Advertisement
ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ “ಮಾದಕವಸ್ತುಗಳ ಹಾವಳಿ ಮತ್ತು ನಿಯಂತ್ರಣ’ ಕುರಿತ ಸಭೆಯಲ್ಲಿ ಡ್ರಗ್ಸ್ ಹಾವಳಿ ತಡೆಗೆ ಈಗಿರುವ ಕಾನೂನನ್ನು ಮತ್ತಷ್ಟು ಬಲಗೊಳಿಸುವುದು ಅಥವಾ ಹೊಸ ಕಾನೂನು ರೂಪಿಸಿ ಜಾರಿಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು. ಬಳಿಕ ಸ್ವತಃ ಸಿಎಂ ಸಿದ್ದರಾಮಯ್ಯ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗೃಹ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಕಾರ್ಯಪಡೆ ರೂಪಿಸಲಾಗುವುದು. ಇದರಲ್ಲಿ ಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಐಟಿ-ಬಿಟಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರನ್ನು ಸದಸ್ಯರನ್ನಾಗಿ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲೂ ಸಮಿತಿ ಇರಲಿದೆ. ತಿಂಗಳಿಗೊಮ್ಮೆ ಸಭೆ ಮಾಡಿ ಪರಿಶೀಲಿಸಬೇಕು. ಜತೆಗೆ ಪೊಲೀಸ್ ಠಾಣಾಧಿಕಾರಿ, ಡಿವೈಎಸ್‌ಪಿ, ಎಸಿಪಿ, ಡಿಸಿಪಿಗಳಿಗೂ ಈ ಪ್ರಕರಣಗಳನ್ನು ಮಟ್ಟ ಹಾಕಲು ಮುಕ್ತ ಅವಕಾಶ ನೀಡುವುದರೊಂದಿಗೆ ಜವಾಬ್ದಾರಿಯನ್ನೂ ವಹಿಸಲಾಗುವುದು. ಜವಾಬ್ದಾರಿಯಿಂದ ನುಣುಚಿಕೊಂಡವರಿಗೆ ಅಮಾನತು, ವಜಾ ಸೇರಿದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.
Related Articles
ಡ್ರಗ್ಸ್ ಜಾಲದ ನಿಯಂತ್ರಣಕ್ಕೆ “ಸ್ಟೂಡೆಂಟ್ ಪೊಲೀಸಿಂಗ್’ ಕೂಡ ಮಾಡಲಾಗುವುದು. ಇದರಲ್ಲಿ ಎನ್‌ಸಿಸಿ, ಎನ್ನೆಸೆಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಇರಲಿದ್ದಾರೆ. ಮತ್ತೂಂದೆಡೆ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು, ಸ್ವಯಂಸೇವಾ ಸಂಘಟನೆಗಳನ್ನೂ ತೊಡಗಿಸಿಕೊಳ್ಳಲಾಗುವುದು. ಈ ಸಂಬಂಧದ ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳನ್ನು ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
Advertisement
ಪೊಲೀಸರನ್ನೇ ಡ್ರಗ್ಸ್ ಪೆಡ್ಲರ್‌ಗಳು ನಿಯಂತ್ರಣ ಮಾಡುತ್ತಿರುವ ಬಗ್ಗೆ ಕೇಳಿದಾಗ, ಇದೇ ಕಾರಣಕ್ಕೆ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಲಾಗುತ್ತಿದೆ. ಜತೆಗೆ ಹೊಣೆಗಾರಿಕೆಯನ್ನೂ ನೀಡಲಾಗುತ್ತಿದೆ. ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಅಮಾನತಿನಿಂದ ಹಿಡಿದು ಎಲ್ಲ ರೀತಿಯ ಕ್ರಮ ಕೈಗೊಳ್ಳಲಿಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲಿಂದ ಬರುತ್ತಿದೆ?ರಾಜ್ಯಕ್ಕೆ ಉತ್ತರ ಪ್ರದೇಶ, ಹರ್ಯಾಣ, ಒಡಿಶಾ, ಆಂಧ್ರಪ್ರದೇಶಗಳಿಂದ ಮಾದಕವಸ್ತುಗಳ ಪೂರೈಕೆ ಆಗುತ್ತಿದೆ. ಈ ಪೈಕಿ ಒಡಿಶಾ ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ ಎಂಬ ಮಾಹಿತಿ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಜೀವಾವಧಿ ಶಿಕ್ಷೆಗೂ ಅವಕಾಶ
ದೊಡ್ಡ ಪ್ರಮಾಣದಲ್ಲಿ ಯಾವುದೇ ರೀತಿಯ ಮಾದಕ ವಸ್ತುಗಳ ವ್ಯವಹಾರ ನಡೆಸಿದರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಡ್ರಗ್ಸ್ ಪ್ರಮಾಣದ ಆಧಾರದಲ್ಲಿ ಅವುಗಳಿಗೆ ದಂಡ ವಿಧಿಸಲಾಗುತ್ತದೆ. ಕನಿಷ್ಠ 50 ಸಾವಿರ ರೂ. ಇರಲಿದೆ. ಸ್ಮಾಲ್ ಕ್ವಾಂಟಿಟಿ ಅಂದರೆ?
ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಮಾರಾಟ, ಸೇವನೆ ಮಾಡಿ ಸಿಕ್ಕಿಬಿದ್ದರೆ ಕನಿಷ್ಠ 1 ವರ್ಷದಿಂದ 3 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 25 ಸಾವಿರ ರೂ. ವರೆಗೂ ದಂಡ ವಿಧಿಸಬಹುದಾಗಿದೆ. ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ, ಬ್ರೌನ್‌ಶುಗರ್, ಗಾಂಜಾ ಎಣ್ಣೆ ಸೇರಿದಂತೆ ಇನ್ನಿತರ ಡ್ರಗ್ಸ್‌ಗಳನ್ನು ಗ್ರಾಂ ಲೆಕ್ಕದಲ್ಲಿ ಪರಿಗಣನೆ ಮಾಡಲಾಗುತ್ತದೆ. ಇನ್ನು ಗಾಂಜಾದಂತಹ ಡ್ರಗ್ಸ್‌ಗಳನ್ನು ಕೆಜಿ ಲೆಕ್ಕದಲ್ಲಿ ಪರಿಗಣಿಸಲಾಗುತ್ತದೆ. ಮಾದಕವಸ್ತುಗಳ ಪಿಡುಗು: ಪರಮೇಶ್ವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಆದೇಶ
ಬೆಂಗಳೂರು: ರಾಜ್ಯದಲ್ಲಿ ಮಾದಕವಸ್ತುಗಳ ಪಿಡುಗು ತಡೆಗಟ್ಟಲು ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿರುವ ಸರಕಾರ ಈ ಸಂಬಂಧ ಸಭೆ ನಡೆಸಿದ ದಿನವೇ ಗೃಹ ಸಚಿವ ಡಾ| ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ಸದಸ್ಯರಾಗಿದ್ದಾರೆ. ಕಾರ್ಯಪಡೆಯು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಿಂಗಳಿ ಗೊಮ್ಮೆ ಸಭೆ ನಡೆಸಿ, ಮಾದಕವಸ್ತು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಆದೇಶದಲ್ಲಿ ಸೂಚನೆ ನೀಡಿದ್ದಾರೆ. ಹಿಂದೇನಿತ್ತು?
-ದೊಡ್ಡ ಪ್ರಮಾಣದ ಪ್ರಕರಣವಾದರೆ ಆಜೀವ ಶಿಕ್ಷೆ ವಿಧಿಸಲು ಅವಕಾಶ
-ಸಣ್ಣ ಪ್ರಕರಣವಾದರೆ ಕನಿಷ್ಠ 50 ಸಾವಿರ ರೂ. ದಂಡ ವಿಧಿಸಲು ಅಧಿಕಾರ ಹೊಸ ಕಾನೂನೇನು?
-ಮಾದಕವಸ್ತು ಮಾರಾಟಗಾರರ ವಿರುದ್ಧ ಜಾಮೀನುರಹಿತ ವಾರಂಟ್
-ಅಪರಾಧಿಗೆ ಕನಿಷ್ಠ 10 ವರ್ಷ ಜೈಲು ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ
-ಸಣ್ಣ ಪ್ರಕರಣಗಳಲ್ಲಿ ಕನಿಷ್ಠ 1 ವರ್ಷದಿಂದ 3 ವರ್ಷಗಳವರೆಗೂ ಜೈಲು