Advertisement

ಹಿಗ್ಗುತ್ತಿಲ್ಲ ಮೆಟ್ರೋ ಪ್ರಯಾಣಿಕರ ಸಂಖ್ಯೆ

11:05 AM May 10, 2019 | pallavi |

ಬೆಂಗಳೂರು: ‘ನಮ್ಮ ಮೆಟ್ರೋ’ ನೇರಳೆ ಮಾರ್ಗದಲ್ಲಿ ಸಂಚರಿಸುವ ಅರ್ಧಕ್ಕರ್ಧ ರೈಲುಗಳ ಸಾಮರ್ಥ್ಯ ಈಗ ದುಪ್ಪಟ್ಟಾಗಿದೆ. ವರ್ಷಾಂತ್ಯಕ್ಕೆ ಉಳಿದವುಗಳೂ ಮೂರರಿಂದ ಆರು ಬೋಗಿಗೆ ಏರಿಕೆ ಆಗಲಿವೆ. ಆದರೆ, ಇದಕ್ಕೆ ತಕ್ಕಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆಯೇ?

Advertisement

ಉತ್ತರ- ಇಲ್ಲ! ಬೈಯಪ್ಪನಹಳ್ಳಿ- ಮೈಸೂರು ರಸ್ತೆ ಮಾರ್ಗದಲ್ಲಿ 26 ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ಪೈಕಿ ಪ್ರಸ್ತುತ 14 ರೈಲುಗಳ ಸಾಮರ್ಥ್ಯ ದುಪ್ಪಟ್ಟಾಗಿದೆ. ಈ ತಿಂಗಳು ಇನ್ನೂ ಎರಡು ಯೂನಿಟ್‌ಗಳು (ತಲಾ 3 ಬೋಗಿಗೆ 1 ಯೂನಿಟ್) ಸೇರ್ಪಡೆ ಆಗಲಿವೆ. ಆದರೆ, ಸಾಮರ್ಥ್ಯ ಹಿಗ್ಗುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಆಗುತ್ತಿಲ್ಲ. ಇದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ವನ್ನು ಚಿಂತೆಗೆ ಹಚ್ಚಿದೆ.

