Advertisement

ಪೂರ್ಣಾವಧಿ ಪ್ರಾಂಶುಪಾಲರೇ ಇಲ್ಲ !

04:39 AM Mar 18, 2019 | |

ಕಾರ್ಕಳ: ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ
36 ಸರಕಾರಿ ಪದವಿ ಕಾಲೇಜುಗಳ ಪೈಕಿ ಒಂದರಲ್ಲೂ ಪೂರ್ಣಾವಧಿ ಅಂದರೆ ಗ್ರೇಡ್‌ 1 ಪ್ರಾಂಶುಪಾಲರೇ ಇಲ್ಲ.
ಈ ಕಾಲೇಜುಗಳಲ್ಲಿ ಪ್ರಭಾರಿಗಳೇ ಮುಖ್ಯಸ್ಥರು. ಉಡುಪಿಯಲ್ಲಿ 12, ದ.ಕ. ದಲ್ಲಿ 18, ಕೊಡಗಿನಲ್ಲಿ 6 ಹೀಗೆ ಒಟ್ಟು 36 ಸರಕಾರಿ ಪದವಿ ಕಾಲೇಜುಗಳಿದ್ದು, ಎಲ್ಲೆಡೆ ಅದೇ ಕಥೆ. ಕೆಲವು ಕಾಲೇಜುಗಳಲ್ಲಿ ಇತ್ತೀಚೆಗೆ ನೇಮಕಗೊಂಡವರೇ ಪ್ರಭಾರಿ ಪ್ರಾಂಶುಪಾಲರು!

Advertisement

ಉದಯಶಂಕರ್‌ ಕೊನೆಯವರು
ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿ ಕೊನೆಯ ಏಕೈಕ ಪೂರ್ಣಾವಧಿ ಪ್ರಾಂಶು ಪಾಲರಾಗಿದ್ದವರು ಬೆಳಂದೂರು ಸ.ಪ್ರ.ದ. ಕಾಲೇಜಿನ ಉದಯಶಂಕರ್‌. ಅನಂತರ ಅವರು ಭಡ್ತಿಗೊಂಡು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ, ಹೆಚ್ಚುವರಿ ನಿರ್ದೇಶಕರಾಗಿ ನಿವೃತ್ತರಾದರು. ಬಳಿಕ ಯಾವೊಬ್ಬರೂ ಪೂರ್ಣಕಾಲಿಕ ಪ್ರಾಂಶುಪಾಲರಾಗಿ ನೇಮಕವಾಗಿಲ್ಲ.

ವಿದ್ಯಾರ್ಥಿಗಳ ಪುಣ್ಯವೆನ್ನುವಂತೆ ಪ್ರಾಧ್ಯಾಪಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರಕಾರ ಅತಿಥಿ ಪ್ರಾಧ್ಯಾಪಕರನ್ನು ನೇಮಿಸಿದೆ. ಇದರಿಂದ ಪಾಠ ಪ್ರವಚನಗಳಿಗೆ ತೊಂದರೆಯಿಲ್ಲ. ವಾರದಲ್ಲಿ ಮೂರು ದಿನದ ಕರ್ತವ್ಯಕ್ಕೆ ತಿಂಗಳಿಗೆ 12 ಸಾವಿರ ರೂ. ನಂತೆ ವೇತನ ನೀಡಲಾಗುತ್ತಿದೆ.

