Advertisement

ಸರಕಾರ ಏನೇ ಮಾಡಿದರೂ ಮಂಗಳೂರು ಚಲೋ ನಿಲ್ಲಲ್ಲ: ನಳಿನ್‌

09:25 AM Sep 04, 2017 | Team Udayavani |

ಮಂಗಳೂರು: ಹಿಂದೂಗಳ ಮೇಲೆ ರಾಜ್ಯ ಕಾಂಗ್ರೆಸ್‌ನ ದಬ್ಟಾಳಿಕೆಯನ್ನು ಖಂಡಿಸಿ, ಬಿಜೆಪಿ ಯುವಮೋರ್ಚಾ ರಾಜ್ಯ ಘಟಕದ ನೇತೃತ್ವ ದಲ್ಲಿ “ಮಂಗಳೂರು ಚಲೋ ಬೈಕ್‌ ರ್ಯಾಲಿ’ ಸಂಘಟಿಸ ಲಾಗಿದೆ. ಆದರೆ ಇದನ್ನು ಹತ್ತಿಕ್ಕುವ ಪ್ರಯತ್ನವನ್ನು ಸಿದ್ದರಾಮಯ್ಯ ಸರಕಾರ ಬೇರೆ ಬೇರೆ ರೀತಿಯಲ್ಲಿ ನಡೆಸುತ್ತಿದೆ. ರಾಜ್ಯ ಸರಕಾರದ ಇಂತಹ ಯಾವುದೇ ಬೆದರಿಕೆಗಳಿಗೆ ಬಗ್ಗದೆ, ಬೈಕ್‌ರ್ಯಾಲಿಯನ್ನು ಅತ್ಯಂತ ಯಶಸ್ವಿಯಾಗಿ ಸೆ.7ರಂದು ಸಂಘಟಿಸಲಾಗುವುದು. ಒಂದು ವೇಳೆ ಪ್ರಜಾಪ್ರಭುತ್ವ ನಿಯಮ ಆಧಾರಿತ ಪ್ರತಿಭಟನೆಯನ್ನು ರಾಜ್ಯ ಸರಕಾರ ತಡೆಯಲು ಮುಂದಾದರೆ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಎಚ್ಚರಿಸಿದ್ದಾರೆ.

Advertisement

ದ.ಕ. ಬಿಜೆಪಿ ಕಚೇರಿಯಲ್ಲಿ ರವಿವಾರ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಅನುಸರಿಸುತ್ತಿರುವ ಹಿಂದೂ ವಿರೋಧಿ ನೀತಿ ಯನ್ನು ಖಂಡಿಸಿ, ಪಿಎಫ್‌ಐ-ಕೆಎಫ್‌ಡಿಯಂತಹ ಸಂಘಟನೆ ಗಳನ್ನು ನಿಷೇಧಿಸಲು ಆಗ್ರಹಿಸಿ ಸೆ.7ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಕೇಂದ್ರ ಮೈದಾನಿನಲ್ಲಿ ಬೃಹತ್‌ ಹಕ್ಕೊತ್ತಾಯ ಸಭೆಯನ್ನು ಬಿಜೆಪಿ ಯುವಮೋರ್ಚಾ ವತಿಯಿಂದ ಆಯೋಜಿಸಲಾಗಿದೆ. ಈ ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬೈಕ್‌ ರ್ಯಾಲಿ ಹಮ್ಮಿಕೊಂಡಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸ್‌ ವರಿಷ್ಠಾಧಿ ಕಾರಿ, ಜಿಲ್ಲೆಯ ಪೊಲೀಸ್‌ ವರಿಷ್ಠರಿಗೆ ಒಂದು ವಾರದ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳು ರ್ಯಾಲಿಯನ್ನು ತಡೆಯುವ ಶೈಲಿ ಯಲ್ಲಿ ಮಾತನಾಡುತ್ತಿದ್ದಾರೆ. ಮಂಗಳೂರು ಚಲೋ ನಡೆಯದಂತೆ ನೋಡಿಕೊಳ್ಳಲು ತಿಳಿಸುತ್ತಿದ್ದಾರೆ. ಇದು ನಿಜಕ್ಕೂ ಹಿಟ್ಲರ್‌ ನೀತಿಯನ್ನು ನೆನಪಿಸುತ್ತದೆ ಎಂದರು. 

ಪ್ರತಿಭಟನೆಗಾಗಿ ಕಾನೂನು ಬದ್ಧವಾಗಿ ಪೊಲೀಸ ರಲ್ಲಿ ಅನುಮತಿ ಕೇಳಿದ್ದೇವೆ. ಹೀಗಾಗಿ ರಕ್ಷಣೆ ನೀಡ ಬೇಕಾದದ್ದು ಸರಕಾರದ ಜವಾಬ್ದಾರಿ. ಆದರೆ ಮುಖ್ಯ ಮಂತ್ರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುವ ಮೂಲಕ ರ್ಯಾಲಿಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಸರಕಾರ ಯಾವುದೇ ಕ್ರಮ ಕೈಗೊಂಡರೂ ಪ್ರತಿಭಟನೆ ಮಾಡಿಯೇ ಮಾಡುತ್ತೇವೆ ಎಂದು ನಳಿನ್‌ ಸ್ಪಷ್ಟಪಡಿಸಿದರು.

