ಸಾಹೇಬ್ರು ಈಗ ಸಿಕ್ಕಾಪಟ್ಟೆ ಬ್ಯುಸಿ. ಸದ್ಯ ಇನ್ನು ಮೂರು ತಿಂಗಳು ವಾಕಿಂಗ್, ಜಿಮ್ ಅಥವಾ ವ್ಯಾಯಾಮ ಯಾವುದಕ್ಕೂ ಸಮಯವಿಲ್ಲ. ಎಲ್ಲದಕ್ಕೂ ರಜೆ ಹೇಳಿದ್ದಾರೆ. ಈಗ 24ಗಿ7 ಚುನಾವಣೆ.. ಚುನಾವಣೆ..ಚುನಾವಣೆ.
ಬೆಳ್ಳಂ ಬೆಳಗ್ಗೆ 5.30ರಿಂದಲೇ ಕಾರ್ಯಾಚರಣೆ ಆರಂಭ. “ಸಾಹೇಬ್ರ ಕಚೇರಿ’ ಆ ಹೊತ್ತಿಗೇ ಕಾರ್ಯಾಚರಿಸ ತೊಡಗುತ್ತದೆ. ನಿತ್ಯವೂ ಬೆಳಗ್ಗೆ ವಾಯು ವಿಹಾರಕ್ಕೆ ಹೋಗುವ ಮತದಾರರಿಗೆ ಸಾಹೇಬ್ರ ಕಚೇರಿಯಲ್ಲಿ ಬೆಳಕಿರುವುದು ಕಂಡು ಅಚ್ಚರಿ. “ಸಾಹೇಬ್ರು ಸಿಕ್ಕಾಪಟ್ಟೆ ಹಾರ್ಡ್ ವರ್ಕ್ ಮಾಡ್ತಾರೆ. ಮಾಡಲಿ, ಐದು ವರ್ಷಕ್ಕೊಮ್ಮೆಯಾದರೂ’ ಎಂದು ತಿಳಿ ಹಾಸ್ಯದ ಜೋಕ್ ಕಟ್ ಮಾಡಿ ಮುಂದುವರಿಯುತ್ತಾರೆ.
ಸದಾ ಸಾಹೇಬ್ರ ಕಚೇರಿ ಸಾರ್ವಜನಿಕರಿಗೆ, ಮತದಾರರಿಗೆ ತೆರೆದಿರುತ್ತದೆ. ಮಧ್ಯರಾತ್ರಿಯಲ್ಲಿ ಬಂದು, ಸಾಹೇಬ್ರೇ ಎಂದು ಸಣ್ಣಗೆ ಕೂಗಿದರೂ “ಬಂದೆ ಮಹಾಸ್ವಾಮಿಗಳೇ..’ ಎನ್ನುವ ಉತ್ತರ ಸಿಗುತ್ತದೆ. ದೇವಸ್ಥಾನಗಳಲ್ಲೂ ಇಂತಿಷ್ಟು ಅಂತ ಸಮಯ ಇದೆ. ಆದರೆ ನಮ್ಮ ಸಾಹೇಬ್ರ ದೇಗುಲಕ್ಕೆ (ಸರಕಾರಿ ಕೆಲಸವೇ ದೇವರ ಕೆಲಸ ಎಂದು ಬಗೆಯುವ ಪರಂಪರೆ ಯವರು) ಈ ಮೂರ್‍ನಾಲ್ಕು ತಿಂಗಳಿಗೆ ಇದೆಲ್ಲ ಅನ್ವಯವಾಗುವುದಿಲ್ಲ.
ಮೊನ್ನೆಯೊಂದು ಹಳ್ಳಿಯಲ್ಲಿ ನಡೆದ ಘಟನೆ. ಸಾಹೇಬ್ರು ಇರುವ ಹಳ್ಳಿಯಲ್ಲಿ ಮತದಾರನೊಬ್ಬನ ಮನೆಯಲ್ಲಿ ಮಧ್ಯರಾತ್ರಿ ಎನ್ನುವಾಗ ಹಸುವಿಗೆ ಹೊಟ್ಟೆನೋವು ಕಾಣಿಸಿಕೊಂಡತಂತೆ. ಏನು ಮಾಡಲಿಕ್ಕೂ ತೋಚದೆ ಮತದಾರ ಓಡಿ (ಸಾಹೇಬ್ರ ಕಚೇರಿ ತೆಗೆದಿರಬಹುದೆಂದೆನಿಸಿ) ಬಂದು ಸಾಹೇಬ್ರೆ ಎಂದನಂತೆ. ಮರುಕ್ಷಣವೇ ಸಾಹೇಬ್ರು “ಏನಪ್ಪಾ ನಿನ್ನ ಕಷ್ಟ’ ಎಂದು ಹಾಜರು. ಎಲ್ಲ ಕೇಳಿಸಿಕೊಂಡವರು “ದನದ ಡಾಡ್ಟ್ರುಗೆ ಫೋನ್ ಮಾಡ್ತೀನಿ ಈಗಲೇ’ ಎಂದರಂತೆ. ಅದಕ್ಕೆ ಮತದಾರ, ಅವ್ರೇ ಬಂದ್ರೆ ಒಳ್ಳೆಯದು, ದನವನ್ನೇ ಕರ್ಕೊಂಡು ಬನ್ನಿ ಎಂದರೆ ಕಷ್ಟ ಸಾಹೇಬ್ರೇ ಎಂದನಂತೆ.ಅದಕ್ಕೆ ಸಾಹೇಬ್ರು ಉತ್ಸಾಹದಿಂದ, “ಅದಕ್ಕೇನಂತೆ, ನನ್ನ ಕಾರಿಲ್ಲವಾ?’ ಎಂದು ಮೊಬೈಲ್‌ನತ್ತ ಕಣ್ಣು ನೆಟ್ಟರಂತೆ. ಚುನಾವಣೆ ಸಮಯ ಒಂದು ಮತವೂ ಗೆಲ್ಲಿಸಬಹುದು, ಸೋಲಿಸಲೂ ಬಹುದು !
ಡಾ| ಗಂಪತಿ