Advertisement

ತಾಲೂಕು ಕೇಂದ್ರವಾದರೂ ಕಡಬಕ್ಕಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ

10:39 PM Oct 18, 2021 | Team Udayavani |

ಕಡಬ: ನೂತನ ಕಡಬ ತಾಲೂಕು ಉದ್ಘಾಟನೆಗೊಂಡು 3 ವರ್ಷಗಳಾದರೂ ಕಡಬದಲ್ಲಿ ತೆರೆದುಕೊಂಡಿಲ್ಲ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ. ಇದರಿಂದಾಗಿ ಶಿಕ್ಷಕರು ಹಾಗೂ ಸಾರ್ವಜನಿಕರು ಶಿಕ್ಷಣ ಇಲಾಖೆಯ ಅಗತ್ಯ ಕೆಲಸಗಳಿಗೆ ಇನ್ನೂ ಪುತ್ತೂರು ಮತ್ತು ಸುಳ್ಯ ತಾಲೂಕು ಕೇಂದ್ರಗಳನ್ನೇ ಅವಲಂಬಿಸುವಂತಾಗಿದೆ.

Advertisement

ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿದ್ದ ಕಡಬ ಹೋಬಳಿ ತಾಲೂಕಾಗಿ ಮೇಲ್ದರ್ಜೆ ಗೇರಿದ ಬಳಿಕ ಸುಳ್ಯ ಮತ್ತು ಪುತ್ತೂರು ತಾಲೂಕಿನ ಕೆಲವು ಗ್ರಾಮಗಳು ನೂತನ ತಾಲೂಕಿಗೆ ಒಳಪಟ್ಟವು. ಸ್ವತಂತ್ರ ತಾಲೂಕು ರಚನೆಗೊಂಡರೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇನ್ನೂ ಆರಂಭ ವಾಗಿಲ್ಲ ಎನ್ನುವ ಅಳಲು ಇಲ್ಲಿನ ಶಿಕ್ಷಕರು ಹಾಗೂ ಸಾರ್ವಜನಿಕರದ್ದಾಗಿದೆ. ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆರಂಭಿಸುವಂತೆ ರಾಜ್ಯ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಸಂಬಂಧಪಟ್ಟವರನ್ನು ನಿರಂತರವಾಗಿ ಒತ್ತಾಯಿಸುತ್ತಲೇ ಬರುತ್ತಿದೆ.

ಅಲೆದಾಟದ ಪ್ರಯಾಸ
ಕಡಬ ತಾಲೂಕಿನ ವಿದ್ಯಾರ್ಥಿಗಳು ಎಸೆಸೆಲ್ಸಿ ತೇರ್ಗಡೆಯಾದ ಬಳಿಕ ಗ್ರಾಮೀಣ ವ್ಯಾಸಂಗ ದೃಢೀಕರಣ ಪ್ರಮಾಣ ಪತ್ರಕ್ಕೆ ರುಜು ಪಡೆಯಲು ಪುತ್ತೂರು ಅಥವಾ ಸುಳ್ಯ ತಾಲೂಕು ಕೇಂದ್ರಕ್ಕೆ ತೆರಳಬೇಕಿದೆ. ಇದರಿಂದಾಗಿ ಅನಗತ್ಯವಾಗಿ ಸಮಯ ಹಾಗೂ ಹಣ ವ್ಯಯವಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ದೂರು. ಇಲ್ಲಿನ ಶಿಕ್ಷಕರು ವೇತನ ಪ್ರಮಾಣ ಪತ್ರ, ಮುಂಭಡ್ತಿ, ಕೆಜಿಐಡಿ ಹೊಸ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಹಾಗೂ ನವೀಕರಿಸಲು, ವಾರ್ಷಿಕ ತಪಾಸಣ ವರದಿ, ಲೆಕ್ಕಪತ್ರ ಪರಿಶೀಲನೆ, ಇಲಾಖೆಯ ತರಬೇತಿಗಳು ಹಾಗೂ ಇತರ ದಾಖಲೆ ಪತ್ರಗಳ ಕೆಲಸಗಳಿಗೂ ಪುತ್ತೂರು ಅಥವಾ ಸುಳ್ಯವನ್ನು ಅವಲಂಬಿಸಬೇಕಾಗಿದೆ.