ನೋಟಿಸ್‌: ತುರ್ತು ಪರಿಸ್ಥಿತಿಯ ಆಡಳಿತ
ರಾಲಿಯಲ್ಲಿ ಭಾಗವಹಿಸುವ ಕಾರ್ಯಕರ್ತರು ಉಳಿದುಕೊಳ್ಳಲು ಗೊತ್ತುಪಡಿಸಲಾಗಿದ್ದ ಸಭಾಭವನಗಳ ಮುಖ್ಯಸ್ಥರಿಗೆ ಪೊಲೀಸ್‌ ಇಲಾಖೆಯ ಮೂಲಕ ನೋಟಿಸ್‌ ನೀಡಿ ಸರಕಾರ ಬೆದರಿಕೆ ಒಡ್ಡು ತ್ತಿದೆ. ಈ ಮೂಲಕ ಹಿಂಬಾಗಿಲಿನಿಂದ ತುರ್ತು ಪರಿಸ್ಥಿತಿ ಹೇರುವ ಕೆಲಸಕ್ಕೆ ಸಿದ್ದರಾಮಯ್ಯ ಆಡಳಿತ ಮುಂದಾಗಿದೆ. ಆದರೆ ಬಿಜೆಪಿ ಇದಕ್ಕೆ ಜಗ್ಗುವುದಿಲ್ಲ. ಸುಮಾರು 10 ಸಾವಿರ ಮಂದಿ ಕಾರ್ಯಕರ್ತರು ಬೈಕ್‌ ರಾಲಿಯಲ್ಲಿ ಭಾಗವಹಿಸಲು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಭಾಭವನ ದೊರೆಯ ದಿದ್ದಲ್ಲಿ ಜಿಲ್ಲೆಯ ಪ್ರತಿ ಮನೆಯಲ್ಲಿ ಕಾರ್ಯಕರ್ತರಿಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ಸುಮಾರು ನಾಲ್ಕು ಸಾವಿರ ಮನೆಗಳನ್ನು ಇದಕ್ಕಾಗಿ ಗುರುತಿಸಲಾಗಿದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್‌ ವಿಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಮುಖಂಡರಾದ ಮೋನಪ್ಪ ಭಂಡಾರಿ, ಉಮಾನಾಥ ಕೋಟ್ಯಾನ್‌, ಕಿಶೋರ್‌ ರೈ, ಸಂದೇಶ್‌ ಶೆಟ್ಟಿ, ವೇದವ್ಯಾಸ ಕಾಮತ್‌, ಜಿತೇಂದ್ರ ಕೊಟ್ಟಾರಿ, ಹರೀಶ್‌ ಪೂಂಜ, ಬೃಜೇಶ್‌ ಚೌಟ, ಸಂಜಯ ಪ್ರಭು, ಸುದರ್ಶನ ಮೂಡಬಿದಿರೆ ಉಪಸ್ಥಿತರಿದ್ದರು.

Advertisement

ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆಗೆ ಬಿಜೆಪಿ ರಕ್ಷಣೆ ಕೊಡಲಿಲ್ಲವೇ?
“ಮಂಗಳೂರು ಚಲೋ’ ಮಾಡಲು ರಾಜ್ಯ ಸರಕಾರ ಒಪ್ಪಿಗೆ ನೀಡದಿದ್ದರೆ ಬಿಜೆಪಿಯ ಮುಂದಿನ ನಡೆ ಏನು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಳಿನ್‌ ಕುಮಾರ್‌ ಕಟೀಲು, ಸಿದ್ದರಾಮಯ್ಯ ಅವರು ಈ ಹಿಂದೆ ಬಳ್ಳಾರಿಗೆ ಪಾದಯಾತ್ರೆ ಆಯೋಜಿಸಿರಲಿಲ್ಲವೇ? ಆಗ ನಮ್ಮ ಸರಕಾರ ಅವರಿಗೆ ಭದ್ರತೆ ನೀಡಿರ ಲಿಲ್ಲವೇ? ಆಗಿನ ಭದ್ರತೆಯನ್ನು ನಮ್ಮ ಸರಕಾರ ಯಶಸ್ವಿಯಾಗಿ ನೀಡಿರಲಿಲ್ಲವೇ? ಅದೇ ರೀತಿ ನಮ್ಮ ರ್ಯಾಲಿಗೆ ಸೂಕ್ತ ಭದ್ರತೆಯನ್ನು ರಾಜ್ಯ ಸರಕಾರ ನೀಡಬೇಕು. ಬಳ್ಳಾರಿಯಲ್ಲಿ 50 ಸಾವಿರ ಮಂದಿ ಭಾಗವಹಿಸಿದರೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿತ್ತು. ಈಗ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಾಗ ತಡೆಯುವುದಾದರೆ ಇದರ ಹಿಂದಿರುವ ಹುನ್ನಾರ ಏನು ಎಂಬುದು ಸ್ಪಷ್ಟವಾಗಬೇಕು. ಪ್ರಜಾಪ್ರಭುತ್ವ ಮಾದರಿಯಲ್ಲಿ ನಾವು ಹೋರಾಟ ಮಾಡುತ್ತಿದ್ದೇವೆ. ಯು.ಟಿ.ಖಾದರ್‌ ಅವರು ಕಾನೂನು ಬಲ್ಲವರು ಎಂದು ತಿಳಿದುಕೊಂಡಿದ್ದೆ. ಆದರೆ ಅವರು ಮಾತನಾಡಿದ ಶೈಲಿ ನೋಡಿ ಅಯ್ಯೋ ಅನಿಸುತ್ತಿದೆ. ಪ್ರತಿಭಟನೆಗೆ ರಕ್ಷಣೆ ನೀಡುವುದು ಸರಕಾರ‌ದ ಜವಾಬ್ದಾರಿ. ನಮಗೆ ರಕ್ಷಣೆ ನೀಡದವರು ಸೆ.12ರ ಮೆರವಣಿಗೆಗೆ ಹೇಗೆ ರಕ್ಷಣೆ ನೀಡಲು ಸಾಧ್ಯವಾಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next