ಹುಬ್ಬಳ್ಳಿ: ಮೀಸಲಾತಿ ಪ್ರಕ್ರಿಯೆ ಎರಡು ವರ್ಷಗಳಿಂದ ನಡೆಯುತ್ತಿತ್ತು. ಕಳೆದ ಆರು ತಿಂಗಳ ಹಿಂದೆ ಹಿಂದುಳಿದ ಆಯೋಗದ ಮಧ್ಯಾಂತರ ವರದಿ ನೀಡಿದೆ. ಇದನ್ನು ಸಂಪೂರ್ಣ ಪರಿಶೀಲಿಸಿ ಜಾರಿಗೆ ತರಲಾಗಿದೆ. ಇದು ಚುನಾವಣೆ ಕಾರಣಕ್ಕೆ ಮಾಡಲಾಗಿದೆ ಎಂಬುದರಲ್ಲಿ ಅರ್ಥವಿಲ್ಲ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿವಾಸ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ ಯಾವುದೇ ಸರಕಾರ ತೆಗೆದುಕೊಳ್ಳದ ಮಹತ್ತರ ನಿರ್ಣಯವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಕೈಗೊಂಡಿದೆ. ಇದು ನಮ್ಮ ಸರಕಾರದ ದಿಟ್ಟ ನಿರ್ಧಾರವಾಗಿದೆ. ವೀರಶೈವ ಲಿಂಗಾಯತ ಶೇ.5ರಿಂದ 7, ಒಕ್ಕಲಿಗರಿಗೆ ಶೇ.4 ರಿಂದ 6 ಮೀಸಲಾತಿ ಹೆಚ್ಚಿಸಲಾಗಿದೆ. ಯಾರಿಗೂ ಅನ್ಯಾಯವಾಗದಂತೆ ಒಳ ಮೀಸಲಾತಿ ನೀಡಿದ್ದಾರೆ. ಇದೊಂದು ಒಳ್ಳೆಯ ಕಾರ್ಯ ಹಾಗೂ ದಿಕ್ಸೂಚಿಯಾಗಿದೆ. ಈ ಕಾರ್ಯವನ್ನು ಎಲ್ಲ ವರ್ಗದ ಸ್ವಾಮೀಜಿಗಳು, ಗಣ್ಯರು ಸ್ವಾಗತಿಸಿದ್ದಾರೆ.
ಪಂಚಮಸಾಲಿ ಮೀಸಲಾತಿ ಒಪ್ಪಿಕೊಳ್ಳದವರು ತಮ್ಮ ಸರಕಾರವಿದ್ದ ಸಂದರ್ಭದಲ್ಲಿ ಏನು ಮಾಡುತ್ತಿದ್ದರು? ಅವರ ಸಂಬಂಧಿಗಳೇ ಸಚಿವರಾಗಿದ್ದರೂ ಇದನ್ನು ಯಾಕೆ ಜಾರಿಗೊಳಿಸಿಲ್ಲ? ಈ ಕುರಿತು ಮೂವತ್ತು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ನಮ್ಮ ಸರಕಾರ ಕೈಗೊಂಡ ನಿರ್ಧಾರದಲ್ಲಿ ಯಾವ ಸಮಾಜಕ್ಕೂ ತೊಂದರೆಯಾಗಿಲ್ಲ. ಯಾವ ಸಮಾಜದ ಮೀಸಲಾತಿಯನ್ನೂ ಕಿತ್ತುಕೊಂಡಿಲ್ಲ. ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. ರಾಜಕಾರಣಕ್ಕಾಗಿ ಒಂದಿಬ್ಬರು ವಿರೋಧಿಸಿದ್ದರೆ ಅದನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿಲ್ಲ ಎಂದರು.