Advertisement

ಮಿತಿ ಮೀರುತ್ತಿದೆಯೇಕೆ ಮೊಬೈಲ್‌ ಮೋಹ?

12:30 AM Sep 30, 2018 | |

ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಸಭೆ ಸಮಾರಂಭಕ್ಕೆ ಹೋದರೆ ಅಲ್ಲಿ ಹೆಚ್ಚಿನ ಮಕ್ಕಳ ಕೈಯಲ್ಲಿ ಮೊಬೈಲನ್ನು ನೋಡುತ್ತೇವೆ. ನಾವು ನಮ್ಮ ಮಕ್ಕಳಿಗೆ ಮೊಬೈಲ್‌ ಕೊಡುವುದಿಲ್ಲ ಎಂದು ಮೊದಲಿಗೆ ತಾಕೀತು ಮಾಡಿದ್ದರೂ ಅಲ್ಲಿರುವ ಇತರ ಮಕ್ಕಳನ್ನು ನೋಡಿ ಇವರು ಮಾಡುವ ಕಿರಿಕಿರಿ ತಾಳಲಾಗದೇ ನಾವೂ ನಮ್ಮ ಮೊಬೈಲ್‌ನ್ನು ಕೊಟ್ಟು ಬಿಡುತ್ತೇವೆ. ಹಿಂದೆಲ್ಲ ಸಮಾರಂಭಗ ಳೆಂದರೆ ಅಲ್ಲಲ್ಲಿ ಗುಂಪುಗೂಡಿ ಆಡುತ್ತಿರುವ ಮಕ್ಕಳ ಹಿಂಡು ಕಾಣುತ್ತಿತ್ತು. ಆದರೆ ಈಗ ಒಬ್ಬರೇ ತಲೆ ಮೇಲೆತ್ತದೆ ಮೊಬೈಲ್‌ನಲ್ಲಿ ಮುಳುಗಿರುವ ಏಕವೀರ ಪರಾಕ್ರಮಿ ಮಕ್ಕಳು ಕಾಣಸಿಗುತ್ತಾರೆ. 

Advertisement

ಶಾಲಾ ಮಕ್ಕಳ ಮೊಬೈಲ…-ಸಾಮಾಜಿಕ ಜಾಲತಾಣ ಮೋಹ ತಪ್ಪಿಸಲು ಹಾಗೂ ಈ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹೊಸ ನಿಯಮ ರಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಕೆಲದಿನಗಳ ಹಿಂದೆ ವರದಿಯಾಗಿತ್ತು. ನಿಜಕ್ಕೂ ವಿದ್ಯಾರ್ಥಿಗಳ ಮೊಬೈಲ್‌ ಮೋಹವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಬಂದಿದೆ. ಕೆಲವರ್ಷಗಳ ಹಿಂದಾದರೆ ಮಕ್ಕಳ ಕೈಯಲ್ಲಿ ಮೊಬೈಲ್‌ ಕಂಡರೆ ಏನೋ ಗೇಮ್‌ ಆಡುತ್ತಿದ್ದಾರೆ ಎಂದು ಸುಮ್ಮನಿರಬಹುದಿತ್ತು. ಆದರೆ ಈಗ ಸ್ಮಾರ್ಟ್‌ ಫೋನ್‌ ಮತ್ತು ಮೊಬೈಲ್‌ ಇಂಟರ್ನೆಟ್‌ನಿಂದಾಗಿ ಮಕ್ಕಳು ಮೊಬೈಲ್‌ ಹಿಡಿದುಕೊಂಡು ಏನು ಮಾಡುತ್ತಿ¨ªಾರೆ ಎಂದು ಎಚ್ಚರಿಕೆಯಿಂದ ಗಮನಿಸಲೇಬೇಕಾಗಿದೆ. ಮೊಬೈಲ್‌ ಗೇಮ್‌ಗಳಿಂದಾಗಿ ಪ್ರಾಣ ಕಳೆದುಕೊಂಡಿರುವ ಮಕ್ಕಳ ಕತೆಯನ್ನು ನಾವು ಓದಿದ್ದೇವೆ. ಕಾಲೇಜಿನಲ್ಲಿ ಮೊಬೈಲ್‌ ನಿಷೇಧ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬೇಕು. ಆದರೆ ಕೇವಲ ಇದೊಂದರಿಂದ ಮಾತ್ರ ಏನೂ ಸಾಧಿಸಿದಂತಾಗುವುದಿಲ್ಲ. ಪೋಷಕರಿಗೂ ಈ ಬಗ್ಗೆ ತಿಳುವಳಿಕೆ ನೀಡುವುದು ಅತ್ಯಗತ್ಯ. 

