಲಭ್ಯ

01:18 PM Jun 05, 2020 | Hari Prasad |

ಕೋವಿಡ್ ಬಂದ ನಂತರ ಇಡೀ ಜಗತ್ತಿನ ಲೆಕ್ಕಾಚಾರಗಳೇ ಬದಲಾಗುತ್ತಿವೆ. ಬಹುಶಃ ಮುಂದಿನ ಹಲವು ವರ್ಷಗಳ ಕಾಲ ಹೀಗೆಯೇ ಇರಬಹುದು. ಇಲ್ಲಿಯವರೆಗೆ ಎಟಿಎಂಗೆ ಹೋಗಿ, ಪಾಸ್‌ವರ್ಡ್‌ ಒತ್ತಿ, ಅಲ್ಲಿನ ಬಟನ್‌ಗಳನ್ನು ಪದೇ ಪದೇ ಮುಟ್ಟಿ ಹಣ ಪಡೆಯುತ್ತಿದ್ದ ನಾವು, ಇನ್ನು ಅಲ್ಲಿ ಮುಟ್ಟುವ ಕ್ರಿಯೆಯನ್ನು ಅತಿ ಕಡಿಮೆಗೊಳಿಸಬಹುದು. ಇದಕ್ಕಾಗಿ ಕೆಲವು ಬ್ಯಾಂಕ್‌ಗಳು ಹೊಸ ದಾರಿ ಕಂಡು ಹಿಡಿದಿವೆ. ಅದು ಹೇಗೆ?ಏನು? ಇಲ್ಲಿದೆ ವಿವರ.

Advertisement

ಮೊಬೈಲ್‌ ಇದ್ದರೆ ಸಾಕು, ಕಾರ್ಡ್‌ ಅಗತ್ಯವಿಲ್ಲ
ಇದುವರೆಗೆ ಎಟಿಎಂ ಕೇಂದ್ರಗಳಿಗೆ ಹೋದಾಗ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ, ಪಾಸ್‌ವರ್ಡ್‌ ಒತ್ತಿ, ಹಣ ಪಡೆಯುತ್ತಿದ್ದೆವು. ಇನ್ನು ಆ ಕಾರ್ಡ್‌ಗಳನ್ನು ಬಳಸುವ ಅಗತ್ಯವಿಲ್ಲ. ಬದಲಿಗೆ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅಲ್ಲದೇ ಈ ರೀತಿ ಹಣ ಪಡೆಯಲು 10,000 ರೂ.ನಿಂದ 20,000 ರೂ.ವರೆಗೆ ಮಿತಿಯಿದೆ. ಈ ಮಿತಿಯನ್ನು ಸಂಬಂಧಪಟ್ಟ ಬ್ಯಾಂಕ್‌ಗಳು ನಿಗದಿಪಡಿಸುತ್ತವೆ. ಸದ್ಯ ಎಸ್‌ಬಿಐ, ಐಸಿಐಸಿಐ, ಆ್ಯಕ್ಸಿಸ್‌, ಬ್ಯಾಂಕ್‌ ಆಫ್ ಬರೋಡ ಬ್ಯಾಂಕ್‌ಗಳು ಮಾತ್ರ ಈ ಸೌಲಭ್ಯ ನೀಡಿವೆ.

ಎಸ್‌ಬಿಐ- ಯೊನೊ ಆ್ಯಪ್‌
ಹಂತ 1:
ಎಸ್‌ಬಿಐನ ಇಂಟರ್ನೆಟ್‌ ಬ್ಯಾಂಕ್‌ ಆ್ಯಪ್‌ ಯೊನೊವನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಯೊನೊ ಕ್ಯಾಶ್‌ ಆಯ್ಕೆಯನ್ನು ಒತ್ತಿ.

ಹಂತ 2: ನಿಮ್ಮ ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಿ, ಎಷ್ಟು ಹಣ ಬೇಕೆಂಬುದನ್ನು ನಮೂದಿಸಿ.

ಹಂತ 3 : ಯೊನೊ ವ್ಯವಹಾರ ಸಂಖ್ಯೆ ಮತ್ತು ಪಿನ್‌ ಇರುವ ಒಂದು ಸಂದೇಶ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುತ್ತದೆ.

Advertisement

ಹಂತ 4: ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಹೋಗಿ, ಅಲ್ಲಿ ಯೊನೊ ಕ್ಯಾಶ್‌ ಆಯ್ಕೆ ಒತ್ತಿ.

ಹಂತ 5: ನಿಮ್ಮ ಮೊಬೈಲ್‌ಗೆ ಬಂದಿರುವ ಸಂದೇಶದಲ್ಲಿರುವ, ಯೊನೊ ನಗದು ವ್ಯವಹಾರ ಸಂಖ್ಯೆ ಒತ್ತಿ, ಹಾಗೆಯೇ ಎಷ್ಟು ಹಣ ಬೇಕೋ ಅದನ್ನು ನಮೂದಿಸಿ.

ಹಂತ 6: ಯೊನೊ ನಗದು ಪಿನ್‌ ಅನ್ನು ಅಲ್ಲಿ ನಮೂದಿಸಿ. ಅದನ್ನು ಸರಿಯೆಂದು ಖಚಿತಪಡಿಸಿ. ನಗದು ಪಡೆದುಕೊಳ್ಳಿ.

