ಬೆಂಗಳೂರು: ವರ್ಗಾವಣೆಗಾಗಿ ಕಾಯುತ್ತಿರುವ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸರ್ಕಾರ, ಇನ್ನು ಮುಂದೆ ಪರಸ್ಪರ ವರ್ಗಾವಣೆಗೆ ಯಾವುದೇ ಮಿತಿ ಇರುವುದಿಲ್ಲ ಎಂದು ಹೇಳಿದೆ.
ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಲು ಮುಂದಾದ ರಾಜ್ಯ ಸರ್ಕಾರವು ಶಿಕ್ಷಕರ ವರ್ಗಾವಣೆಗಿದ್ದ ಕೆಲ ನಿರ್ಬಂಧ ತೆಗೆದು ಬುಧವಾರ ಕರಡು ಅಧಿಸೂಚನೆ ಹೊರಡಿಸಿದೆ. ಹಾಗೆಯೇ, ಪತಿ-ಪತ್ನಿ ಪ್ರಕರಣಗಳಲ್ಲಿ ಶೈಕ್ಷಣಿಕ ಜಿಲ್ಲೆಯಲ್ಲಿ ಹುದ್ದೆಗಳು ಖಾಲಿ ಇಲ್ಲದಿದ್ದರೆ, ಅದೇ ಜಿಲ್ಲೆಯ ಪಕ್ಕದ ತಾಲ್ಲೂಕಿನಲ್ಲಿ ಹುದ್ದೆ ಪಡೆಯಲು ಅವಕಾಶಗಳಿವೆ.
ಇದುವರೆಗೆ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ, ಒಂದು ಬಾರಿ ವರ್ಗಾವಣೆಯಾದ ಬಳಿಕ ಮತ್ತೆ 3 ವರ್ಷ ಅರ್ಜಿ ಸಲ್ಲಿಸುವಂತಿಲ್ಲ. ಕೆಲಸಕ್ಕೆ ಸೇರಿದ ಮೊದಲ 5 ವರ್ಷ ಹಾಗೂ ನಿವೃತ್ತಿಗೆ ಮೊದಲಿನ 5 ವರ್ಷ ವರ್ಗಾವಣೆಗೆ ಅವಕಾಶ ಇರುವುದಿಲ್ಲ.
ವಿಶೇಷ ಆದ್ಯತೆ
ಮಲೆನಾಡು ವಲಯ, ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳು, ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲ್ಲೂಕುಗಳಿಗೆ ಹೋಗುವವರಿಗೆ ವಿಶೇಷ ಆದ್ಯತೆ ಸಿಗಲಿದೆ. ಎಲ್ಲ ವೃಂದಗಳೂ ಸೇರಿ 15 ವರ್ಷ ಅಥವಾ ಯಾವುದೇ ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ.25ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲ್ಲೂಕಿಗೆ ವರ್ಗಾವಣೆ ಮಾಡಬಹುದಾಗಿದೆ.
ಒಟ್ಟು ವೃಂದ ಬಲದ ಶೇ.11ರಷ್ಟು ಸಾರ್ವತ್ರಿಕ ವರ್ಗಾವಣೆ ಮಿತಿ ಇರುತ್ತದೆ. ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವವರಿಗೆ ಈ ನಿಯಮ ಅನ್ವಯವಾಗದು. ಉಳಿದೆಲ್ಲ ನಿಯಮಗಳು ಮುಂದುವರಿಯಲಿವೆ.
Related Articles
ಹೊರಡಿಸಲಾದ ಕರಡು ಅಧಿಸೂಚನೆಯನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನದಿಂದ 15 ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯ್ದೆ-2020ಕ್ಕೆ ತಿದ್ದುಪಡಿ ಮಾಡಿ, ಸಚಿವ ಸಂಪುಟ ಸಭೆ ಅನುಮೋದನೆ ಪಡೆಯಲಾಗಿತ್ತು. ನಂತರ ಅಧಿವೇಶನದಲ್ಲಿ ಮಂಡಿಸಲಾಗಿತ್ತು.