Advertisement

ಉದ್ಯಾನವನದತ್ತ ಆಳುವವರಿಗಿಲ್ಲ ಧ್ಯಾನ!

02:02 PM Jun 14, 2019 | Team Udayavani |

ನವಲಗುಂದ: ಹೋರಾಟಗಳ ಮೂಲಕವೇ ರಾಜ್ಯದಲ್ಲಿ ಚಿರಪರಿಚಿತವಾದ ನವಲಗುಂದ ಪಟ್ಟಣದಲ್ಲಿ ಹೆಸರಿಗೂ ಒಂದು ಉದ್ಯಾನವನವಿಲ್ಲ. ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲ ಮಾಡಬೇಕೆಂಬ ಚಿಂತನೆ ಯಾವ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಇಲ್ಲದಿರುವುದು ವಿಷಾದಕರ ಸಂಗತಿಯಾಗಿದೆ.

Advertisement

ಇಂದು ವಾತಾವರಣ ಕಲುಷಿತಗೊಳ್ಳುತ್ತಿರುವುದರಿಂದ ಹಲವಾರು ರೋಗಗಳು ಮನುಷ್ಯನಿಗೆ ಅಂಟಿಕೊಳ್ಳುತ್ತಿವೆ. ಇದರಿಂದ ಹೊರಬರಲು, ಚಟುವಟಿಕೆಯಿಂದ ಇರಲು ಮಹಿಳೆಯರು, ವೃದ್ಧರು, ಮಕ್ಕಳು, ಸಾರ್ವಜನಿಕರಿಗೆ ವ್ಯಾಯಾಮ, ಯೋಗ, ವಾಯುವಿಹಾರದಂತಹ ದಿನನಿತ್ಯದ ಕಾಯಕ ಅವಶ್ಯ. ಆದರೆ ಪಟ್ಟಣದಲ್ಲಿ ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಒಂದು ಸುಸಜ್ಜಿತ ಉದ್ಯಾನವನ ಇಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆಳುವವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದಲ್ಲಿ ಸುಮಾರು 30 ಸಾವಿರ ಜನಸಂಖ್ಯೆಯಿದೆ. ಇಷ್ಟಿದ್ದರೂ ಒಂದು ಉದ್ಯಾನವಿಲ್ಲ. ಹೀಗಾಗಿ ವಾಯುವಿಹಾರಕ್ಕಾಗಿ ಗ್ರಾಮೀಣ ಭಾಗದ ರಸ್ತೆಗಳನ್ನು ಹಿಡಿದು ಹೋಗುವ ಪರಿಸ್ಥಿತಿಯಿದೆ. ಅಲ್ಲಿ ಮುಂಜಾನೆ ಮತ್ತು ಸಂಜೆ ವ್ಯಾಯಾಮ ಮಾಡುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ.

ಇನ್ನು ಮಕ್ಕಳು ಮನೋರಂಜನೆ ಹಾಗೂ ಆಟೋಟದಿಂದ ವಂಚಿತರಾಗಿ ಮನೆ ಹಾಗೂ ಶಾಲೆ ಪ್ರಾಂಗಣದಲ್ಲಿಯೇ ತಮ್ಮ ಸಮಯ ಕಳೆಯುವಂತಾಗಿದೆ. ಉದ್ಯಾನ ಮಾಡಿ, ಮಕ್ಕಳ ಆಟೋಟ ಸಲಕರಣೆಗಳನ್ನು ಅಳವಡಿಸಿದ್ದರೆ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಅನುಕೂಲವಾಗುತ್ತಿತ್ತು.

ಇಚ್ಛಾಶಕ್ತಿ ಕೊರತೆಗೆ ಸಾಕ್ಷಿ: ನೀಲಮ್ಮನ ಕೆರೆ ದಂಡೆ ಗಾರ್ಡನ್‌ ಮಾಡಲು ಯೋಗ್ಯ ಸ್ಥಳವಾಗಿದೆ. ಆದರೆ ಪ್ರಸ್ತುತ ಕುಡುಕರ ಹಾವಳಿ ಎಲ್ಲೆ ಮೀರಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ. ಸಿಗರೇಟ್, ಗಾಂಜಾ ಸೇದುವವರ ಸಂಖ್ಯೆಯೂ ಇಲ್ಲಿ ಹೆಚ್ಚಾಗುತ್ತೇವೆ. ತಿಂದು ಬಿಸಾಕಿದ ಮೂಳೆಗಳು ಅಲ್ಲಲ್ಲಿ ಬಿದ್ದು ದುರ್ವಾಸನೆ ಬರುತ್ತಿರುವುದರಿಂದ ಮೂಗು ಮುಚ್ಚಿಕೊಂಡು ವಾಯುವಿಹಾರ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

Advertisement

ಈ ಹಿಂದೆ ಡಿಸಿ ಆಗಿದ್ದ ದರ್ಪಣ ಜೈನ ಅವರು ನೀಲಮ್ಮನ ಕೆರೆ ಅಭಿವೃದ್ಧಿಪಡಿಸಿ ಪಕ್ಕದ ಖುಲ್ಲಾ ಜಾಗೆಯನ್ನು ಉದ್ಯಾನವನ ಮಾಡಬೇಕೆಂಬ ಯೋಜನೆ ರೂಪಿಸಿದ್ದರು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪಟ್ಟಣವು ಉದ್ಯಾನವನದಿಂದ ವಂಚಿತವಾಗಿದೆ. ಈಗ ಪುರಸಭೆಯ ಹೊಸ ಆಡಳಿತ ಬರುತ್ತಿರುವುದರಿಂದ ಅವರ ಮುಂದೆ ಪಟ್ಟಣದ ಉದ್ಯಾನವನ, ಒಳಚರಂಡಿ ಯೋಜನೆ, ಕ್ರೀಡಾಂಗಣದಂತಹ ಅನೇಕ ಅಭಿವೃದ್ಧಿ ಕೆಲಸಗಳು ಇವೆ. ಅವುಗಳಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಬೇಕಾಗಿದೆ.

•ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next