ನವದೆಹಲಿ: ಅಧಿಕೃತ ಖಾತೆಯ ಮಾನದಂಡವಾದ ಬ್ಲ್ಯೂಟಿಕ್‌ಗೆ ಶುಲ್ಕ ವಿಧಿಸಿದ್ದ ಟ್ವಿಟರ್, ಈಗ ಖಾತೆದಾರರು ತಮ್ಮ ಖಾತೆ ಸುರಕ್ಷಿತವಾಗಿಟ್ಟುಕೊಳ್ಳಲು ಬಳಸುವ 2ಎಫ್ಎ (2 ಫ್ಯಾಕ್ಟರ್ ಅಥೆಂಟಿಕೇಶನ್)ಗೂ ಶುಲ್ಕ ವಿಧಿಸಿದ್ದು ಮಾ.20 ರಿಂದಲೇ ಹೊಸ ನಿಯಮ ಜಾರಿಗೊಳಿಸಿದೆ.
ನೀವು ಟ್ವಿಟರ್ ಬಳಕೆದಾರರಾಗಿದ್ದು, ಈ ಶುಲ್ಕ ಪಾವತಿಸದೇ ಇದ್ದಲ್ಲಿ ಇನ್ನುಮುಂದೆ 2ಎಫ್ಎ ಸೌಲಭ್ಯ ದೊರೆಯುವುದಿಲ್ಲ. 2ಎಫ್ಎ ಎಂದರೆ, ಬಳಕೆದಾರರು ತಮ್ಮ ಖಾತೆ ತೆರೆಯುವಾಗ ಅವರ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಅದರ ಬಗ್ಗೆ ಸಂದೇಶವೊಂದು ಬರುತ್ತದೆ. ಇದರಿಂದ ನಿಮ್ಮ ಪಾಸ್ವರ್ಡ್ ಬಳಸಿ ಬೇರೆಯವರು ಲಾಗಿನ್ ಆಗಲು ಪ್ರಯತ್ನಿಸಿದರೂ, ಅದರ ಬಗ್ಗೆ ಬಳಕೆದಾರನಿಗೆ ತಿಳಿಯಲು ಸಾಧ್ಯವಾಗುತ್ತಿತ್ತು. ಆದರೀಗ, ಈ ಸೇವೆ ಬಳಕೆಗೂ ಟ್ವಿಟರ್ ಶುಲ್ಕ ವಿಧಿಸಿದೆ.
ಟ್ವಿಟರ್‌ನಲ್ಲಿ ಬ್ಲ್ಯೂಸಬ್‌ಸ್ಕ್ರಿಪ್ಶನ್ ಎಂಬ ಚಂದಾದಾರಿಕೆಯನ್ನೇ ಆರಂಭಿಸಲಾಗಿದ್ದು, ಇದನ್ನು ಪಡೆದವರಿಗೆ ಮಾತ್ರ ಇನ್ನು 2ಎಫ್ಎ ಲಭ್ಯವಿರಲಿದೆ. ಇದಕ್ಕಾಗಿ ಮಾಸಿಕ 900 ರೂ.ಗಳನ್ನು ಪಾವತಿಸಬೇಕಿದೆ.