ಈ ವಿಚಾರದ ಬಗ್ಗೆ ಇರುವ ಇನ್ನೊಂದು ವಾದವೆಂದರೆ ಸ್ಮಾರ್ಟ್‌ ಪೋನ್‌ಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿ ಎಂದು. ಮಕ್ಕಳು ಪಠ್ಯ ವಿಷಯದ ಬಗ್ಗೆ ತಮಗಿರುವ ಸಂದೇಹಗಳನ್ನು ವಿಕಿಪೀಡಿಯ ಅಥವಾ ಇತರ ಜಾಲತಾಣಕ್ಕೆ ಹೋಗಿ ಪರಿಹರಿಸಿಕೊಳ್ಳಬಹುದು ಎಂದು. ಆದರೆ ಈ ರೀತಿ ಜಾಲತಾಣಗಳ ಸದುಪಯೋಗ ಮಾಡಿಕೊಳ್ಳುವವರು ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ. 

ಮಕ್ಕಳಿಗೆ ಮೊಬೈಲ್‌ ನೀಡುವುದರ ಬಗ್ಗೆ ಇರುವ ಮತ್ತೂಂದು ವಾದವೆಂದರೆ ಅವರು ಶಾಲೆ, ಅನಂತರದ ಟ್ಯೂಷನ್‌ ಎಲ್ಲ ಮುಗಿಸಿ ಮನೆಗೆ ಬರುವಾಗ ಕತ್ತಲೆಯಾಗುತ್ತದೆ ಅವರು ಎಲ್ಲಿದ್ದಾರೆಂದು ತಿಳಿಯಲು ಮೊಬೈಲ್‌ ಬೇಕಾಗುತ್ತದೆ ಎಂದು. ಆದರೆ ಇದರಿಂದ ಮಕ್ಕಳು ತಾವು ಎಲ್ಲಿದ್ದಾರೆಂದು ಹೇಳುತ್ತಿರುವುದು ಸತ್ಯವೆಂದು ಹೇಳಲಾಗದು. ಹಾಗೂ ಈ ಅಗತ್ಯಕ್ಕೆ ಸ್ಮಾರ್ಟ್‌ ಪೋನ್‌ ಬೇಕಾಗಿಲ್ಲ, ಒಂದು ಮಾಮೂಲು ಹ್ಯಾಂಡ್‌ ಸೆಟ್‌ ಸಾಕಾಗುತ್ತದೆ. 

ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಸಭೆ ಸಮಾರಂಭಕ್ಕೆ ಹೋದರೆ ಅಲ್ಲಿ ಹೆಚ್ಚಿನ ಮಕ್ಕಳ ಕೈಯಲ್ಲಿ ಮೊಬೈಲನ್ನು ನೋಡುತ್ತೇವೆ. ನಾವು ನಮ್ಮ ಮಕ್ಕಳಿಗೆ ಮೊಬೈಲ್‌ ಕೊಡುವುದಿಲ್ಲ ಎಂದು ಮೊದಲಿಗೆ ತಾಕೀತು ಮಾಡಿದ್ದರೂ ಅಲ್ಲಿರುವ ಇತರ ಮಕ್ಕಳನ್ನು ನೋಡಿ ಇವರು ಮಾಡುವ ಕಿರಿಕಿರಿ ತಾಳಲಾಗದೇ ನಾವೂ ನಮ್ಮ ಮೊಬೈಲ್‌ನ್ನು ಕೊಟ್ಟುಬಿಡುತ್ತೇವೆ. ಹಿಂದೆಲ್ಲ ಸಮಾರಂಭಗಳೆಂದರೆ ಅಲ್ಲಲ್ಲಿ ಗುಂಪುಗೂಡಿ ಆಡುತ್ತಿರುವ ಮಕ್ಕಳ ಹಿಂಡು ಕಾಣುತ್ತಿತ್ತು. ಆದರೆ ಈಗ ಒಬ್ಬರೇ ತಲೆ ಮೇಲೆತ್ತದೆ ಮೊಬೈಲ್‌ನಲ್ಲಿ ಮುಳುಗಿರುವ ಏಕವೀರ ಪರಾಕ್ರಮಿ ಮಕ್ಕಳು ಕಾಣಸಿಗುತ್ತಾರೆ. 

