ಹೊಸದಿಲ್ಲಿ: ದಿಲ್ಲಿಯ ಸುಲ್ತಾನ್‌ಪುರಿ ಪ್ರಕರಣದಲ್ಲಿ ಮೃತ ಯುವತಿಯ ಶವ ಪರೀಕ್ಷೆಯ ಪ್ರಾಥಮಿಕ ವರದಿ ಪ್ರಕಾರ, ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ. ಆಕೆಯ ಖಾಸಗಿ ಅಂಗ ಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.
ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಮಂಡಳಿಯ ತಂಡ ಸೋಮವಾರ ಮೃತ ಅಂಜಲಿ ಸಿಂಗ್(20) ಅವರ ಶವ ಪರೀಕ್ಷೆ ನಡೆಸಿತು.
ಸ್ನೇಹಿತೆ ಜತೆಗಿದ್ದಳು: ಸ್ಕೂಟಿ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸ್ನೇಹಿತೆ ನಿಧಿ ಕೂಡ ಅಂಜಲಿ ಜತೆಗಿದ್ದರು ಎಂಬ ಮಾಹಿತಿ ಪೊಲೀಸರ ವಿಚಾರಣೆಯಿಂದ ಬಹಿರಂಗವಾಗಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಅಂಜಲಿ ಮತ್ತು ನಿಧಿ ಹೊಟೇಲ್‌ನಲ್ಲಿ ಪಾರ್ಟಿ ಮಾಡಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೊಟೇಲ್‌ನಿಂದ ಆಚೆ ಬಂದ ಇಬ್ಬರ ನಡುವೆ ಜಗಳವಾಗಿದೆ. ಈ ದೃಶ್ಯಗಳು ಹೊಟೇಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರಿನಡಿ ಸಿಲುಕಿದಳು: “ಸ್ಕೂಟಿ ಯಾರು ಓಡಿಸಬೇಕು ಎಂಬ ವಿಷಯದಲ್ಲಿ ನನಗೂ ಹಾಗೂ ಅಂಜಲಿ ನಡುವೆ ವಾದವಾ ಯಿತು. ಆಗ ಸ್ಕೂಟಿ ಕೀ ಕಸಿಯಲು ಸಣ್ಣ ಜಗಳವಾಯಿತು. ಅನಂತರ ಅಂಜಲಿಯೇ ಸ್ಕೂಟಿ ಓಡಿಸಿದಳು. ನಾನು ಹಿಂಬದಿ ಕುಳಿತಿದ್ದೆ. ಸುಲ್ತಾನ್‌ಪುರಿ ಹೊರವಲಯದಲ್ಲಿ ಹೋಗುತ್ತಿರು ವಾಗ ಕಾರು ಬಂದು ಢಿಕ್ಕಿ ಹೊಡೆಯಿತು. ಇದರಿಂದ ನಾನು ಹಾರಿ ಕೆಳಕ್ಕೆ ಬಿದ್ದೆ. ಅಂಜಲಿ ಕಾರಿನ ಅಡಿಯಲ್ಲಿ ಸಿಲುಕಿದಳು. ನಾನು ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿದೆ. ಕಾರಿನಡಿ ಅಂಜಲಿ ಸಿಲುಕಿದ್ದು ಅವರಿಗೆ ಗೊತ್ತಿತ್ತು. ಆದರೂ ಕಾರು ನಿಲ್ಲಿಸದೇ ಮುಂದಕ್ಕೆ ಹೋದರು. ಘಟನೆಯಿಂದ ಗಾಬರಿಗೊಂಡು ಸ್ಥಳದಿಂದ ಹೊರಟುಬಿಟ್ಟೆ. ಆ ಕ್ಷಣದಲ್ಲಿ ಯಾರಿಗೆ ವಿಷಯ ಹೇಳಬೇಕೆಂದು ತಿಳಿಯಲಿಲ್ಲ,’ ಎಂದು ಮೃತ ಅಂಜಲಿ ಸ್ನೇಹಿತೆ ನಿಧಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.
ಕಾರಿನ ಕೆಳಗೆ ಕೈ ಕಾಣಿಸಿತು: “ಹೊಸ ವರ್ಷದ ಹಿನ್ನೆಲೆ ನಾವು ಐವರು ಮದ್ಯ ಸೇವಿಸಿದ್ದೆವು. ದೊಡ್ಡ ಧ್ವನಿಯಲ್ಲಿ ಸಂಗೀತ ಹಾಕಿಕೊಂಡು ಕಾರಿನಲ್ಲಿ ಹೋಗುತ್ತಿದ್ದೆವು. ಸ್ಕೂಟಿ ರಸ್ತೆಯ ಆಚೆ-ಈಚೆ ಚಲಿಸುತ್ತಿದ್ದ ಕಾರಣ ಸ್ಕೂಟಿಗೆ ನಮ್ಮ ಕಾರು ಢಿಕ್ಕಿ ಹೊಡೆಯಿತು. ನಾವು ಕಾರು ಸಮೇತ ಪರಾರಿಯಾಗಲು ಮುಂದಾದೆವು. ಕಾರಿನ ಅಡಿ ಯುವತಿಯ ದೇಹ ಸಿಲುಕಿರುವುದು ತಿಳಿಯಲಿಲ್ಲ. ಆದರೆ ಕೆಳಗೇನೋ ಸಿಕ್ಕಿಹಾಕಿಕೊಂಡಿದೆ ಎಂದು ಒಬ್ಬ ಗೆಳೆಯ ಹೇಳಿದ. ಅದಕ್ಕೆ ನಾವೆಲ್ಲ ಅಂಥದ್ದೇನೂ ಇಲ್ಲ ಎಂದೆವು.
ಕಂಜಾವಾಲಾದಲ್ಲಿ ಕಾರು ಯೂಟರ್ನ್ ತೆಗೆದುಕೊಳ್ಳುವಾಗ ಕಾರಿನಲ್ಲಿದ್ದ ಒಬ್ಬನಿಗೆ ಕಾರಿನಡಿಯಲ್ಲಿ ಯುವತಿಯ ಕೈ ಕಾಣಿಸಿತು. ಈ ವೇಳೆ ತತ್‌ಕ್ಷಣ ಕಾರು ನಿಲ್ಲಿಸಿದರಿಂದ ಮೃತದೇಹ ಕಾರಿನಡಿಯಿಂದ ಹೊರಬಂತು. ಅನಂತರ ನಾವು ಅಲ್ಲಿಂದ ಕಾಲ್ಕಿತ್ತೆವು,’ ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆ.