ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿನ ರಾಜಕೀಯ ಅತಂತ್ರದ ನಡುವೆಯೇ ದೇಶದಲ್ಲಿ ಮಿಲಿಟರಿ ಕಾನೂನು ಜಾರಿ ಸಾಧ್ಯತೆಯ ಪ್ರಸ್ತಾಪವನ್ನು ಪಾಕ್ ಸೇನೆ ತಳ್ಳಿಹಾಕಿದೆ. ಅಲ್ಲದೇ, ಪಾಕಿಸ್ತಾನವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿದೆ ಎಂದು ಅದು ಪ್ರತಿಪಾದಿಸಿದೆ.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಗರು ಸೇನಾ ನೆಲೆಗಳನ್ನು ಗುರಿಯಾಗಿಸಿ ಆಕ್ರಮಣ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಹತೋಟಿಗೆ ತರಲು ಮಿಲಿಟರಿ ಆಡಳಿತ ಜಾರಿ ಸಾಧ್ಯತೆ ಇದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಐಎಸ್ಪಿಆರ್ ಮಹಾನಿರ್ದೇಶಕ ಮೇಜರ್ ಜನರಲ್ ಅಹ್ಮದ್ ಶರೀಫ್ ಚೌಧರಿ, “ರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಶಕ್ತಿಯಾಗಿ ಸೇನೆ ಸದಾ ಮುಂದುವರಿಯಲಿದೆ. ಆದರೆ, ಮಿಲಿಟರಿ ಆಡಳಿತವನ್ನು ಜಾರಿಗೊಳಿಸುವ ಯಾವುದೇ ಯೋಚನೆಯೂ ಇಲ್ಲ. ಸೇನೆ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಸೇರಿದಂತೆ ಇಡೀ ಸೇನೆಯು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದೆ,” ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಇಸ್ಲಾಮಾಬಾದ್ ಹೈಕೋರ್ಟ್ನಿಂದ ಹಲವು ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಇಮ್ರಾನ್, ತಮ್ಮ ನಿವಾಸಕ್ಕೆ ವಾಪಾಸಾಗಿದ್ದಾರೆ. ಅವರ ಬಂಧನ ಖಂಡಿಸಿ ಸರ್ಕಾರಿ ಕಚೇರಿಗಳು ಹಾಗೂ ಮಿಲಿಟರಿ ನೆಲೆಗಳ ಮೇಲೆ ಇಮ್ರಾನ್ ಬೆಂಬಲಿಗರ ದಾಳಿ ಮುಂದುವರಿದಿದೆ. ದಾಳಿ ಸಂಬಂಧ, ಪಾಕಿಸ್ತಾನ ಪೊಲೀಸರು ಇದುವರೆಗೆ 540 ಮಂದಿಯನ್ನು ಬಂಧಿಸಿದ್ದಾರೆ.