Advertisement

ತೈಲ ಬೆಲೆ ವಿಚಾರದಲ್ಲಿ ರಾಜಕೀಯ ಬೇಡ, ಜನರ ಹಿತಾಸಕ್ತಿ ಇರಲಿ

02:02 AM Apr 28, 2022 | Team Udayavani |

ಹೆಚ್ಚುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕರೆದಿದ್ದ ಮುಖ್ಯಮಂತ್ರಿಗಳ ಸಭೆ ಒಂದಷ್ಟು ಚರ್ಚೆಗೂ ಕಾರಣವಾಗಿದೆ. ಕೊರೊನಾ ಕುರಿತಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಹೇಳಿದ ಪ್ರಧಾನಿ, ಇದೇ ಸಂದರ್ಭದಲ್ಲಿ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ತೈಲದ ಮೇಲಿನ ವ್ಯಾಟ್‌ ಇಳಿಸುವಂತೆ ಮನವಿ ಮಾಡಿದರು. ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರಕಾರ ಅಬಕಾರಿ ಸುಂಕ ಇಳಿಸಿತ್ತು. ಇದಕ್ಕೆ ಪೂರಕವಾಗಿ ಕರ್ನಾಟಕ, ಗುಜರಾತ್‌ ಸೇರಿದಂತೆ ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳೂ ತೆರಿಗೆ ಕಡಿತ ಮಾಡಿದವು. ಆದರೆ ಕೆಲವು ರಾಜ್ಯಗಳು ಇಳಿಕೆ ಮಾಡಲಿಲ್ಲ. ಒಂದು ವೇಳೆ ಆಗ ಇಳಿಕೆ ಮಾಡಿದ್ದರೆ, ಜನರಿಗೆ ಒಂದಷ್ಟು ನೆಮ್ಮದಿಯಾದರೂ ಸಿಗುತ್ತಿತ್ತು. ಈಗಲಾದರೂ ಇಳಿಕೆ ಮಾಡುವಂತೆ ಕೋರಿಕೊಂಡರು.

Advertisement

ಪ್ರಧಾನಿಗಳ ಈ ಹೇಳಿಕೆ, ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್‌ಸಮರಕ್ಕೂ ಕಾರಣವಾಗಿದೆ. ಅದರಲ್ಲೂ ಪ್ರಧಾನಿ ಉಲ್ಲೇಖೀಸಿದ ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ. ಸದ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕೇಂದ್ರ ಸರಕಾರವೇ ಹೆಚ್ಚು ಅಬಕಾರಿ ಸುಂಕ ಹಾಕುತ್ತಿದೆ. ರಾಜ್ಯಗಳ ವ್ಯಾಟ್‌ ಕಡಿಮೆ ಇದೆ ಎಂದು ಅವುಗಳು ತಿರುಗೇಟು ನೀಡಿವೆ.

ಈ ಎಲ್ಲ ಚರ್ಚೆಗಳಿಗಿಂತ ಮಿಗಿಲಾಗಿ, ತೈಲ ಬೆಲೆ ವಿಚಾರದಲ್ಲಿ ಜನಸಾಮಾನ್ಯನಿಗೆ ನೆಮ್ಮದಿ ಸಿಗಬೇಕು. ಇಲ್ಲಿ ಆಡಳಿತದಲ್ಲಿರುವ ಮತ್ತು ವಿಪಕ್ಷದಲ್ಲಿರುವ ನಾಯಕರ ನಡುವಿನ ಜಗಳ ಯಾರಿಗೂ ಬೇಕಾಗಿಲ್ಲ. ಜತೆಗೆ ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಮತ್ತು ಉಳಿದ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸೇರಿದಂತೆ ಬೇರೆ ಬೇರೆ ಪಕ್ಷಗಳೂ ಮೊದಲಿಗೆ ಜನರ ಹಿತಾಸಕ್ತಿಗಾಗಿ ಚಿಂತನೆ ನಡೆಸಬೇಕು.

ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಕೊರೊನೋತ್ತರದ ಅವಧಿಯಲ್ಲಿ ಸರಕಾರಗಳಿಗೆ ಯಾವುದೇ ಅಡೆತಡೆ ಇಲ್ಲದೇ ಸಿಗುತ್ತಿರುವ ಆದಾಯದ ಮೂಲವೆಂದರೆ, ಅಬಕಾರಿ ವಲಯದ್ದು ಬಿಟ್ಟರೆ, ತೈಲದ ಮೇಲಿನ ತೆರಿಗೆಯದ್ದು. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟೇ ದುಬಾರಿಯಾಗಿದ್ದರೂ ಜನ ಅನಿವಾರ್ಯವಾಗಿ ಖರೀದಿ ಮಾಡಲೇಬೇಕಾಗುತ್ತದೆ. ಇಲ್ಲಿ ಯಾರಿಗೆ ಬೈದರೂ, ಬಿಟ್ಟರೂ ಜನರ ಗಾಡಿಯಂತೂ ಓಡಲೇಬೇಕಿದೆ. ಇದನ್ನು ಮನಗಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳು ತೈಲೋತ್ಪನ್ನಗಳ ಮೇಲೆ ಸರಾಗವಾಗಿ ತೆರಿಗೆ ಹಾಕಿ ಆದಾಯ ಪಡೆಯುತ್ತಿವೆ. ಸದ್ಯ ಕರ್ನಾಟಕದಲ್ಲೇ ಪೆಟ್ರೋಲ್‌ ಬೆಲೆ 111 ರೂ. ದಾಟಿದ್ದರೆ, ಡೀಸೆಲ್‌ ಬೆಲೆ 94 ರೂ.ಗಳಷ್ಟಿದೆ.

ಈಗ ಸದ್ಯ ಮಾಡಬೇಕಾಗಿರುವುದು ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಜತೆ ಸೇರಿ ಸಮಾಲೋಚನೆ ನಡೆಸಿ ತಮ್ಮ ತಮ್ಮ ಕಡೆಯಿಂದ ಒಂದಷ್ಟು ತೆರಿಗೆ ಕಡಿತ ಮಾಡಬೇಕು. ಕೇಂದ್ರ ಸರಕಾರ ನವೆಂಬರ್‌ನಲ್ಲಿ ನಾವು ಕಡಿತ ಮಾಡಿದ್ದೇವೆ, ಈಗ ನೀವು ಮಾಡಿ ಎಂದು ಐಪಿಒ ಹೇಳಿದರೆ ಕಷ್ಟಕರ. ರಾಜ್ಯಗಳಿಗೆ ಇದೇ ಆದಾಯದ ಮೂಲವಾಗಿರುವುದರಿಂದ ಅವುಗಳು ಹಿಂಜರಿಯಬಹುದು. ಇಲ್ಲಿ ಯಾವುದೇ ರಾಜಕೀಯ ಮಾಡದೇ ಎಲ್ಲರೂ ಒಟ್ಟಿಗೆ ಸೇರಿ ಜನರಿಗೆ ಅನುಕೂಲವಾಗುವಂಥ ನಿರ್ಧಾರ ತೆಗೆದುಕೊಳ್ಳುವುದು ವಾಸಿ. ಈ ಮೂಲಕವಾದರೂ ಕೊರೊನಾ ನಾಲ್ಕನೇ ಅಲೆಯ ಭೀತಿಯಲ್ಲಿರುವ ಜನರನ್ನು ಒಂದಷ್ಟು ನಿರಾಳರನ್ನಾಗಿಸಿದಂತಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next