ಬೆಂಗಳೂರು: ಕೃಷಿ ಇಲಾಖೆ ಜತೆ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸದೆ ಯಥಾಸ್ಥಿತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೇಷ್ಮೆ ಸಚಿವ ಡಾ| ನಾರಾಯಣ ಗೌಡ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರಿಗೆ ಪ್ರತ ಬರೆದಿರುವ ಸಚಿವರು, ಎರಡೂ ಇಲಾಖೆಗಳು ಯಥಾಸ್ಥಿತಿ ಕಾಪಾಡುವ ಬಗ್ಗೆ ಪರಿಶೀಲನೆ ನಡೆಸಿ, ಯಥಾಸ್ಥಿತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ರಾಜ್ಯದ ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯನ್ನೇ ಅವಲಂಬಿಸಿರುವ ಲಕ್ಷಾಂತರ ರೈತ ಕುಟುಂಬಗಳು ಹಾಗೂ ಇಲಾಖೆ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಇಲಾಖೆಗಳ ವಿಲೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು.
ರೇಷ್ಮೆ ಇಲಾಖೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು. ರೇಷ್ಮೆ ಕೃಷಿ ಪದವಿ ಪಡೆದು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕು ಮತ್ತು ರೇಷ್ಮೆ ಬೆಳೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ ರೈತರ ಕಷ್ಟವನ್ನು ನಿವಾರಿಸಲು ಶ್ರಮಿಸಬೇಕು ಎಂದು ಪ್ರತ್ರದಲ್ಲಿ ಉಲ್ಲೇಖಿಸಿದ್ದಾರೆ.