ಬಾಲಿ: “ಇನ್ನು ಶೀತಲ ಸಮರ ಬೇಡ. ಮಿತ್ರತ್ವವೇ ಬೇಕು’- ಹೀಗೆಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಪ್ರತಿಪಾದಿಸಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ಸೋಮವಾರ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿದ್ದಾರೆ.
ತೈವಾನ್ ಬಿಕ್ಕಟ್ಟು ಮತ್ತು ಕೊರೊನಾ ಸೋಂಕು ಜಗತ್ತಿಗೆ ಹರಡಿಸಿದ ವಿಚಾರದಲ್ಲಿ ಪರಸ್ಪರ ತೀವ್ರ ಭಿನ್ನ ಧೋರಣೆಯನ್ನು ಹೊಂದಿದ್ದ ನಾಯಕರು ಬಿಗುವಿನ ವಾತಾವರಣದ ಕಾರ್ಮೋಡ ತಗ್ಗಿಸಲು ಮುಂದಾಗಿದ್ದಾರೆ.
ಜೋ ಬೈಡೆನ್ ಅವರು ಅಮೆರಿಕದ ಅಧ್ಯಕ್ಷರಾಗಿ 2021ರಲ್ಲಿ ಪದಗ್ರಹಣ ಮಾಡಿಕೊಂಡ ಬಳಿಕ ಚೀನ ಅಧ್ಯಕ್ಷರ ಜತೆಗೆ ಇದು ಮೊದಲ ಖುದ್ದು ಭೇಟಿ ಇದಾಗಿದೆ. ಬರೋಬ್ಬರಿ ಮೂರು ಗಂಟೆಗಳ ಕಾಲ ಎರಡೂ ದೇಶಗಳ ಅಧ್ಯಕ್ಷರು ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಇಬ್ಬರು ನಾಯಕರು ಮಾಸ್ಕ್ ಧರಿಸದೆ, ಹಸನ್ಮುಖರಾಗಿ ಮಾತುಕತೆ ನಡೆಸಿದರು ಮತ್ತು ಫೋಟೋ ತೆಗೆಸಿಕೊಂಡಿದ್ದಾರೆ ಕೂಡ.
ಮುಕ್ತ ಮಾತುಕತೆ:
ಚೀನ ಅಧ್ಯಕ್ಷರ ಜತೆಗೆ ಮುಕ್ತ ರೀತಿಯ ಸಂಪರ್ಕ ಸಾಧಿಸಲು ಬಯಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಪರಸ್ಪರ ಸಹಕಾರಕ್ಕಾಗಿ ಸ್ಪರ್ಧೆಯ ಧೋರಣೆಯನ್ನು ಕೈಬಿಡಬೇಕು. ಅದರ ಮೂಲಕ ಪರಿಹಾರ ಕಾಣದ ಸಮಸ್ಯೆಗಳ ಬಗ್ಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ ಬೈಡೆನ್.
Related Articles
ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜತೆಗೆ ತೈವಾನ್ ಬಿಕ್ಕಟ್ಟಿನ ಬಗ್ಗೆಯೂ ಅಧ್ಯಕ್ಷ ಬೈಡೆನ್ ಚರ್ಚೆ ನಡೆಸಿದ್ದಾರೆ. ಎರಡೂ ರಾಷ್ಟ್ರಗಳು ಹೊಂದಿರುವ ಭಿನ್ನಾಭಿಪ್ರಾಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಚೀನದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರವನ್ನೂ ಜೋ ಬೈಡೆನ್ ಉಲ್ಲೇಖಿಸಿದ್ದಾರೆ. ಇದರ ಜತೆಗೆ ಚೀನ ನಿಯಂತ್ರಿತ ಹಾಂಕಾಂಗ್ನಲ್ಲಿ ಕೂಡ ದಮನಕಾರಿ ನೀತಿ ಅನುಸರಿಸುತ್ತಿರುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಜತೆಗೆ ಉತ್ತರ ಕೊರಿಯಾದ ದುಸ್ಸಾಹಸಗಳ ಬಗ್ಗೆ ಕೂಡ ಚರ್ಚೆ ಮಾಡಲಾಗಿದೆ.
