Advertisement

ಖರ್ಗೆಗೆ ಅಪಮಾನ ಮಾಡಿಲ್ಲ: ಸಿದ್ದರಾಮಯ್ಯ

11:36 PM Mar 01, 2023 | Team Udayavani |

ಬೆಳಗಾವಿ: ಎಐಸಿಸಿ ಮಹಾಧಿವೇಶನ ವೇಳೆ ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ ಮಾಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಲ್‌ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ ಅವರನ್ನು ಕಡೆಗಣಿಸಿದರು.

Advertisement

ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಿದರು. ಹಾಗಿದ್ದರೂ ನಾವೇ ನಮ್ಮ ನಾಯಕರಿಗೆ ಅಪಮಾನ ಮಾಡಿದ್ದೇವೆ ಎಂದು ಮೋದಿ ಹಾಗೂ ಅಮಿತ್‌ ಶಾ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತಬಾಳೇಕುಂದ್ರಿ ಗ್ರಾಮದ ವೈರ್‌ಲೆಸ್‌ ಮೈದಾನದಲ್ಲಿ ಬುಧವಾರ ಜರಗಿದ ಪ್ರಜಾಧ್ವನಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್‌ನಲ್ಲಿ ಅವಮಾನಿಸಲಾಗಿದೆ ಎಂಬ ಆರೋಪವೇ ಸುಳ್ಳು ಎಂದರು.

ಮೋದಿ ಮಹಾದಾಯಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ, ರೈತರು, ಬಡವರು, ಯುವಕರು, ಮಹಿಳೆಯರ ಬಗ್ಗೆ ಏನೂ ಮಾತನಾಡಲಿಲ್ಲ. ಬೆಳಗಾವಿಯಲ್ಲಿ ರೋಡ್‌ ಶೋ ನಡೆಸಲು ಜನರಿಗೆ ದುಡ್ಡು ಕೊಟ್ಟು ಕರೆಸಿದ್ದರು. ಕೊರೊನಾ ಹಾಗೂ ಪ್ರವಾಹದ ವೇಳೆ ಒಮ್ಮೆಯೂ ರಾಜ್ಯಕ್ಕೆ ಬರಲಿಲ್ಲ. ಕೊರೊನಾದಲ್ಲಿ ಬಹಳಷ್ಟು ಜನ ಸತ್ತು ಹೋಗಿದ್ದಾರೆ. ಈಗ ಚುನಾವಣೆ ಸಮೀಪಿಸಿದಾಗ ಮೇಲಿಂದ ಮೇಲೆ ಬರುತ್ತಿದ್ದಾರೆ ಎಂದು ಟೀಕಿಸಿದರು.

ಈ ರಾಜ್ಯ ಉಳಿಯಬೇಕಾದರೆ ಬಿಜೆಪಿ ಸೋಲಬೇಕು. ಕಾಂಗ್ರೆಸ್‌ ಸರಕಾರ ಬರಬೇಕು. ಮೋದಿ ರೈತರ ರಕ್ತ ಕುಡಿಯುತ್ತಿದ್ದಾರೆ. ಸುಲಿಗೆ ಮಾಡಿ ರೈತರ ರಕ್ತ ಹೀರಿ ತೆರಿಗೆ ವಸೂಲಿ ಮಾಡಿರುವ ಮೋದಿ ಸರಕಾರ ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 6 ಸಾವಿರ ರೂ. ನೀಡುತ್ತಿದ್ದಾರೆ. ಒಂದು ಕೈಯಲ್ಲಿ ಕೊಡುವುದು, ಇನ್ನೊಂದು ಕೈಯಿಂದ ಕಸಿದುಕೊಳ್ಳುತ್ತಿದ್ದಾರೆ ಎಂದರು.

Advertisement

ಬೊಮ್ಮಾಯಿಗೆ ನಾಚಿಕೆ ಆಗುವುದಿಲ್ಲವೇ?
ರಾಜಹಂಸಗಡ ಕೋಟೆಯಲ್ಲಿ ಲಕ್ಷ್ಮೀ ಹೆಬ್ಟಾಳ್ಕರ್‌ ಮಾಡಿರುವ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿ ಗುರುವಾರ ಪ್ರತಿಮೆ ಉದ್ಘಾಟಿಸಲು ಸಿಎಂ ಬೊಮ್ಮಾಯಿಗೆ ನಾಚಿಕೆ ಆಗುವುದಿಲ್ಲವೇ ಎಂದು ಸಿದ್ದು ಪ್ರಶ್ನಿಸಿದರು.