ಮೂರು ಬೋಗಿಗಳ ಮೆಟ್ರೋ ಇದ್ದಾಗಲೇ ಎರಡೂ ಮಾರ್ಗಗಳು ಸೇರಿ ಮೆಟ್ರೋದಲ್ಲಿ ಒಂದು ದಿನದಲ್ಲಿ ನಾಲ್ಕು ಲಕ್ಷ ಪ್ರಯಾಣಿಕರು ಸಂಚರಿಸಿದ ಉದಾಹರಣೆಗಳಿವೆ. ಆದರೆ, ಈಗ ಒಟ್ಟಾರೆ 15 ಮೆಟ್ರೋ ರೈಲು (ಒಂದು ಹಸಿರು ಮಾರ್ಗದಲ್ಲಿದೆ)ಗಳಲ್ಲಿ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ದುಪ್ಪಟ್ಟಾಗಿದೆ. ಆದಾಗ್ಯೂ ನಿತ್ಯ ಓಡಾಡುವ ಸರಾಸರಿ ಪ್ರಯಾಣಿಕರ ಸಂಖ್ಯೆ 3.7 ಲಕ್ಷ ಇದ್ದು, ದಿನದ ಆದಾಯ ಅಂದಾಜು 1.1 ಕೋಟಿ ರೂ. ಇದೆ. ಹಿಂದಿನ ಕೆಲವು ತಿಂಗಳುಗಳಿಗೆ ಹೋಲಿಸಿದರೆ, ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ 10ರಿಂದ 20 ಸಾವಿರ ಏರಿಕೆ ಆಗಿದೆ ಎಂದು ಬಿಎಂಆರ್‌ಸಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ಮೂಲಸೌಕರ್ಯ ಕೊರತೆ!: ಮೆಟ್ರೋ ಆರಂಭಗೊಂಡು ಹೆಚ್ಚು-ಕಡಿಮೆ ಎಂಟು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಇನ್ನೂ ಸಮರ್ಪಕ ಮೂಲಸೌಕರ್ಯಗಳನ್ನೂ ಕಲ್ಪಿಸಲು ಬಿಎಂಆರ್‌ಸಿಗೆ ಸಾಧ್ಯವಾಗಿಲ್ಲ. ಪ್ರಯಾಣಿಕರಿಗೆ ‘ಲಾಸ್ಟ್‌ ಮೈಲ್ ಕನೆಕ್ಟಿವಿಟಿ’ ಇಲ್ಲ. ವಾಹನಗಳ ನಿಲುಗಡೆ ಸೌಲಭ್ಯ ಸರಿಯಾಗಿಲ್ಲ. ರೈಲುಗಳ ನಡುವಿನ ಕಾರ್ಯಾಚರಣೆ ಅವಧಿಯ ಅಂತರ ಕಡಿಮೆ ಆಗಿಲ್ಲ. ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ನುರಿತ ತಂಡ ಇಲ್ಲ. ಇದೆಲ್ಲದರ ಪರಿಣಾಮ ಸಾಮರ್ಥ್ಯ ಇದ್ದರೂ, ಪ್ರಯಾಣಿಕರನ್ನು ಆಕರ್ಷಿಸುವಲ್ಲಿ ಬಿಎಂಆರ್‌ಸಿ ವಿಫ‌ಲವಾಗುತ್ತಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಸಿಸ್ಟಂ ಕೂಡ ವೃದ್ಧಿ ಆಗಲಿ; ಐಐಎಸ್ಸಿ: ಮೆಟ್ರೋ ಸಾಮರ್ಥ್ಯ ಹೆಚ್ಚಿಸುವುದು ಎಂದರೆ ಬರೀ ರೈಲು ಬೋಗಿಗಳ ಸಂಖ್ಯೆ ದುಪ್ಪಟ್ಟುಗೊಳಿಸುವುದಲ್ಲ; ಸಿಸ್ಟಂ ಸೇರಿದಂತೆ ಸೇವೆಯ ಸೌಲಭ್ಯಗಳನ್ನೂ ಉನ್ನತೀಕರಿಸುವುದಾಗಿದೆ. ಮೂರರಿಂದ ಆರು ಬೋಗಿಗಳಾಗಿದ್ದರೂ ‘ಪೀಕ್‌ ಅವರ್‌’ನಲ್ಲಿ ತುಂಬಿತುಳುಕುತ್ತಿರುತ್ತದೆ. ಉಳಿದ ಸಮಯದಲ್ಲೂ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಆಸನಗಳು ಸಿಗುವುದಿಲ್ಲ. ಹೆಚ್ಚು ದಟ್ಟಣೆ ಇರುವ ವೇಳೆ ಮೂರೂವರೆ ನಿಮಿಷಗಳಿಗೊಂದು ರೈಲು ಕಾರ್ಯಾಚರಣೆ ಮಾಡುತ್ತದೆ. ಆದರೆ, ವಿದೇಶಗಳಲ್ಲಿ ಒಂದೂವರೆ ನಿಮಿಷಕ್ಕೆ ಎಂಟು ಬೋಗಿಗಳ ಒಂದು ರೈಲು ಕಾರ್ಯಾಚರಣೆ ಮಾಡುತ್ತದೆ.

Advertisement

ಇದೇ ವೇಳೆ ಜನ ಕಾರು, ಬೈಕ್‌ಗಳನ್ನು ಬಿಟ್ಟು ಮೆಟ್ರೋದಲ್ಲಿ ಬರುವ ವಾತಾವರಣ ಕಲ್ಪಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೈಲು ಮತ್ತು ಸಿಸ್ಟಂ ಎರಡರ ಸಾಮರ್ಥ್ಯವೂ ವೃದ್ಧಿ ಆಗಬೇಕಾಗುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್‌ ವರ್ಮ ತಿಳಿಸುತ್ತಾರೆ.

