ಬಜಪೆ: ಮತದಾನದ ದಿನ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಎಲ್ಲ ಪಕ್ಷಗಳು, ಪಕ್ಷೇತರರಿಂದಲೂ ಪ್ರಚಾರ ಸಭೆಗಳು ಜೋರಾಗಿಯೇ ನಡೆಯುತ್ತವೆ. ಅದರೆ ಸಭೆಯಲ್ಲಿ ಮುಖ್ಯಭಾಷಣ ನಡೆಯುವುದು ಮಾತ್ರ ಹತ್ತೇ ನಿಮಿಷ. ಹೆಚ್ಚು ಮಾತನಾಡುವುದಕ್ಕೆ ನೀತಿಸಂಹಿತೆಯೂ ಅಡ್ಡಿಯಾಗುತ್ತದೆ. ಆದರೆ ಸ್ವಾಗತ ಭಾಷಣ ಮಾತ್ರ ಉದ್ದಕ್ಕೆ ಬೆಳೆಯುತ್ತದೆ.ಮತದಾರರನ್ನು, ನಾಯಕರನ್ನು ಮೆಚ್ಚಿಸಲು ಇದ್ದಬದ್ದವರ ಹೆಸರುಗಳನ್ನೆಲ್ಲ ಹೇಳಿ ಸ್ವಾಗತ ಭಾಷಣವನ್ನು ಒಂದಷ್ಟು ಉದ್ದ ಕೊಂಡೊಯ್ಯುತ್ತಾರೆ. ಜತೆಗೆ ಸಭೆಯೂ ನಿರ್ದಿಷ್ಟ ಸಮಯಕ್ಕೆ ಶುರುವಾಗದೇ ತಡವಾಗುವ ರೂಢಿಯೂ ಇರುತ್ತದೆ.
ಸಭೆ ಆರಂಭಗೊಳ್ಳುತ್ತಿದ್ದಂತೆ ಕಾರ್ಯಕ್ರಮ ನಿರೂಪಕರು ಒಮ್ಮೆ ಎಲ್ಲರ ಪರಿಚಯದ ಮೂಲಕ ಸ್ವಾಗತಿಸುತ್ತಾರೆ. ಆ ಬಳಿಕ ಸ್ವಾಗತ ಮಾಡುವವರು ಇನ್ನೊಬ್ಬರು; ಅವರು ಕೂಡ ಕಾರ್ಯಕ್ರಮ ನಿರೂಪಕ ಬಿಟ್ಟ ವಿಷಯ ಪ್ರಸ್ತಾಪಿಸಿ ಮತ್ತೆ ಸ್ವಾಗತಿಸುತ್ತಾರೆ!
ಅವರು ವೇದಿಕೆಯಲ್ಲಿರುವವರನ್ನು ಸ್ವಾಗತಿಸಬೇಕಿರುವುದು ರೂಢಿ. ಆದರೆ ಆತ ಪಕ್ಷದ ಮುಖಂಡರನ್ನು, ಅಭ್ಯರ್ಥಿಗಳನ್ನು ಸ್ವಾಗತಿಸಲು ಆರಂಭಿಸಿದರೆ ವೇದಿಕೆಯಲ್ಲಿದ್ದವರನ್ನು, ಬಂದು ಹೋದವರನ್ನು, ಇನ್ನು ಬರಲಿಕ್ಕಿರುವವರನ್ನು, ಸಭೆಯಲ್ಲಿರುವವ ರನ್ನು, ಬೇರೆ ಪಕ್ಷದಿಂದ ಬಂದವರನ್ನು, ಟಿಕೆಟ್ ವಂಚಿತರ ಗುಂಪಿನಲ್ಲಿ ಕಾಣಿಸಿಕೊಂಡವರನ್ನು ಹೀಗೆ ಎಲ್ಲರನ್ನು ಸ್ವಾಗತಿಸುವ ಹೊತ್ತಿಗೆ ಸ್ವಾಗತ ಭಾಷಣ ಅರ್ಧ ಗಂಟೆ ದಾಟಿರುತ್ತದೆ. ಅವರಿವರ ಹೆಸರನ್ನು ಹೇಳುವ ಜತೆಗೆ ಅವರ ವಿವರಣೆಯನ್ನೂ ನೀಡಿದರೆ ಒಂದು ಗಂಟೆ ದಾಟುವ ಅಪಾಯವೂ ಇರುತ್ತದೆ!