42 ಗ್ರಾಮಗಳ ವ್ಯಾಪ್ತಿ
ಪುತ್ತೂರು ತಾಲೂಕಿನ ಕಡಬ, ಕೋಡಿಂಬಾಳ, ಬಂಟ್ರ, 102 ನೆಕ್ಕಿಲಾಡಿ, ಐತ್ತೂರು, ಬಿಳಿನೆಲೆ, ಕೊಂಬಾರು, ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಹಳೆನೇರೆಂಕಿ, ದೋಳ್ಪಾಡಿ, ಕಾಣಿಯೂರು, ಚಾರ್ವಾಕ, ಬೆಳಂದೂರು, , ಕುದ್ಮಾರು, ಸವಣೂರು, ಪುಣcಪ್ಪಾಡಿ, ಪಾಲ್ತಾಡಿ, ಕೊಣಾಜೆ, ಶಿರಿಬಾಗಿಲು, ಗೊಳಿತೊಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ ಹಾಗೂ ಸುಳ್ಯ ತಾಲೂಕಿನ ಏನೆಕಲ್‌, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು ಹಾಗೂ ಎಡಮಂಗಲ ಹೀಗೆ 42 ಗ್ರಾಮಗಳು ಕಡಬ ತಾಲೂಕಿಗೆ ಸೇರಿವೆ. ನೂತನ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 20 ಪ್ರೌಢಶಾಲೆಗಳು, 104 ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

ಇದನ್ನೂ ಓದಿ:ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

Advertisement

ಕೊಠಡಿ ಸೇರಿದ
ಬಿಇಒ ಕಚೇರಿ ನಾಮಫಲಕ
ಪುತ್ತೂರಿನಿಂದ ಬೇರ್ಪಟ್ಟು ಕಡಬ ಕೇಂದ್ರಿತವಾಗಿ ಪ್ರತ್ಯೇಕ ಶೈಕ್ಷಣಿಕ ವಲಯ ರಚಿಸಿ ಕಡಬದಲ್ಲಿಯೇ ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿ ಆರಂಭಿ ಸಬೇಕೆನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಈ ಕುರಿತು ಸರಕಾರಕ್ಕೆ ಒತ್ತಡ ಹೇರುತ್ತಲೇ ಬರಲಾಗಿತ್ತು. ಕಡಬ ತಾಲೂಕು ಉದ್ಘಾಟನೆಯ ಸಂದ ರ್ಭ ದಲ್ಲಿ ಶಿಕ್ಷಣ ಇಲಾಖಾಧಿಕಾರಿ ಸಮ್ಮುಖದಲ್ಲಿ ಕಡಬ ಸರಕಾರಿ ಮಾದರಿ ಶಾಲಾ ವಠಾರದಲ್ಲಿನ ಶಿಕ್ಷಣ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಕಡಬ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ಉದ್ಘಾಟಿಸಿ ಕಚೇರಿಯ ನಾಮಫಲಕವನ್ನೂ ಅನಾವರಣಗೊಳಿಸಲಾಗಿತ್ತು.
ಯಾವುದೇ ಹುದ್ದೆಗಳೂ ಮಂಜೂರಾಗಿಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಉದ್ಘಾಟನೆ ಯಾಗಿರುವುದು ಬಿಟ್ಟರೆ ಇದುವರೆಗೆ ಅಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ನಡೆದಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಯಾವುದೇ ಹುದ್ದೆಗಳೂ ಮಂಜೂರಾಗಿಲ್ಲ. ಇದಿಗ ನಾಮಫಲಕವನ್ನು ತೆಗೆದು ಕೊಠಡಿಯೊಳಗೆ ಇರಿಸಲಾಗಿದೆ.

