ಮಂಗಳೂರು: ಕರಾವಳಿಯ ಬಿಲ್ಲವ ಸಮುದಾಯದ ಮುಖಂಡರಿಗೆ ಸಚಿವ ಸ್ಥಾನ ಸಿಗದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಲ್ಲವ ಮುಖಂಡರು ಅಸಮಾಧಾನ ತಮ್ಮ ವ್ಯಕ್ತಪಡಿಸಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ, ಪಕ್ಷದ ನಿರ್ಧಾರದಿಂದ ಬೇಸರವಾಗಿದೆ. ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಅಥವಾ ಹರೀಶ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ವಿಶ್ವಾಸವಿತ್ತು. ಆದರೆ ಇಬ್ಬರನ್ನೂ ಕಡೆಗಣಿಸಲಾಗಿದೆ. ಈ ಸಂಬಂಧ ರಾಜ್ಯ ನಾಯಕರ ಜತೆ ಮಾತುಕತೆ ನಡೆಸಲಾಗಿದ್ದು, ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಲಾಗಿದೆ ಎಂದರು.
ಪ್ರವೀಣ್ ನೆಟ್ಟಾರು ಪತ್ನಿಗೆ ಬಿಜೆಪಿಯವರು ಗುತ್ತಿಗೆ ಆಧಾರದ ಕೆಲಸ ನೀಡಿದ್ದರು. ಗುತ್ತಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಹೋಗಿದೆ. ಬಿಜೆಪಿಯವರಿಗೆ ನಿಜವಾದ ಕಾಳಜಿ ಇದ್ದಿದ್ದರೆ ಖಾಯಂ ಸರಕಾರಿ ಕೆಲಸ ಕೊಡಬೇಕಿತ್ತು. ನೆಟ್ಟಾರು ನಮ್ಮ ಸಮುದಾಯಕ್ಕೆ ಸೇರಿದವರು ಅವರ ಪತ್ನಿಗೆ ಸರಕಾರಿ ಕೆಲಸ ಕೊಡಿಸುವ ಜವಾಬ್ದಾರಿ ನಮ್ಮದು ಎಂದರು.
ಮುಖಂಡರಾದ ಉಮೇಶ್ ದಂಡಕೇರಿ, ಗಣೇಶ್ ಪೂಜಾರಿ, ನೀರಜ್ ಪಾಲ್, ಪದ್ಮನಾಭ ಕೋಟ್ಯಾನ್, ಉಲ್ಲಾಸ್ ಕೋಟ್ಯಾನ್ ಉಪಸ್ಥಿತರಿದ್ದರು.