Advertisement

ಮಕ್ಕಳ್‌ ನೀಥಿ ಮಯ್ಯಂ: ಇದು ಕಮಲ್‌ ಪಕ್ಷ

06:00 AM Feb 22, 2018 | |

ಮದುರೈ: “ಜನತೆಗೆ ನ್ಯಾಯ ಕೊಡುವ ಕೇಂದ್ರ’ ಎಂಬ ಅರ್ಥ ಸೂಚಿಸುವ ಪಕ್ಷ, “ಏಕತೆಯಲ್ಲಿನ ಶಕ್ತಿ’ಯನ್ನು ಬಿಂಬಿಸುವ ಧ್ವಜ.

Advertisement

ಬುಧವಾರ ರಾತ್ರಿ ಬಹುಭಾಷಾ ನಟ ಕಮಲ್‌ ಹಾಸನ್‌ ಅವರ ಹೊಸ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ತಮಿಳುನಾಡಿನ ರಾಜಕೀಯ ರಾಜಧಾನಿ ಎಂದೇ ಹೆಸರಾದ ಮಧುರೈನಲ್ಲಿ ಕಮಲ್‌ ಹಾಸನ್‌ ಅವರು ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ್ದು, “ಮಕ್ಕಳ್‌ ನೀಧಿ ಮಯ್ಯಂ'(ಜನತಾ ನ್ಯಾಯ ಕೇಂದ್ರ) ಎಂಬುದೇ ತಮ್ಮ ಪಕ್ಷದ ಹೆಸರು ಎಂದು ಘೋಷಿಸಿದ್ದಾರೆ. ಜತೆಗೆ, ಏಕತೆಯಲ್ಲಿನ ಶಕ್ತಿಯನ್ನು ಪ್ರತಿಬಿಂಬಿ ಸು  ವಂಥ ಪಕ್ಷದ ಧ್ವಜವನ್ನೂ ಅನಾವರಣಗೊಳಿಸಿದ್ದಾರೆ. 

ಪಕ್ಷದ ಹೆಸರು ಘೋಷಿಸುವ ಮುನ್ನ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಕಮಲ್‌, “ನಾನು ನಿಮ್ಮ ನಾಯಕನಲ್ಲ, ನಿಮ್ಮಲ್ಲಿರುವ ಸಾಧನ. ಇಲ್ಲಿ ಸೇರಿರುವವರೆಲ್ಲರೂ ನಾಯಕರೇ’ ಎಂದು ಹೇಳಿದರು. ಜತೆಗೆ, ಪಕ್ಷದ ಘೋಷಣೆಯು ಮುಂಬರುವ ಜನಾಡಳಿತದ ಮೊದಲ ಹೆಜ್ಜೆ ಎಂದು ಘೋಷಿಸುತ್ತಿದ್ದಂತೆ, ಅವರ ಅಭಿಮಾನಿಗಳ ಉದ್ಘೋಷಗಳು ಮುಗಿಲು ಮುಟ್ಟಿತ್ತು. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಕಲಾಂ ಮನೆಗೆ ಭೇಟಿ: ಇದಕ್ಕೂ ಮುನ್ನ ಬೆಳಗ್ಗೆ ಕಮಲ್‌ ರಾಮೇಶ್ವರದಲ್ಲಿ ದಿವಂಗತ ಎಪಿಜೆ ಅಬ್ದುಲ್‌ ಕಲಾಂ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕಲಾಂ ಸಹೋದರ ಮೊಹಮ್ಮದ್‌ ಮುತ್ತುಮೀರನ್‌ ಲಬ್ಬೆ„ ಮರೈಕ್ಕಯಾರ್‌ ಅವರ ಆಶೀರ್ವಾದ ಪಡೆದರು. ನಂತರ ಕಲಾಂ ಕಲಿತ ಸರ್ಕಾರಿ ಶಾಲೆಗೆ ತೆರಳಲು ಯತ್ನಿಸಿದ ರಾದರೂ, ಅದಕ್ಕೆ ಜಿಲ್ಲಾಡಳಿತ ಅನುಮತಿ ನೀಡಲಿಲ್ಲ. ಬಳಿಕ ರಾಮೇಶ್ವರದಲ್ಲಿ ಮೀನುಗಾರರನ್ನು ಉದ್ದೇಶಿಸಿ ಮಾತನಾಡಿದರು. ನೆರೆದಿದ್ದ ಅವರ ಬೆಂಬಲಿಗರು, “ನಮ್ಮ ಭವಿಷ್ಯದ ಸಿಎಂ’, “ನಾಳೆಯು ನಮ್ಮದೇ’ ಎಂದು ಘೋಷಣೆ ಕೂಗಿದ್ದೂ ಕೇಳಿಬಂತು.