ಸೂಚನೆ: ಯೊನೊದಲ್ಲಿ ಹಣ ಪಡೆಯುವ ಮನವಿ ಮಾಡಿ, ವ್ಯವಹಾರ ಸಂಖ್ಯೆ ಪಡೆದ ಅರ್ಧಗಂಟೆಯೊಳಗೆ, ಈ ಪ್ರಕ್ರಿಯೆಯನ್ನು ಮುಗಿಸಬೇಕು.

ಐಸಿಐಸಿಐ ಬ್ಯಾಂಕ್‌
ಹಂತ 1 :
ಐಸಿಐಸಿಐನ ಐಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಅಲ್ಲಿ ಸರ್ವಿಸಸ್‌ ಎಂಬ ಆಯ್ಕೆಗೆ ಹೋಗಿ, ಕಾರ್ಡ್‌ಲೆಸ್‌ ಕ್ಯಾಶ್‌ ವಿಥ್‌ಡ್ರಾಯಲ್‌ ಆಯ್ಕೆ ಒತ್ತಿ.

ಹಂತ 2: ಅಲ್ಲಿ ಮೊತ್ತ ಮತ್ತು 4 ಸಂಖ್ಯೆಯ ತಾತ್ಕಾಲಿಕ ಪಿನ್‌ ಅನ್ನು ನಮೂದಿಸಿ. ಅನಂತರ ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಿ.

ಹಂತ 3: ವಿವರಗಳನ್ನು ಖಚಿತಪಡಿಸಿ, ಸಬ್ಮಿಟ್‌ ಆಯ್ಕೆ ಒತ್ತಿ. 6 ಸಂಖ್ಯೆಯಿರುವ ಒಂದು ಸಂದೇಶ ನಿಮ್ಮ ಮೊಬೈಲ್‌ಗೆ ಬರುತ್ತದೆ. ಅದು 6 ಗಂಟೆವರೆಗೆ ಚಾಲ್ತಿಯಲ್ಲಿರುತ್ತದೆ.

ಹಂತ 4: ಐಸಿಐಸಿಐ ಎಟಿಎಂ ಕೇಂದ್ರಕ್ಕೆ ಹೋಗಿ, ಅಲ್ಲಿ ನೋಂದಾಯಿತ ಮೊಬೈಲ್‌ ಸಂಖ್ಯೆ, 4 ಸಂಖ್ಯೆ ತಾತ್ಕಾಲಿಕ ಪಿನ್‌, 6 ಸಂಖ್ಯೆಯ ಕೋಡ್‌ ಅನ್ನು ನಮೂದಿಸಿ, ಹಣ ಪಡೆಯಿರಿ.

ಬ್ಯಾಂಕ್‌ ಆಫ್ ಬರೋಡ
ಹಂತ 1:
ಮೊದಲು ಬ್ಯಾಂಕ್‌ ಆಫ್ ಬರೋಡದ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅಲ್ಲಿ ಕ್ಯಾಶ್‌ ಆನ್‌ ಮೊಬೈಲ್‌ ಆಯ್ಕೆ ಒತ್ತಬೇಕು.

ಹಂತ 2: 5000 ರೂ.ವರೆಗೆ ಮೊತ್ತವನ್ನು ನಮೂದಿ ಸಬಹುದು. ಅನಂತರ ಎಂಪಿನ್‌ (ಮೊಬೈಲ್‌ ಆ್ಯಪ್‌ನಲ್ಲಿ ಬಳಸುವ 4 ಸಂಖ್ಯೆಯ ಪಿನ್‌) ಒತ್ತಬೇಕು.

ಹಂತ 3: ನಿಮ್ಮ ಮೊಬೈಲ್‌ ಪರದೆಯಲ್ಲಿ 6 ಸಂಖ್ಯೆಯ ಒಂದು ಕೋಡ್‌ ಕಾಣಿಸಿಕೊಳ್ಳುತ್ತದೆ. ಇದು 15 ನಿಮಿಷದವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ.

ಹಂತ 4: ನಂತರ ಬ್ಯಾಂಕ್‌ ಆಫ್ ಬರೋಡ ಎಟಿಎಂ ಕೇಂದ್ರಕ್ಕೆ ಹೋಗಬೇಕು. ಅಲ್ಲಿ ಕ್ಯಾಶ್‌ ಆನ್‌ ಮೊಬೈಲ್‌ ಆಯ್ಕೆ ಒತ್ತಬೇಕು. ಆಗ ಮೊಬೈಲ್‌ ಆ್ಯಪ್‌ನಲ್ಲಿ ತೋರಿಸುವ ಒಟಿಪಿಯನ್ನು ನಮೂದಿಸಬೇಕು.

ಹಂತ 5: ನಿಮಗೆ ಎಷ್ಟು ಹಣ ಬೇಕು ಎನ್ನುವುದನ್ನು ಅಲ್ಲಿ ಒತ್ತಿ, ಖಚಿತಪಡಿಸಿದರೆ ಹಣ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next