Advertisement

ಈ ಮೊಬೈಲ್‌ ಇಂಟರ್ನೆಟ್‌ನಿಂದಾಗಿ ಮಕ್ಕಳಲ್ಲಿ ಪರಿಶ್ರಮಪಡುವ ಅಭ್ಯಾಸ ಕಡಿಮೆ ಆಗುತ್ತಿದೆ. ಮೊನ್ನೆ ಶಾಲಾ ಟೀಚರ್‌ ಆಗಿರುವ ಸ್ನೇಹಿತೆಯೊಬ್ಬಳು ಹೇಳುತ್ತಿದ್ದರು- ಶಬ್ದಕೋಶ ನೋಡಿ ಹೊಸಪದಗಳ ಅರ್ಥ ಬರೆದುಕೊಂಡು ಬನ್ನಿ ಎಂದು ಮಕ್ಕಳಿಗೆ ಹೇಳಿದಾಗ ಅರ್ಧಕ್ಕಿಂತ ಹೆಚ್ಚಿನ ಮಕ್ಕಳು ಮೊಬೈಲ್‌ ಡಿಕ್ಷನರಿಯಲ್ಲೇ ಆ ಕೆಲಸವನ್ನು ಮಾಡಿ ಮುಗಿಸಿದ್ದಾರೆ ಎಂದು. ಶಬ್ದಕೋಶ ನೋಡುವುದೂ ಒಂದು ಕಲೆ. ಅದರಲ್ಲಿ ಒಂದು ಪದ ಹುಡುಕುವಾಗ ನಾವು ನಮ್ಮ ತಲೆಗೆ ಬಹಳಷ್ಟು ಕೆಲಸ ಕೊಡಬೇಕಾಗುತ್ತದೆ.ಆಗಲೇ ನಮ್ಮ ಮೆದುಳು ಚುರುಕಾಗುವುದು.ಆ ಒಂದು ಪದ ಹುಡುಕುವ ಪ್ರಕ್ರಿಯೆಯಲ್ಲಿ ದಾರಿಯಲ್ಲಿ ಸಿಗುವ ಇತರ ಕೆಲವು ಪದಗಳ ಅರ್ಥವೂ ತಲೆಯೊಳಗೆ ಇಳಿದುಬಿಡುತ್ತಿತ್ತು. ಆದರೆ ಈಗ ಮೊಬೈಲ್‌ನಲ್ಲಿ ಎರಡಕ್ಷರ ಟೈಪ್‌ ಮಾಡಿದರೆ ಸಾಕು ಪೂರ್ತಿ ಪದವನ್ನೇ ಅದು ತೋರಿಸುತ್ತದೆ. ಅರ್ಥ ಬಿಡಿ, ಅದರ ಸ್ಪೆಲ್ಲಿಂಗ್‌ ಕೂಡಾ ನೆನಪಿನಲ್ಲಿಡಬೇಕಾಗಿಲ್ಲ. ಕಷ್ಟಪಡದೇ ಸಿಕ್ಕಿದ್ದರ ಆಯಸ್ಸು ಕಡಿಮೆಯಂತೆ. ಈ ರೀತಿ ಸುಲಭದಲ್ಲಿ ಪಡೆದ ಪದಗಳ ಅರ್ಥವು ಮಕ್ಕಳಿಗೆ ಅಷ್ಟೇ ಬೇಗದಲ್ಲಿ ಮರೆತು ಹೋಗುತ್ತದೆ. ಇನ್ನು ಮಕ್ಕಳು ಸ್ವಲ್ಪ ಕೆಲಸ ಮಾಡಲಿ ಎಂದು ಕೊಡುವ ತರಹೇವಾರಿ ಪ್ರೊಜೆಕ್ಟ್ ವರ್ಕ್‌ಗಳು, ಸೀದಾ ನೆಟ್‌ನಿಂದ ಡೌನ್‌ಲೋಡ್‌ ಮಾಡುವುದರೊಂದಿಗೆ ಮುಗಿದು ಹೋಗುತ್ತದೆ. 

 ಕಾಲೇಜು ವಿದ್ಯಾರ್ಥಿಗಳದ್ದು ಬೇರೆಯೇ ಕತೆ. ತರಗತಿಗಳಿಗೆ ನಿಯಮಿತವಾಗಿ ಹಾಜರಾಗದೆ, ಆ ದಿನದ ನೋಟ್ಸ್‌ಗಳನ್ನು ಸ್ನೇಹಿತನ ಪುಸ್ತಕದಿಂದ ಫೋಟೊ ತೆಗೆದು ಸೇವ್‌ ಮಾಡಿಟ್ಟುಕೊಂಡು, ಪರೀಕ್ಷೆಯ ವೇಳೆ ಅದನ್ನು ಮೊಬೈಲ್‌ನಲ್ಲೇ ಓದುತ್ತಾರೆ. ಬರೆಯುವ ಕಷ್ಟವನ್ನೇ ತೆಗೆದುಕೊಳ್ಳುವುದಿಲ್ಲ. ಹೀಗೆ ಕಲಿಯುವಿಕೆಯ ಪ್ರಮುಖ ಅಂಗವಾದ ಬರಹ ಮೂಲೆಗುಂಪಾಗುತ್ತಿದೆ. ನೀವು ಈಗ ಯಾವುದೇ ಕಾಲೇಜಿನ ಹತ್ತಿರದ ಬಸ್‌ಸ್ಟಾಂಡ್‌ನ್ನು ಗಮನಿಸಿ. ತಲೆ ಎತ್ತಿ ಠೀವಿಯಿಂದ ನಡೆಯಬೇಕಾದ ನಮ್ಮ ಯುವಜನಾಂಗವು ಮೊಬೈಲ್‌ ನೋಡುತ್ತಾ ತಲೆ ಕೆಳ ಹಾಕಿ ಕುಳಿತಿರುತ್ತದೆ. ಅವರ ಮಾತುಕತೆಯೂ ಮೊಬೈಲ್‌ ಸಂದೇಶಗಳ ಕುರಿತೇ ಆಗಿರುತ್ತದೆ. ಇವೆಲ್ಲಾ ನೋಡಿದಾಗ ಎಲ್ಲೋ ಏನೋ ಸರಿಯಾಗಿಲ್ಲ ಎಂದೆನಿಸುತ್ತದೆ. 