150 ಬೋಗಿಗಳ ಪೂರೈಕೆಗೆ ತಿಂಗಳಷ್ಟೇ ಬಾಕಿ
2019 ಜೂನ್‌ ಅಂತ್ಯಕ್ಕೆ ಎಲ್ಲ ಮೆಟ್ರೋ ರೈಲುಗಳೂ ಮೂರರಿಂದ ಆರು ಬೋಗಿಗಳಾಗಿ ಪರಿವರ್ತನೆ ಆಗಲಿದ್ದು, ಆಗ ಪ್ರಯಾಣಿಕರ ಸಾಮರ್ಥ್ಯ ದುಪ್ಪಟ್ಟು ಆಗಲಿದೆ ಎಂದು ಬಿಎಂಆರ್‌ಸಿ ಹೇಳಿತ್ತು. ಆದರೆ, 150 ಬೋಗಿಗಳಲ್ಲಿ ಈವರೆಗೆ ಸೇರ್ಪಡೆ ಆಗಿದ್ದು ಕೇವಲ 45!

ಪಾರ್ಕಿಂಗ್‌ ಸಮರ್ಪಕವಾಗಿಲ್ಲ; ಆರೋಪ
03 ಬೋಗಿಗಳ ರೈಲು 975 ಪ್ರಯಾಣಿಕರ ಹೊತ್ತೂಯ್ಯುವ ಸಾಮರ್ಥ್ಯ (136 ಆಸನಗಳು ಸೇರಿ) ಹೊಂದಿದೆ. ಇವುಗಳ ಉದ್ದ 65.2 ಮೀ. ಪ್ರತಿ ಗಂಟೆಗೆ ಗರಿಷ್ಠ ವೇಗಮಿತಿ 80 ಕಿ.ಮೀ.

ಮೆಟ್ರೋ ಮೊದಲ ಹಂತದಲ್ಲಿ ಸ್ವಾಮಿ ವಿವೇಕಾನಂದ ರಸ್ತೆ, ಮೈಸೂರು ರಸ್ತೆ, ಹೊಸಹಳ್ಳಿಯ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣಗಳಲ್ಲಿ ಮಾತ್ರ ವಾಣಿಜ್ಯ ವಾಹನಗಳ ನಿಲುಗಡೆ ವ್ಯವಸ್ಥೆ ಇದೆ. ರಾಜಾಜಿನಗರ, ನಾಗಸಂದ್ರ ಸೇರಿದಂತೆ ಅಲ್ಲಲ್ಲಿ ಅನಧಿಕೃತ ವಾಹನಗಳ ನಿಲುಗಡೆ ಇದೆ. ಇದನ್ನು ಹೊರತುಪಡಿಸಿದರೆ, ಎಲ್ಲಿಯೂ ಪಾರ್ಕಿಂಗ್‌ ಸೌಲಭ್ಯಗಳಿಲ್ಲ.

ಇನ್ನು ಒಂದೆರಡು ಕಿ.ಮೀ. ದೂರದಲ್ಲಿರುವವರು ಮೆಟ್ರೋ ನಿಲ್ದಾಣಗಳಿಗೆ ಬರಲು ಸಮರ್ಪಕ ಬಸ್‌ ಸೌಲಭ್ಯಗಳಿಲ್ಲ. ಸಂಪಿಗೆ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ಮೈಸೂರು ರಸ್ತೆ ಒಳಗೊಂಡಂತೆ ಮೂರ್‍ನಾಲ್ಕು ಪ್ರಮುಖ ನಿಲ್ದಾಣಗಳಿಂದ ಮಾತ್ರ ಮೆಟ್ರೋ ಸಂಪರ್ಕ ಸಾರಿಗೆಗಳಿವೆ. ಇದರಿಂದ ರಾತ್ರಿ ಪಾಳಿ ಕೆಲಸ ಮುಗಿಸಿ ಬರುವವರಿಗೆ ಸಮಸ್ಯೆ ಆಗುತ್ತದೆ. ಹಾಗಾಗಿ, ಹಿಂದೇಟು ಹಾಕುತ್ತಾರೆ ಎಂದು ಪ್ರಜಾರಾಗ್‌ ಸಂಸ್ಥೆ ಸದಸ್ಯ ಸಂಜೀವ ದ್ಯಾಮಣ್ಣವರ ಅಭಿಪ್ರಾಯಪಟ್ಟರು.

