ಶಿವಮೊಗ್ಗ: ಭಾರತ್ ಜೋಡೋ ಯಾತ್ರೆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಅವರೊಬ್ಬರು ಈ ತುದಿಯಿಂದ ಆ ತುದಿಗೆ ಹೋಗಿ ಬಂದರು. ಆದರೆ ಅದರಿಂದ ರಾಜಕೀಯ ಲಾಭ ಆಗುತ್ತದೆ ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ ಕಾಂಗ್ರೆಸ್ನಲ್ಲಿ ನಾಯಕರೇ ಇಲ್ಲ. ರಾಹುಲ್ ಗಾಂಧಿ ನಾಯಕರು ಎಂದು ಯಾರು ಒಪ್ಪಿಕೊಳ್ಳುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬಂದಿದ್ದ ಅಮಿತ್ ಶಾ ಸುದೀರ್ಘ ಚರ್ಚೆ ನಡೆಸಿದ್ದಾರೆ. 140 ಸ್ಥಾನ ಗೆಲ್ಲಲು ತಂತ್ರಗಾರಿಕೆ ಹೆಣೆಯಲಾಗಿದೆ. ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಲು ಚಿಂತನೆ ನಡೆದಿದೆ. 140 ಸ್ಥಾನ ಪಡೆದು ಯಾರ ಸ್ವತಂತ್ರ ಸರಕಾರ ರಚಿಸುತ್ತೇವೆ ಎಂಬ ವಿಶ್ವಾಸ ಇದೆ. ಎಲ್ಲರೂ ಪ್ರವಾಸ ಆರಂಭಿಸಿದ್ದೇವೆ. ಅ ಧಿವೇಶನದ ಬಳಿಕ ಮತ್ತೆ ಎಲ್ಲ ಕಡೆಗೂ ಹೋಗುತ್ತೇವೆ. ಹಗಲುಗನಸು ಕಾಣುವವರ ಬಗ್ಗೆ ನಾವೇನೂ ಹೇಳುವುದಿಲ್ಲ.
ಮಂಡ್ಯ, ಮೈಸೂರು ಭಾಗದಲ್ಲೂ ಓಡಾಟ ಮಾಡಲಾಗುತ್ತಿದೆ. ಎಲ್ಲರನ್ನೂ ಸಂಪರ್ಕ ಮಾಡುತ್ತಿದ್ದೇವೆ. ಅನೇಕ ಮುಖಂಡರು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಸುಮಲತಾ ಸೇರ್ಪಡೆ ಬಗ್ಗೆ ನಾವ್ಯಾರೂ ಚರ್ಚಿಸಿಲ್ಲ. ಅವರ ಮನಸ್ಸಲ್ಲಿ ಏನಿದೆಯೋ ಗೊತ್ತಿಲ್ಲ. ಅವರ ಬೆಂಬಲಿಗರಲ್ಲಿ ಬಹುತೇಕರು ಬಿಜೆಪಿಗೆ ಬರುತ್ತಿದ್ದಾರೆ. ಅದರ ಸೂಚನೆ ಏನು ಎಂದು ನೀವೇ ತಿಳಿದುಕೊಳ್ಳಬೇಕು ಎಂದರು.