ಗದಗ: ಹಲವು ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ ಜಾರಿಗೊಳಿಸಿದ ಆರೋಗ್ಯ ಕರ್ನಾಟಕ ಯೋಜನೆ ಇದೀಗ ‘ಆಯುಷ್ಮಾನ್ ಭಾರತ’ದ ರೂಪ ಪಡೆಯುತ್ತಿದೆ. ಆದರೆ, ಹತ್ತಾರು ಷರತ್ತುಗಳ ಪರಿಣಾಮ ಹಲವು ಖಾಸಗಿ ಆಸ್ಪತ್ರೆಗಳು ಯೋಜನೆಯಿಂದ ದೂರ ಉಳಿದಿವೆ. ಅಲ್ಲದೇ, ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಸಮರ್ಪಕ ಚಿಕಿತ್ಸೆ ದೊರೆಯದೇ ಅನಿವಾರ್ಯವಾಗಿ ಜನರು ಸ್ವಂತ ಖರ್ಚಿನಲ್ಲೇ ಖಾಸಗಿ ಆಸ್ಪತ್ರೆಗಳ ಹೊಸ್ತಿಲು ತುಳಿಯುವಂತಾಗಿದೆ.
ರಾಜ್ಯ ಆರೋಗ್ಯ ವಲಯದಲ್ಲಿ ಜಾರಿಯಲ್ಲಿದ್ದ ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಯೋಜನೆಗಳನ್ನು ಸೇರಿಸಿ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದೆ. ಪರಿಣಾಮ ಹಿಂದಿನ ಎಲ್ಲ ಯೋಜನೆಗಳು ರದ್ದಾಗಿವೆ. ಆದರೆ, ಹೊಸ ಯೋಜನೆ ಅನುಷ್ಠಾನಕ್ಕೆ ಬಂದು 6 ತಿಂಗಳು ಕಳೆದರೂ, ಜಿಲ್ಲೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ ವಿತರಣೆ ಕಾರ್ಯ ಆರಂಭಗೊಂಡಿಲ್ಲ.
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಾಗದಿದ್ದರೆ ಆರೋಗ್ಯ ಕರ್ನಾಟಕದಡಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವಂತಿಲ್ಲ ಎಂಬ ಷರತ್ತು ಬಡ ಮತ್ತು ಗ್ರಾಮೀಣ ಜನರಿಗೆ ಕಬ್ಬಿಣದ ಕಡಲೆಯಂತಾಗಿದೆ. ಜಿಲ್ಲೆಯಲ್ಲಿ ಸರಕಾರಿ ಜಿಲ್ಲಾಸ್ಪತ್ರೆ, ನಾಲ್ಕು ತಾಲೂಕು ಆಸ್ಪತ್ರೆಗಳು, 2 ಸಮುದಾಯ ಆರೋಗ್ಯ, 39 ಪ್ರಾಥಮಿಕ ಆರೋಗ್ಯ ಕೇಂದ್ರ, ಆಯುಷ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ನಾಲ್ಕು ತಾಲೂಕು ವೈದ್ಯಾಧಿ ಕಾರಿಗಳು, 27 ತಜ್ಞ ವೈದ್ಯರು, 6 ಸಾಮಾನ್ಯ ಕರ್ತವ್ಯ ವೈದ್ಯಾಧಿ ಕಾರಿಗಳು, ಹಿರಿಯ ಆರೋಗ್ಯ ಸಹಾಯಕರು, ಕಿರಿಯ ಆರೋಗ್ಯ ಸಹಾಯಕರು, ಶುಶ್ರೂಷಕರು ಸೇರಿದಂತೆ ಎ ಮತ್ತು ಸಿ ವೃಂದದಲ್ಲಿ 250ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಜಿಲ್ಲಾ ಆರೋಗ್ಯ ಇಲಾಖೆಯ 1136 ಹುದ್ದೆಗಳಲ್ಲಿ 407 ಹುದ್ದೆಗಳು ಖಾಲಿ ಇವೆ. (2018ರ ಸೆಪ್ಟೆಂಬರ್ ಅಂತ್ಯದವರೆಗೆ). ಹೀಗಾಗಿ ಹೊರಗುತ್ತಿಗೆ ಹಾಗೂ ದಿನಕೂಲಿ ನೌಕರರ ಮೇಲೆಯೇ ಆಸ್ಪತ್ರೆಗಳು ಕುಂಟುತ್ತಾ ಸಾಗುತ್ತಿವೆ.
ಇದರ ಮಧ್ಯೆ ಅನುಷ್ಠಾನಕ್ಕೆ ಬಂದ ಆರೋಗ್ಯ ಕರ್ನಾಟಕ ಇಲಾಖೆಯ ಸಿಬ್ಬಂದಿ ಹಾಗೂ ವೈದ್ಯರ ಮೇಲಿನ ಹೊರೆ ಹೆಚ್ಚಿಸಿದೆ. ಅದರೊಂದಿಗೆ ಸೌಲಭ್ಯಗಳ ಕೊರತೆಯೋ ಮತ್ತೇನೋ ಕಾರಣಗಳಿಂದ ಸರಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಚಿಕಿತ್ಸೆ ಲಭಿಸುತ್ತಿಲ್ಲ ಎಂಬ ಮಾತುಗಳು ಜನಜನಿತವಾಗಿವೆ. ಹೀಗಾಗಿ ಯೋಜನೆಯ ಗೊಡವೆಯೇ ಬೇಡವೆಂದು ಅನೇಕರು ಗಂಭೀರ ಕಾಯಿಲೆಗಳಿಗೆ ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಮೊರೆ ಹೋಗುತ್ತಿದ್ದು, ಸ್ವಂತ ಹಣದಲ್ಲೇ ಆಸ್ಪತ್ರೆಗಳ ಶುಲ್ಕ ಭರಿಸುತ್ತಿದ್ದಾರೆ.