ಈಗಿನ ಮಕ್ಕಳಿಗೆ ಬಹಳ ಬೇಗ ಬೋರ್‌ ಆಗುತ್ತದೆ. ಹೊಸತನ್ನು ಕಲಿಯುವುದು,ಆಟ, ತಿರುಗಾಟ, ಪುಸ್ತಕಗಳನ್ನು ಓದುವುದು, ಜನರ ಜೊತೆ ಬೆರೆಯುವುದು, ಸಮಾರಂಭಗಳಿಗೆ ಹೋಗುವುದು ಎಲ್ಲವೂ ಬೋರ್‌. ಅದೇ ಕೈಗೆ ಮೊಬೈಲ್‌ ಕೊಡಿ, ಇಡೀ ದಿನ ಬೇಕಾದರೆ ಬೋರ್‌ ಎನ್ನದೆ ಅದರ ಜೊತೆ ಕಾಲ ಕಳೆಯುತ್ತಾರೆ. ನಿಜಕ್ಕೂ ಇದು ಒಂದು ಕಳವಳಕಾರಿ ಸಂಗತಿ. ಮಕ್ಕಳಲ್ಲಿ ಕ್ರಿಯಾಶೀಲತೆಯೆ ನಶಿಸಿಹೋಗುತ್ತಿದೆ. ಚಿಕ್ಕಚಿಕ್ಕ ವಿಷಯಗಳಲ್ಲಿನ ಖುಷಿಯನ್ನು ಅವರು ಕಾಣುತ್ತಿಲ್ಲ. ಪ್ರಕೃತಿಯೊಡನೆ ಒಂದಾಗಿ ಬೆಳೆಯುತ್ತಿಲ್ಲ. ಮುಂದೆ ಇದು ಅವರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು.

ಆದರಿಂದ ಎಲ್ಲರೂ ಈ ಮೊಬೈಲ್‌ ಪಿಡುಗಿನ ಬಗ್ಗೆ ಯೋಚಿಸಬೇಕಾಗಿದೆ. ಮಕ್ಕಳಿಗೆ, ಪೋಷಕರಿಗೆ ಮೊಬೈಲ್‌ ನಿಂದಾಗುವ ಹಾನಿಯ ಬಗ್ಗೆ ತಿಳಿಸಿಕೊಡಬೇಕಾಗಿದೆ. ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕಾದರೆ ಮೊದಲು ಪೋಷಕರು ಅದರ ಗೀಳಿನಿಂದ ಹೊರಬರಬೇಕಾಗಿದೆ. ಅವರು ಆದಷ್ಟು ಮಕ್ಕಳ ಮುಂದೆ ಮೊಬೈಲ್‌ ಬಳಕೆ ಕಡಿಮೆ ಮಾಡಬೇಕು. 

ಮೊಬೈಲ್‌ ಇಲ್ಲದೆಯೂ ಜೀವನ ನಡೆಸಬಹುದು ಎಂಬ ಅರಿವು ಮಕ್ಕಳಲ್ಲಿ ಮೂಡಿಸಬೇಕು. ಶಾಲೆ ಕಾಲೇಜುಗಳಲ್ಲಿ ಮೊಬೈಲ್‌ ನಿಷೇಧದ ಬಗ್ಗೆ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಬೇಕು. ಒಟ್ಟಿನಲ್ಲಿ ಮಕ್ಕಳನ್ನು ಮೊಬೈಲ್‌ ಮೋಹದಿಂದ ಬಿಡಿಸಿ, ಮೊಬೈಲ್‌ ಹೊರತಾದ ಸುಂದರ ಲೋಕಕ್ಕೆ ಅವರಾಗಿ ಅವರೇ ಬರುವಂತೆ ಮಾಡಬೇಕಾಗಿದೆ.

ಶಾಂತಲಾ ಎನ್‌. ಹೆಗ್ಡೆ 

Advertisement

Udayavani is now on Telegram. Click here to join our channel and stay updated with the latest news.

Next