Advertisement

ಲಕ್ಷ ಲಕ್ಷ ಕೊಟ್ಟರು ಮತ್ತಷ್ಟು ಬೇಡಿಕೆ.. ವರದಕ್ಷಿಣೆಗಾಗಿ ಪತ್ನಿ ಕೊಲೆಗೈದ ಪತಿ,ಕುಟುಂಬಸ್ಥರು

10:30 AM Apr 02, 2024 | Team Udayavani |

ಲಕ್ನೋ: ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ಮಹಿಳೆಯನ್ನು ಆಕೆಯ ಪತಿ ಮತ್ತು ಅವನ ಕುಟುಂಬವು ಹೊಡೆದು ಸಾಯಿಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

Advertisement

ಡಿಸೆಂಬರ್ 2022 ರಲ್ಲಿ ವಿಕಾಸ್‌ ಹಾಗೂ  ಕರಿಷ್ಮಾ ವಿವಾಹವಾಗಿತ್ತು. ದಂಪತಿಗಳು ವಿಕಾಸ್ ಅವರ ಕುಟುಂಬದೊಂದಿಗೆ ಗ್ರೇಟರ್ ನೋಯ್ಡಾದ ಇಕೋಟೆಕ್ -3 ನ ಖೇಡಾ ಚೌಗನ್‌ಪುರ ಗ್ರಾಮದಲ್ಲಿ ವಾಸಿಸುತ್ತಿದ್ದರು.

ಮದುವೆ ಸಮಯದಲ್ಲಿ ಕರಿಷ್ಮಾ ಅವರ ಕುಟುಂಬ ವರದಕ್ಷಿಣೆಯಾಗಿ ವರನ ಕುಟುಂಬಕ್ಕೆ 11 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಎಸ್‌ಯುವಿಯನ್ನು ನೀಡಿತ್ತು. ಆದರೆ ಇದಾದ ಬಳಿಕವೂ ವಿಕಾಸ್ ಅವರ ಕುಟುಂಬವು ವರ್ಷಗಳಿಂದ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆಯನ್ನಿಟ್ಟು ಕರಿಷ್ಮಾಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಅವರ ಸಹೋದರ ದೀಪಕ್‌  ಆರೋಪಿಸಿದ್ದಾರೆ.

ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಆಕೆಗೆ ದಿನ ನಿತ್ಯದ ಕಿರುಕುಳ ಹೆಚ್ಚಾಗಿತ್ತು. ಈ ಕಾರಣಕ್ಕೆ ವಿಕಾಸ್ ಅವರ ಗ್ರಾಮದಲ್ಲಿ ಹಲವಾರು ಬಾರಿ ಎರಡು ಕುಟುಂಬ ಮಾತುಕತೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸಿದವು. ಇದಾದ ಬಳಿಕ ಕರಿಷ್ಮಾ ಅವರ ಕುಟುಂಬವು ವಿಕಾಸ್‌ ಕುಟುಂಬಕ್ಕೆ ಇನ್ನೂ 10 ಲಕ್ಷ ರೂ. ನೀಡಿದ್ದರೂ ದೌರ್ಜನ್ಯ ನಿಲ್ಲಲಿಲ್ಲ ಎಂದು ದೀಪಕ್ ಆರೋಪಿಸಿದ್ದಾರೆ.

ಇತ್ತೀಚೆಗೆ ದೀಪಕ್‌ ಅವರ ಕುಟುಂಬವು ಫಾರ್ಚುನರ್ ಕಾರು ಮತ್ತು  21 ಲಕ್ಷದ ಬೇಡಿಕೆಯನ್ನು ಇಟ್ಟಿತ್ತು. ಇದನ್ನು ಪೂರೈಸಲು ಸಾಧ್ಯವಿಲ್ಲ ಎಂದಿದ್ದಕ್ಕೆ ಕರಿಷ್ಮಾಳ ಮೇಲೆ ಪತಿ ಹಾಗೂ ಅವರ ಕುಟುಂಬಸ್ಥರು ಹಲ್ಲೆ ನಡೆಸಿದಿದ್ದಾರೆ.

Advertisement

ಹಲ್ಲೆ ಮಾಡಿದ್ದನ್ನು ಕರಿಷ್ಮಾ ತನ್ನ ಕುಟುಂಬಕ್ಕೆ ಫೋನ್‌ ಮಾಡಿ ತಿಳಿಸಿದ್ದಾರೆ. ಆಕೆಯ ಕುಟುಂಬ ಮನೆಗೆ ಬರುವಷ್ಟರಲ್ಲಿ ಕರಿಷ್ಮಾಳನ್ನು ಹಲ್ಲೆಗೈದು ಕೊಲೆ ಮಾಡಿದ್ದಾರೆ.

ಈ ಸಂಬಂಧ ಕರಿಷ್ಮಾ ಸಹೋದರ ದೀಪಕ್‌ ಅವರು ವಿಕಾಸ್‌ ಹಾಗೂ ಕುಟುಂಬದವರ ಮೇಲೆ ದೂರು ದಾಖಲಿಸಿದ್ದಾರೆ.

ವಿಕಾಸ್, ಆತನ ತಂದೆ ಸೋಂಪಾಲ್ ಭಾಟಿ, ತಾಯಿ ರಾಕೇಶ್, ಸಹೋದರಿ ರಿಂಕಿ ಮತ್ತು ಸಹೋದರರಾದ ಸುನೀಲ್ ಮತ್ತು ಅನಿಲ್ ವಿರುದ್ಧ ವರದಕ್ಷಿಣೆಗಾಗಿ ಕೊಲೆ ಪ್ರಕರಣ ದಾಖಲಾಗಿದೆ.

ವಿಕಾಸ್ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next