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಯ ಕಂಪೆನಿಗಳು, ಬೈಕ್‌ ಟ್ಯಾಕ್ಸಿಗಳೊಂದಿಗೆ ಬಿಎಂಆರ್‌ಸಿ ಒಪ್ಪಂದ ಮಾಡಿಕೊಂಡಿದೆ. ಆದರೆ, ಅದನ್ನು ಪ್ರತಿಷ್ಠಿತರು ಮೇಲ್ಮಧ್ಯಮವರ್ಗ ಹೆಚ್ಚಾಗಿ ಬಳಸುತ್ತದೆ.

2018 ಫೆಬ್ರವರಿ 14ರಂದು ಮೂರು ಬೋಗಿಗಳ ಮೊದಲ ಯೂನಿಟ್ ಬಿಇಎಂಎಲ್ನಿಂದ ಬಿಎಂಆರ್‌ಸಿಗೆ ಹಸ್ತಾಂತರಗೊಂಡ ಸಂದರ್ಭದಲ್ಲಿ 2018ರ ಜೂನ್‌ ವೇಳೆಗೆ ಎಲ್ಲ 150 ಬೋಗಿಗಳು ಸೇರ್ಪಡೆ ಆಗಲಿವೆ ಎಂದು ಹೇಳಲಾಗಿತ್ತು.

06 ಬೋಗಿಗಳ ರೈಲು 1,718 ಪ್ರಯಾಣಿಕರ ಹೊತ್ತೂಯ್ಯುವ ಸಾಮರ್ಥ್ಯ (286 ಆಸನಗಳು ಸೇರಿ) ಹೊಂದಿದ್ದು, ಇದರ ಉದ್ದ 130.3 ಮೀ. ಪ್ರತಿ ಗಂಟೆಗೆ ಗರಿಷ್ಠ ವೇಗಮಿತಿ 80 ಕಿ.ಮೀ.

ಹಸಿರು ಮಾರ್ಗ; ವಿದ್ಯುತ್‌ ಲೋಡ್‌ ವೃದ್ಧಿಸಬೇಕು
ಹಸಿರು ಮಾರ್ಗದಲ್ಲಿ ಕೇವಲ ಒಂದು ಆರು ಬೋಗಿಗಳ ರೈಲು ಇದ್ದು, ಪೀಕ್‌ ಅವರ್‌ನಲ್ಲಿ ಮಾತ್ರ ಇದು ಕಾರ್ಯಾಚರಣೆ ಮಾಡುತ್ತದೆ. ಉಳಿದ ರೈಲುಗಳಿಗೂ ಹೆಚ್ಚುವರಿ ಬೋಗಿಗಳ ಸೇರ್ಪಡೆ ಮಾಡಬೇಕಾದರೆ, ಆ ಮಾರ್ಗದ ವಿದ್ಯುತ್‌ ಸಾಮರ್ಥ್ಯ ವೃದ್ಧಿಸಬೇಕಾಗುತ್ತದೆ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಈ ನಿಟ್ಟಿನಲ್ಲಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ನಿಗಮದ ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ಮೆಟ್ರೋ ರೈಲುಗಳ ಸಾಮರ್ಥ್ಯ ದುಪ್ಪಟ್ಟಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ. ಆದರೆ, ನಿಖರವಾಗಿ ಎಷ್ಟು ಏರಿಕೆ ಆಗಿದೆ ಎಂಬುದು ಗೊತ್ತಿಲ್ಲ. ಪ್ರಸ್ತುತ ನಿತ್ಯ ಸರಾಸರಿ 3.7 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, 1.1 ಕೋಟಿ ರೂ. ಆದಾಯ ಬರುತ್ತಿದೆ. ಹಿಂದಿನ ಹಣಕಾಸು ವರ್ಷಕ್ಕೆ ಇದನ್ನು ಹೋಲಿಕೆ ಮಾಡಲು ಬರುವುದಿಲ್ಲ. ಯಾಕೆಂದರೆ, ಮೊದಲ ಹಂತ ಪೂರ್ಣವಾಗಿ ಲೋಕಾರ್ಪಣೆ ಆಗಿದ್ದು 2017ರ ಜೂನ್‌ನಲ್ಲಿ.
●ಯಶವಂತ ಚವಾಣ್‌, ಬಿಎಂಆರ್‌ಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next