ಆರೋಗ್ಯ ಇಲಾಖೆಯ ಸ್ಥಿತಿಯೂ ಅತಂತ್ರ
ಆರೋಗ್ಯ ಇಲಾಖೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಕಡಬ ಪ್ರತ್ಯೇಕ ತಾಲೂಕಾದರೂ ಎಲ್ಲ ವ್ಯವಹಾರಗಳು, ಅಂಕಿ ಅಂಶಗಳು ಪುತ್ತೂರು ತಾಲೂಕಿನ ಅಡಿಯಲ್ಲಿಯೇ ದಾಖಲಾಗುತ್ತಿವೆ. ಕಡಬ ತಾಲೂಕಿಗೆ ಪ್ರತ್ಯೇಕ ತಾಲೂಕು ವೈದ್ಯಾಧಿಕಾರಿ ನೇಮಕವಾಗಿಲ್ಲ. ಸುಳ್ಯ ತಾಲೂಕಿನಿಂದ ಕಡಬಕ್ಕೆ ಸೇರ್ಪಡೆಯಾಗಿರುವ ಗ್ರಾಮಗಳಿಗೆ ಸಂಬಂಧಿಸಿದ ಆರೋಗ್ಯ ಇಲಾಖೆ ಚಟುವಟಿಕೆಗಳು ಸುಳ್ಯ ತಾಲೂಕಿನ ಮೂಲಕವೇ ಆಗುತ್ತಿವೆ. ಈ ಬಗ್ಗೆಯೂ ಗಮನಿಸಬೇಕಿದೆ.

ಕಚೇರಿ ಆರಂಭಿಸಲು ಕ್ರಮ
ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತೆರೆಯುವ ನಿಟ್ಟಿನಲ್ಲಿ ಅನುದಾನ ಹಾಗೂ ಹುದ್ದೆಗಳನ್ನು ಮಂಜೂರು ಮಾಡುವ ಸಲುವಾಗಿ ಶಿಕ್ಷಣ ಸಚಿವರ ಜತೆ ಚರ್ಚಿಸಲಾಗಿದೆ. ಶೀಘ್ರವೇ ಪುತ್ತೂರು ಹಾಗೂ ಸುಳ್ಯ ಕಚೇರಿಗಳಿಂದ ಸಿಬಂದಿ ನಿಯೋಜಿಸಿ ಪ್ರಭಾರ ನೆಲೆಯಲ್ಲಿ ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ನೇಮಿಸಿ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
-ಎಸ್‌.ಅಂಗಾರ, ಸಚಿವರು

ನಿರಂತರ ಬೇಡಿಕೆ
ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತೆರೆಯಬೇಕೆಂದು 2012ರಿಂದಲೇ ನಿರಂತರವಾಗಿ ಬೇಡಿಕೆ ಸಲ್ಲಿಸಲಾಗುತ್ತಿದೆ. ಹೊಸ ದಾಗಿ ರಚನೆಗೊಂಡ ತಾ| ಗಳಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿ ಆರಂಭಿಸುವ ಸಲುವಾಗಿ ಸಿಬಂದಿ ಯನ್ನು ನಿಯೋಜಿಸಲು ತಿಂಗಳ ಹಿಂದೆಯೇ ಸರಕಾರ ಸೂಚನೆ ನೀಡಿದೆ. ಆದರೆ ಅದೂ ಕಾರ್ಯಗತವಾಗಿಲ್ಲ. ಕಡಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ತೆರೆದರೆ ಆಡಳಿತಾತ್ಮಕವಾಗಿ ಬಹಳಷ್ಟು ಪ್ರಯೋಜನವಾಗಲಿದೆ. ತಾ| ನ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಅನುಕೂಲ ವಾಗಲಿದೆ.
-ರಾಮಕೃಷ್ಣ ಮಲ್ಲಾರ, ಅಧ್ಯಕ್ಷರು, ಕಡಬ ತಾ.ಪ್ರಾ. ಶಾಲಾ ಶಿಕ್ಷಕರ ಸಂಘ

-ನಾಗರಾಜ್‌ ಎನ್‌.ಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next