ಮಲ್ಪೆ: ನಿಷ್ಠೆ, ಪ್ರಾಮಾಣಿಕತೆ, ಪ್ರೀತಿ, ವಾತ್ಸಲ್ಯಕ್ಕೆ ಶ್ವಾನಗಳು ಹೆಸರುವಾಸಿ. ಈ ನಿಟ್ಟಿನಲ್ಲಿ ಬೀದಿ ಹಾಗೂ ಯಜಮಾನನಿಲ್ಲದ ನಾಯಿಗಳ ಬದುಕುವ ಹಕ್ಕನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಬೀದಿಯಲ್ಲಿ ಎಸೆಯಲ್ಪಟ್ಟ ನಾಯಿಮರಿಗಳ ಆರೈಕೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಆರಂಭವಾದ ಮಲ್ಪೆ ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್‌ನ್ನು ಶನಿವಾರ ಮಲ್ಪೆ ಬೀಚ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ವಾನ ತೋರಿಸುವ ಪ್ರೀತಿಯ ಮುಂದೆ ಯಾವ ಹಣವೂ ದೊಡ್ಡದಲ್ಲ. ಇದೊಂದು ಮಾನವೀಯತೆ ಕೆಲಸವೂ ಹೌದು ಎಂದರು.
ಬೀದಿ ನಾಯಿಗಳ ಕುರಿತ “ನಮ್ಮ ಸ್ವಂತ, ನಮ್ಮ ಹೆಮ್ಮೆ’ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಬೀದಿ ನಾಯಿಗಳ ರಕ್ಷಣೆ, ಆರೈಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಜನರಿಗೆ ತೊಂದರೆಯಾಗದಂತೆ ಈ ನಾಯಿಗಳ ರಕ್ಷಣೆ ಕಾರ್ಯಕ್ಕೆ ಮುಂದಾಗಬೇಕು. ಹೆಚ್ಚುವರಿಯಾಗುವ ಆಹಾರ ಪದಾರ್ಥಗಳನ್ನು ಕಸದ ತೊಟ್ಟಿಗೆ ಎಸೆಯದೇ ಬೀದಿ ನಾಯಿಗಳಿಗೆ ಪೂರೈಕೆ ಮಾಡುವ ಕೆಲಸವಾಗಬೇಕು. ಈ ಮುಖೇನ ಘನತ್ಯಾಜ್ಯ ನಿರ್ಮೂಲನೆಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ನಗರಸಭಾ ಪೌರಾಯುಕ್ತ ಆನಂದ್ ಚಿ. ಕಲ್ಲೋಳಿಕರ್, ಗಣೇಶ್ ನೆರ್ಗಿ, ಸುಭಾಸ್ ಭಟ್, ಮಂತ್ರ ಟೂರಿಸಂ ಡೆವಲಪ್‌ಮೆಂಟ್ ಕಂಪೆನಿಯ ಸುದೇಶ್ ಶೆಟ್ಟಿ, ಅಲ್ಕಾ ಉಪಸ್ಥಿತರಿದ್ದರು.ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಬಬಿತಾ ಮಧ್ವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ಶೆಟ್ಟಿ ಸ್ವಾಗತಿಸಿದರು. ಶ್ರದ್ಧಾ ನಿರೂಪಿಸಿದರು.