ಹೇಗಿದೆ ಧ್ವಜ?
ಧ್ವಜವು ಬಿಳಿ ಬಣ್ಣದ ಹಿನ್ನೆಲೆಯನ್ನು ಹೊಂದಿದೆ. ಅದರಲ್ಲಿ 6 ಕೈಗಳು ಒಂದಕ್ಕೊಂದು ಪರಸ್ಪರ ಜೋಡಿಸಿಕೊಂಡಂತಿದೆ. ಈ ಪೈಕಿ ಮೂರು ಕೈಗಳಿಗೆ ಕೆಂಪು ಬಣ್ಣದ ಛಾಯೆ ಯಿದ್ದು, ಉಳಿದವು ಬಿಳಿ ಬಣ್ಣ ಹೊಂದಿವೆ. ಈ ಕೈಗಳ ಮಧ್ಯೆ ಕಪ್ಪುಬಣ್ಣವಿದ್ದು, ಅಲ್ಲೊಂದು ನಕ್ಷತ್ರದ ಚಿತ್ರವಿದೆ. ತಮಿಳುನಾಡಿನಲ್ಲಿ ಕಪ್ಪು ಮತ್ತು ಬಿಳಿ ಬಣ್ಣಕ್ಕೆ ರಾಜಕೀಯ ಪ್ರಾಮುಖ್ಯತೆಯಿದ್ದು, ಇಲ್ಲಿನ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಧ್ವಜಗಳಲ್ಲೂ ಇದು ಕಾಣಸಿಗುತ್ತದೆ. ಧ್ವಜದಲ್ಲಿ ಕಾಣಸಿಗುವ ಛಾಯೆಯು ದ್ರಾವಿಡ ಸಿದ್ಧಾಂತವನ್ನು ಸೂಚಿಸುತ್ತದೆ.

Advertisement

ತಮಿಳುನಾಡಿನಲ್ಲಿ  ಎಐಎಡಿಎಂಕೆ, ಡಿಎಂಕೆ ಪ್ರಾಬಲ್ಯವೇ ಹೆಚ್ಚಿದೆ. ಈ ಪಕ್ಷಗಳೊಂದಿಗೆ ವಿಲೀನ ಆಗುವುದರ ಹೊರತಾಗಿ, ಕಮಲ್‌ ಅವರ ರಾಜಕೀಯ ಪಕ್ಷಕ್ಕೆ ರಾಜ್ಯದಲ್ಲಿ ಬೆಳೆಯಲು ಅವಕಾಶವಿಲ್ಲ.
– ವೀರಪ್ಪ ಮೊಲಿ, ಕಾಂಗ್ರೆಸ್‌ ನಾಯಕ

ಇಂದಿಲ್ಲಿ ಸೇರಿರುವ ಜನರ ಸಂಖ್ಯೆ ನೋಡಿದರೆ, ಖಂಡಿತಾ ಕಮಲ್‌ರ ಪಕ್ಷವು ನಮ್ಮ ಆಮ್‌ ಆದ್ಮಿ ಪಾರ್ಟಿ ದಿಲ್ಲಿಯಲ್ಲಿ ಸೃಷ್ಟಿಸಿದ ದಾಖಲೆಯನ್ನೇ ಮುರಿಯುವ ಸಾಧ್ಯತೆಯಿದೆ.
– ಅರವಿಂದ ಕೇಜ್ರಿವಾಲ್‌, ದಿಲ್ಲಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next