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮುಖಂಡರು ಯಾರಿಗೂ ಬೇಸರವಾಗದಂತೆ ನೋಡಿಕೊಳ್ಳುವುದು, ಜಾಗ್ರತೆ ವಹಿಸುವುದೇ ಇದಕ್ಕೆ ಮುಖ್ಯ ಕಾರಣ. ಎಲ್ಲರನ್ನು ಮೆಚ್ಚಿಸಲೇಬೇಕಾದ ಅನಿವಾರ್ಯತೆ ಅವರಿಗೆ ಇರುತ್ತದೆ. ಜತೆಗೆ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಲು ಅವರ ಹೆಸರನ್ನು ಹೇಳಿಸುತ್ತಾರೆ.
ಇನ್ನು ವೇದಿಕೆ ಹೌಸ್‌ಫುಲ್ !
ಪ್ರಚಾರ ಸಭೆಗಳ ವೇದಿಕೆ ಇನ್ನು ಕಿಕ್ಕಿರಿದು ತುಂಬಿರುತ್ತದೆ.ರಾಜ್ಯ, ಜಿಲ್ಲಾ ಮಟ್ಟದ ನಾಯಕರ ಜತೆ ಸ್ಥಳೀಯ ಮಟ್ಟದ ನಾಯಕರು ಮಿನುಗುವ ಕಾಲ. ಅವರ ಅಗತ್ಯಗಳನ್ನು ಚುನಾವಣೆ ಸಂದರ್ಭದಲ್ಲಿ ಹಿರಿಯ ನಾಯಕರು ಮರೆಯುವಂತಿಲ್ಲ. ಯಾರೇ ಸ್ಥಳೀಯ ನಾಯಕ ವೇದಿಕೆಯ ಕೆಳಗೆ ಕುಳಿತುಕೊಂಡಿದ್ದರೂ ಹಿರಿಯ ನಾಯಕರು ಅವರನ್ನು ವೇದಿಕೆಯ ಮೇಲೆ ಬರುವಂತೆ ಒತ್ತಾಯ ಮಾಡುತ್ತಾರೆ.
ಕೋಟಿ ಕೋಟಿ ರೂ. ಮೊತ್ತದ ಯೋಜನೆಗಳ ಭರವಸೆ ನೀಡುತ್ತಾರೆ. ಈ ಸಂದರ್ಭ ಸ್ಥಳೀಯ ಸಮಸ್ಯೆ, ಬೇಡಿಕೆಗಳ ಬಗ್ಗೆ ಅಲ್ಲಿರುವ ಮತದಾರರು ಪ್ರಶ್ನಿಸುವುದೂ ಇಲ್ಲ. ಪಕ್ಷದ ಸಾಧನೆ, ಅಭ್ಯರ್ಥಿಯ ಸಾಧನೆಗಳೇ ಪುಂಖಾನುಪುಂಖವಾಗಿ ಕೇಳಿಬರುತ್ತವೆ. ಬೇರೆ ಪಕ್ಷಗಳ, ಪ್ರತಿಸ್ಪರ್ಧಿ ನಾಯಕರ ಕಾಲೆಳೆಯುವ ಕಾರ್ಯ ವನ್ನಂತೂ ಮರೆಯದೆ ಮಾಡುತ್ತಾರೆ.
– ಸುಬ್ರಾಯ ನಾಯಕ್