ಆರ್ಥಿಕ ಹೊರೆಯೇನಿಲ್ಲ
ಪ್ರಾಂಶುಪಾಲರಾಗಿ ಪ್ರಾಧ್ಯಾಪ ಕರನ್ನು ಭಡ್ತಿಗೊಳಿಸಿದಲ್ಲಿ ಸರಕಾರ ಕ್ಕೇನೂ ಆರ್ಥಿಕ ಹೊರೆ ಯಾಗದು. ಯಾಕೆಂದರೆ 30 ವರ್ಷ ಸೇವೆ ಸಲ್ಲಿಸಿರುವ ಪ್ರಾಧ್ಯಾಪಕರಿಗೆ ಪ್ರಸ್ತುತ 1.50 ಲಕ್ಷ ರೂ. ವೇತನ ನೀಡಲಾ ಗುತ್ತಿದೆ. ಪ್ರಾಂಶುಪಾಲರಾದವರಿಗೆ ಈ ಮೊತ್ತಕ್ಕಿಂತ ತಿಂಗಳಿಗೆ 3 ಸಾವಿರ ಹೆಚ್ಚು ವರಿಯಾಗಿ ಪಾವತಿಸಬೇಕು. ಹೀಗಾಗಿ ದೊಡ್ಡ ಪ್ರಮಾಣದ ಆರ್ಥಿಕ ಹೊರೆ ಸರಕಾರಕ್ಕಿಲ್ಲ.

ಗೊಂದಲಕ್ಕಿದೆ ಕಾರಣ
ಪ್ರಾಂಶುಪಾಲರ ಹುದ್ದೆಯನ್ನು ತುಂಬುವುದು ಸೇವಾ ಹಿರಿತನದ ಮೇಲೆಯೇ ಅಥವಾ ನೇರ ನೇಮಕಾತಿ ಮೂಲಕವೇ ಎಂಬ ಜಿಜ್ಞಾಸೆ ಸರಕಾರದಲ್ಲಿದೆ. ಯುಜಿಸಿ ನಿಬಂಧನೆಯಂತೆ 15 ವರ್ಷ ಸೇವೆ ಸಲ್ಲಿಸಿರುವ ಪಿಎಚ್‌ಡಿ ಪದವಿ (ನೆಟ್‌ ಪಾಸ್‌) ಹೊಂದಿದವರನ್ನು ನೇರ ನೇಮಕ ಮೂಲಕ ಪ್ರಾಂಶುಪಾಲ ಹುದ್ದೆಗೆ ಆಯ್ಕೆ ಮಾಡಬೇಕು. ಇದರ ಮಧ್ಯೆ ಸೇವಾ ಹಿರಿತನವನ್ನೇ ಪರಿಗಣಿಸಿ ಹುದ್ದೆಗೆ ಆಯ್ಕೆ ಮಾಡಬೇಕೆಂಬ ವಾದವೂ ಕೆಲವು ಪ್ರಾಧ್ಯಾಪಕರದ್ದು.

Advertisement

ರಾಜ್ಯದಲ್ಲೂ  ಇದೇ ಸ್ಥಿತಿ
ಈ ಪರಿಸ್ಥಿತಿ ಕೇವಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯದ್ದಲ್ಲ. ರಾಜ್ಯದಲ್ಲಿರುವ 420 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಕೇವಲ 33 ಕಾಲೇಜುಗಳಲ್ಲಷ್ಟೇ ಪೂರ್ಣಾವಧಿ ಪ್ರಾಂಶುಪಾಲರಿದ್ದಾರೆ. 

ಮಂಗಳೂರು ವಿ.ವಿ. ವ್ಯಾಪ್ತಿಯ 36 ಸರಕಾರಿ ಪದವಿ ಕಾಲೇಜಿ ನಲ್ಲಿಯೂ ಪ್ರಭಾರ ನೆಲೆಯಲ್ಲಿ ಪ್ರಾಂಶುಪಾಲರಿದ್ದಾರೆ. ಪೂರ್ಣಕಾಲಿಕ ಪ್ರಾಂಶುಪಾಲರ ನೇಮಕದ ಪ್ರಕ್ರಿಯೆ ಸರಕಾರದ ಮಟ್ಟದಲ್ಲಿ ಆಗಬೇಕಿದೆ.
ಡಾ| ಅಪ್ಪಾಜಿ ಗೌಡ, ಜಂಟಿ ನಿರ್ದೇಶಕರು,  ಕಾಲೇಜು ಶಿಕ್ಷಣ ಇಲಾಖೆ

 ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next