ರಮೇಶ ಸ್ವಯಂ ಘೋಷಿತ ನಾಯಕ: ಹೆಬ್ಬಾಳ್ಕರ್
ಬೆಳಗಾವಿ: ಸ್ವಯಂ ಘೋಷಿತ ನಾಯಕರಾಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ “ಗೋಕಾಕ ರಿಪಬ್ಲಿಕ್‌’ ನಿಯಮಾವಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುವುದಿಲ್ಲ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ಧಾಳಿ ನಡೆಸಿದರು. ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಗೋಕಾಕದಲ್ಲಿ ಪೊಲೀಸ್‌ ಠಾಣೆ, ತಹಶೀಲ್ದಾರ್‌, ಸಬ್‌ ರಿಜಿಸ್ಟ್ರಾರ್‌, ಎಸಿ ಕಚೇರಿ ಹೇಗೆ ಕೆಲಸ ಮಾಡುತ್ತವೆ ಎಂಬುದು ಗೊತ್ತಿದೆ. ಒಂದು ಎಕ್ರೆ ಭೂಮಿ ಖರೀದಿಸಲು ಹಾಗೂ ಮಾರಾಟ ಮಾಡಬೇಕಾದರೆ 10 ಲಕ್ಷ ರೂ. ನೀಡಬೇಕಾಗುತ್ತದೆ. ನಿಮ್ಮನ್ನೇ ನೀವು ಮಾರಿಕೊಂಡು ನಮಗೆ ಭ್ರಷ್ಟಾಚಾರದ ಬಗ್ಗೆ ಪಾಠ ಹೇಳುತ್ತಿದ್ದೀರಾ? ನಾನು ಯಾರದ್ದಾದರೂ ಜಮೀನನ್ನು ಬರೆಯಿಸಿಕೊಂಡಿದ್ದೀನಾ? ನಾನು ಶಾಸಕಿಯಾಗಿ ಕೇವಲ ನಾಲ್ಕೂವರೆ ವರ್ಷ ಆಗಿದೆ. ರಮೇಶ ಜಾರಕಿಹೊಳಿ 23 ವರ್ಷ ಶಾಸಕರಾಗಿದ್ದಾರೆ. ನನಗೆ ಒಂದೇ ವರ್ಷ ಸಮ್ಮಿಶ್ರ ಸರಕಾರ ಸಿಕ್ಕಿತು. ಇವರು ಶಾಸಕರಾದ ಬಳಿಕ 16 ವರ್ಷ ಸರಕಾರ ಸಿಕ್ಕಿದೆ. 4 ವರ್ಷದ ಶಾಸಕರಿಗೆ ಅಭಿವೃದ್ಧಿ ಮಾಡಿಲ್ಲ ಎಂದು ಹೇಳುತ್ತೀರಾ? ಮಹಿಳೆಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರೆ ನಿಮ್ಮ ಸಂಕುಚಿತ ಭಾವನೆ ಬಿಂಬಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಖರ್ಗೆಗೆ ಮೋದಿಯಿಂದ ಅಪಮಾನ: ಡಿಕೆಶಿ
ಹಾಸನ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಬ್ಬರ್‌ ಸ್ಟಾಂಪ್‌ ಅಧ್ಯಕ್ಷ ಎನ್ನುವ ಮೂಲಕ ಪ್ರಧಾನಿ ಮೋದಿ ಒಬ್ಬ ದಲಿತ ನಾಯಕನಿಗೆ ಅಪಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧಿವೇಶನದಲ್ಲಿ ಸೋನಿಯಾ ಗಾಂಧಿಗೆ ಛತ್ರಿ ಹಿಡಿದಿದ್ದನ್ನು ಪ್ರಸ್ತಾವಿಸಿ ಖರ್ಗೆ ರಬ್ಬರ್‌ ಸ್ಟಾಂಪ್‌ ಅಧ್ಯಕ್ಷ ಎಂದು ಹೀಯಾಳಿಸಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಚುನಾಯಿತ ಅಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ. ಸೋನಿಯಾ ಗಾಂಧಿಗೆ ಆರೋಗ್ಯ ಸರಿಯಿಲ್ಲದಿದ್ದರಿಂದ ಅವರಿಗೆ ಭದ್ರತಾ ಸಿಬಂದಿ ಛತ್ರಿ ಹಿಡಿದ್ದರು ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next