ಅತಂತ್ರದಲ್ಲಿ ಜನರ ಆರೋಗ್ಯ: ಮೂಲಗಳ ಪ್ರಕಾರ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನ, ಬಳಿಕ ಅದನ್ನು ಆಯುಷ್ಮಾನ್ ಭಾರತಕ್ಕೆ ವಿಲೀನಗೊಳಿಸಿರುವುದು ಗೊಂದಲದ ಗೂಡಾಗಿದೆ. ಸಹಕಾರ ಇಲಾಖೆ ಮೂಲಕ ಜಾರಿಗೊಂಡಿದ್ದ ಯಶಸ್ವಿನಿ ಯೋಜನೆಯಡಿ 31-08-2018ರ ವರೆಗಿನ ಜಿಲ್ಲೆಯಲ್ಲಿ 42,469 ಗ್ರಾಮೀಣ, 1,375 ನಗರ ಸೇರಿದಂತೆ ಒಟ್ಟು 25,844 ಜನರು ಯಶಸ್ವಿನಿ ಕಾರ್ಡ್ ಪಡೆದಿದ್ದರು.
ಆರೋಗ್ಯ ಕರ್ನಾಟಕ ಜಾರಿಗೆ ಬಂದು 6 ತಿಂಗಳು ಕಳೆದರೂ, ಕಾರ್ಡ್ ವಿತರಣೆ ಪ್ರಕ್ರಿಯೆ ಆರಂಭಿಸಿಲ್ಲ. ಆದರೆ, ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆ ಸೇರಿದಂತೆ ಇನ್ನಿತರೆ ಗಂಭೀರ ಕಾಯಿಲೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ 1099 ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿದ್ದೇವೆ. ರೋಗಿಯ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳನ್ನು ಆಧರಿಸಿ ವೈದ್ಯರು ಶಿಫಾರಸು ಪತ್ರ ನೀಡುತ್ತಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಂ. ಹೊನಕೇರಿ ತಿಳಿಸಿದರು.
ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಚಿಕಿತ್ಸೆಗಳಿಗೆ ಸರಕಾರ ಇನ್ನೂ ಶುಲ್ಕ ನಿಗದಿಗೊಳಿಸಿಲ್ಲ. ಎನ್‌ಎಎಚ್‌ಎಚ್‌ಸಿ ಅಡಿ ಮಾನ್ಯತೆ ಪಡೆದಿರಬೇಕೆಂಬ ಷರತ್ತು ಹಾಗೂ ಹಿಂದಿನ ಯಶಸ್ವಿನಿ, ರಾಜೀವ್ ಆರೋಗ್ಯ ಮತ್ತು ವಾಜಪೇಯಿ ಆರೋಗ್ಯ ಯೋಜನೆಯಡಿ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ ಎರಡು ವರ್ಷಗಳು ಕಳೆದರೂ, ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಆರೋಗ್ಯ ಕರ್ನಾಟಕ ಯೋಜನೆಗೆ ಜಿಲ್ಲೆಯಲ್ಲಿ ಕೇವಲ ಐದು ಖಾಸಗಿ ಆಸ್ಪತ್ರೆಗಳು ನೋಂದಾಯಿಕೊಂಡಿವೆ ಎಂದು ಹೇಳಲಾಗಿದೆ.
ಆರೋಗ್ಯ ಕರ್ನಾಟಕ ಯೋಜನೆಯಡಿ ಆಸ್ಪತ್ರೆಗಳ ಸೇವಾ ಶುಲ್ಕ ನಿಗದಿಯಾಗಿಲ್ಲ. ಹಲವು ವಿಚಾರಗಳಲ್ಲಿ ಇನ್ನೂ ಸ್ಪಷ್ಟತೆಯಿಲ್ಲ. ಇದೀಗ ಆಯುಷ್ಮಾನ್ ಭಾರತಗೆ ಸೇರ್ಪಡೆ ಮಾಡುತ್ತಿದ್ದಾರಂತೆ. ಈ ಕುರಿತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿ ಕಾರಿಗಳಿಗೂ ಹೆಚ್ಚಿನ ಮಾಹಿತಿ ಇಲ್ಲವೆನ್ನುತ್ತಾರೆ. ಆರೋಗ್ಯ ಕರ್ನಾಟಕದಡಿ ಶಿಫಾರಸು ಪತ್ರ ತಂದವರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ. ಆದರೆ, ಯಾವ ಚಿಕಿತ್ಸೆಗೆ ಸರಕಾರ ಎಷ್ಟು ಹಣ ಕೊಡುತ್ತೋ ಗೊತ್ತಿಲ್ಲ.
ಡಾ| ರಾಜಶೇಖರ್ ಬಳ್ಳಾರಿ,
ಐಎಂಎ ಮಾಜಿ ರಾಜ್ಯಾಧ್ಯಕ್ಷ
ವೀರೇಂದ್ರ ನಾಗಲದಿನ್ನಿ