ಅಣ್ವಸ್ತ್ರ ಸಮರ ಬೇಡ:
ಉಕ್ರೇನ್ ಸೇರಿದಂತೆ ಜಗತ್ತಿನ ಯಾವುದೇ ಭಾಗದಲ್ಲಿ ಪರಮಾಣು ಶಸ್ತ್ರಾಸ್ತ್ರ ಬಳಕೆ ಮಾಡುವುದು ಬೇಡ. ಈ ನಿಟ್ಟಿನಲ್ಲಿ ಅಣ್ವಸ್ತ್ರ ಸಮರ ಉಂಟಾಗದಂತೆ ತಡೆಯಬೇಕಾಗಿದೆ ಎಂದು ಇಬ್ಬರು ನಾಯಕರು ಪ್ರತಿಪಾದಿಸಿದ್ದಾರೆ. ಒಂದು ವೇಳೆ ಅಂಥ ಸಮರ ಶುರುವಾದರೂ ಯಾರಿಗೂ ಅದರಿಂದ ಜಯ ಸಾಧ್ಯವೇ ಇಲ್ಲ ಎಂಬುದನ್ನು ಇಬ್ಬರು ನಾಯಕರು ಪ್ರತಿಪಾದಿಸಿದ್ದಾರೆ. ಜತೆಗೆ ಉಕ್ರೇನ್ ಪರಿಸ್ಥಿತಿ ಕಳವಕಾರಿ ಎಂದಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ವಿರುದ್ಧ ಅಣ್ವಸ್ತ್ರ ಪ್ರಯೋಗ ನಡೆಸಲಿದ್ದಾರೆ ಎಂಬ ಹಲವು ವದಂತಿಗಳ ನಡುವೆಯೇ ಚೀನಾ ಮತ್ತು ಅಮೆರಿಕ ಅಧ್ಯಕ್ಷರ ಭೇಟಿಯಲ್ಲಿ ಈ ಅಂಶ ಪ್ರಧಾನವಾಗಿ ಪ್ರಸ್ತಾಪವಾಗಿದೆ.
ಪ್ರಪಂಚದ ನಿರೀಕ್ಷೆ:
ಚೀನ ಮತ್ತು ಅಮೆರಿಕ ನಡುವಿನ ಭಿನ್ನಾಭಿಪ್ರಾಯಗಳು ಮುಕ್ತಾಯವಾಗಬೇಕು ಎಂದು ಪ್ರಪಂಚ ಬಯಸುತ್ತಿದೆ ಎಂದು ಚೀನಾ ಅಧ್ಯಕ್ಷ ಕ್ಸಿಜಿನ್ಪಿಂಗ್ ಹೇಳಿದ್ದಾರೆ. ನಮ್ಮ ನಡುವಿನ ಭೇಟಿ ಜಗತ್ತಿನ ಗಮನ ಸೆಳೆದಿದೆ. ವಿಶ್ವಶಾಂತಿಗಾಗಿ ಎರಡೂ ದೇಶಗಳ ನಡುವಿನ ಬಾಂಧವ್ಯ ದೃಢವಾಗಬೇಕಾಗಿದೆ. ಅದಕ್ಕಾಗಿ ಎರಡೂ ದೇಶಗಳ ನಡುವೆ ಶೀತಲ ಸಮರ ತಗ್ಗಬೇಕು ಎಂದು ಪ್ರತಿಪಾದಿಸಿದ್ದಾರೆ ಕ್ಸಿಜಿನ್ಪಿಂಗ್.
ರಷ್ಯಾ ವಿದೇಶಾಂಗ ಸಚಿವಗೆ ಅನಾರೋಗ್ಯ
ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗವಹಿಸಲು ಬಾಲಿಗೆ ಆಗಮಿಸಿದ್ದ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೋ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಾಸ್ಕೋದಲ್ಲಿ ರಷ್ಯಾ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಅಂಥಾ ಬೆಳವಣಿಗೆಯೇ ನಡೆದಿಲ್ಲ ಎಂದಿದೆ.