ಮೈಸೂರು : ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಸಹ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವುದು ವರುಣಾ ಕ್ಷೇತ್ರದ ಜನರು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಹೇಳಿಕೆ ನೀಡಿದ್ದಾರೆ.
ನಮ್ಮ ಮುಂದಿರುವ ಗುರಿ ಕನಿಷ್ಟ 140 ಸ್ಥಾನ ಗೆಲ್ಲಬೇಕು ಎಂಬುದು.ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂದು ಹಗಲುಗನಸು ಕಾಣುತ್ತಿದೆ. 200 ಯೂನಿಟ್ ಉಚಿತ ವಿದ್ಯುತ್ ನೀಡುವ ಕಾಂಗ್ರೆಸ್ ನ ಭರವಸೆ ಹಾಸ್ಯಾಸ್ಪದವಾಗಿದೆ. ರಾಜ್ಯದ ಜನ ಅವರಿಗೆ ಪವರ್ ಕೋಡಬೇಕಲ್ಲ. ದೇಶದಾದ್ಯಂತ ಈಗಾಗಲೇ ಅವರ ಫ್ಯೂಸ್ ಕಿತ್ತು ಹಾಕಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ಇಂತಹ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ. ಹಳೆ ಮೈಸೂರು ಭಾಗವೇ ನಮ್ಮ ಪ್ರಮುಖ ಟಾರ್ಗೆಟ್ ಆಗಿದೆ. ಇಲ್ಲಿ ಕಾಂಗ್ರೆಸ್ ಜೆಡಿಎಸ್‌ಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ವರುಣ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ನಾನು ಎಲ್ಲಿಂದ ಸ್ಪರ್ಧೆ ಮಾಡುತ್ತೇನೆ ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಫೈನಲ್ ಆಗಿಲ್ಲ. ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಸಹ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವುದು ವರುಣ ಕ್ಷೇತ್ರದ ಜನರು.ಎಲ್ಲೇ ಸ್ಪರ್ಧೆ ಮಾಡಿದರೂ ವರುಣ ಕ್ಷೇತ್ರದ ಜನರಿಗೆ ಋಣಿಯಾಗಿರುತ್ತೇನೆ ಎಂದರು.
ಮುಂದಿನ ಮುಖ್ಯಮಂತ್ರಿ ಕೂಗು
ಮೈಸೂರಿನ ಹೊರವಲಯದ ಖಾಸಗಿ ಹೋಟೆಲ್ ಮುಂಭಾಗ ವಿಜಯೇಂದ್ರ ಅವರ ಭೇಟಿಯ ವೇಳೆ ಅದ್ಧೂರಿ ಸ್ವಾಗತ ನೀಡಿದ ಬೆಂಬಲಿಗರು ಹೂಗುಚ್ಚ ನೀಡಿ, ಶಾಲು ಹೊದಿಸಿ, ಪೇಟ ತೊಡಿಸಿ ಸ್ವಾಗತಿಸಿದರು. ಈ ವೇಳೆ ”ಮುಂದಿನ ಮುಖ್ಯಮಂತ್ರಿ ವಿಜಯೇಂದ್ರಣ್ಣಗೆ ಜಯವಾಗಲಿ” ಎಂದು ಘೋಷಣೆ ಕೂಗಿದರು.
Related Articles
ಪಕ್ಷಕ್ಕೂ ಶೋಭೆ ತರುವುದಿಲ್ಲ
17 ಜನ ಶಾಸಕರನ್ನು ವೇಶ್ಯೆಯರಿಗೆ ಹೋಲಿಕೆ ಮಾಡಿ ಕ್ಷಮೆ ಕೇಳಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಕ್ಷಮೆ ಕೇಳುವುದು ದೊಡ್ಡದಲ್ಲ. ಮಾತನಾಡುವ ಮುನ್ನ ಯೋಚನೆ ಮಾಡಿ ಮಾತನಾಡಬೇಕು. ಇಂತಹ ಹೇಳಿಕೆಗಳು ಹಿರಿಯರಾದ ಬಿ.ಕೆ. ಹರಿಪ್ರಸಾದ್‌ಗೆ ಶೋಭೆ ತರುವಂತಹದ್ಧಲ್ಲ. ದೊಡ್ಡ ಮಟ್ಟದಲ್ಲಿ ಬೆಳೆದವರ ಹೇಳಿಕೆ ಅವರ ಪಕ್ಷಕ್ಕೂ ಶೋಭೆ ತರುವುದಿಲ್ಲ. ಇಂತಹ ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.