Advertisement

ತ್ಯಾಜ್ಯ ನಿರ್ವಹಣೆಗೆ ಇಲ್ಲ ಲಕ್ಷ್ಯ; ಒಳಚರಂಡಿ ಯೋಜನೆಯಲ್ಲೂ ನಿರ್ಲಕ್ಷ

10:47 AM Jan 11, 2023 | Team Udayavani |

ಬಜಪೆ: ಬಜಪೆ, ಮಳವೂರು, ಕೆಂಜಾರು ಗ್ರಾಮಗಳನ್ನೊಳಗೊಂಡ ಬಜಪೆ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿ ಸುಮಾರು 22 ತಿಂಗಳು ಕಳೆದಿದ್ದರೂ ಸಮರ್ಪಕ ದ್ರವ, ಘನ ತ್ಯಾಜ್ಯ, ಪೇಟೆ ಒಳಚರಂಡಿ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ.

Advertisement

ಗ್ರಾಮ ಪಂಚಾಯತ್‌ ಆದಾಯವನ್ನೇ ನುಂಗುತ್ತಿದ್ದ ತ್ಯಾಜ್ಯ ನಿರ್ವಹಣೆಗೆ ಪಟ್ಟಣ ಪಂಚಾಯತ್‌ನಿಂದ ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಜನರಲ್ಲಿತ್ತು. ಆದರೆ ಇದಕ್ಕೆ ಮೊದಲ ಆದ್ಯತೆ ಕೊಡಬೇಕಾಗಿದ್ದ ಪಟ್ಟಣ ಪಂಚಾಯತ್‌ ಗೆ ಇದನ್ನು ಸಮಸ್ಯೆಯಾಗಿಯೇ ಪರಿಗಣಿಸಿಲ್ಲ. ಆದರೆ ಈ ಬಗ್ಗೆ ಕೂಡಲೇ ಗಮನಹರಿಸುವುದು ಬಹುಮುಖ್ಯ. ಇದಕ್ಕಾಗಿ ಜನರು, ಸಂಘ, ಸಂಸ್ಥೆಗಳ ಸಹಕಾರ ತೆಗೆದುಕೊಂಡು ಅಧಿಕಾರಿಗಳು ಮುನ್ನಡೆಯಬೇಕಿದೆ.

ತುರ್ತು ಸಭೆ ನಡೆಯಬೇಕು
ಇಲ್ಲಿ ಇನ್ನೂ ತ್ಯಾಜ್ಯ ಘಟಕಕ್ಕೆ ಸೂಕ್ತ ಜಾಗ ಯಾವುದು ಎಂಬ ಬಗ್ಗೆ ಸಮರ್ಪಕ ನಿರ್ಧಾರವನ್ನೇ ತೆಗೆದುಕೊಂಡಿಲ್ಲ. ಕಾದಿರಿಸಿದ ಜಾಗಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಈ ಬಗ್ಗೆ ಮೊದಲು ಶಾಸಕರು, ಜಿಲ್ಲಾಧಿಕಾರಿಗಳ ತುರ್ತು ಸಭೆ ಕರೆಯಬೇಕು. ಈ ಸಭೆಯಲ್ಲಿ ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ತ್ಯಾಜ್ಯ ಘಟಕಕ್ಕೆ ಜಾಗ ಕಾದಿರಿಸಲು ಕಠಿನ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಬಜಪೆ ಪಟ್ಟಣ ಪಂಚಾಯತ್‌ ಇಡೀ ತ್ಯಾಜ್ಯದಿಂದಲೇ ತುಂಬುವ ಸಾಧ್ಯತೆ
ಇವೆ. ಈಗಾಗಲೇ ರಸ್ತೆ ಬದಿಯಲ್ಲಿ ತ್ಯಾಜ್ಯಗಳು ಬೀಳುತ್ತಿವೆ. ಪಟ್ಟಣ ಪಂಚಾಯತ್‌ ಬಳಿ ಹಿಂದಿನ ತಾಲೂಕು ಪಂಚಾಯತ್‌ನ ಅಧೀನದಲ್ಲಿದ್ದ ಜಾಗ ಈಗ ಮಿನಿ ಪಚ್ಚನಾಡಿಯಂತೆ ಕಾಣಲಾರಂಭಿಸಿದೆ. ಹೀಗಾಗಿ ಈ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯವೂ ನಡೆಯಬೇಕಿದೆ.

ದ್ರವ ತ್ಯಾಜ್ಯ ಘಟಕ ಅತ್ಯಗತ್ಯ
ಗ್ರಾ.ಪಂ. ಆಗಿದ್ದಾಗ ದ್ರವ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಿತ್ತು. ಅದಕ್ಕೆ ಅನುದಾನದ ಕೊರತೆ ಕಾಡಿತ್ತು. ಬಜಪೆ ಪೇಟೆಯ ಚರಂಡಿಯ ನೀರನ್ನು ಶುದ್ದೀಕರಿಸುವ ಯೋಜನೆ ಅಗತ್ಯವಾಗಿ ಬೇಕಾಗಿದೆ. ತೊಟಿಲ ಗುರಿಯಲ್ಲಿ ಈ ಪ್ಲಾಂಟ್‌ ಅನ್ನು ನಿರ್ಮಿಸುವ ಯೋಜನೆ ಇತ್ತು. ಜಿಲ್ಲಾ ಪಂಚಾಯತ್‌ಗೆ ಈ ಯೋಜನೆಯನ್ನು ಕಳುಹಿಸಲಾಗಿತ್ತು. ಇದಕ್ಕೂ ಅನುದಾನದ ಕೊರತೆ ಕಾಡಿತ್ತು.

ಒಳ ಚರಂಡಿ ಯೋಜನೆಗೆ ಸಕಾಲ
ಬಜಪೆ ಪೇಟೆಯಲ್ಲಿ ರಸ್ತೆ ಕಾಂಕ್ರೀಟಿಕರಣ ಗೊಳ್ಳಲಿದೆ. ಮಳೆ ನೀರು ಹಾಗೂ ದ್ರವ ನೀರು ತ್ಯಾಜ್ಯ ಪ್ರತ್ಯೇಕವಾಗಿ ಹೋಗಲು ಒಳಚರಂಡಿ (ಯುಜಿಡಿ) ಯೋಜನೆ ಶೀಘ್ರ ಕಾರ್ಯಗತವಾಗಬೇಕು. ಕಾಂಕ್ರೀಟಿಕರಣ ರಸ್ತೆ ಮುಂಚೆಯೇ ಇದು ಆದರೆ ಉತ್ತಮ. ಮತ್ತೆ ಎಂದು ವಿಳಂಬ ಮಾಡಿದರೆ ಕಾಂಕ್ರೀಟಿಕರಣ ರಸ್ತೆಯನ್ನೇ ಕಡೆವಬೇಕಾಗುತ್ತದೆ. ಭೂಗತ ಕೇಬಲ್‌ ಲೈನ್‌ ಹಾಗೂ ಭೂಗತ ಮೆಸ್ಕಾಂ ವಿದ್ಯುತ್‌ ಲೈನ್‌ ಎಳೆಯಲು ಅವಕಾಶವನ್ನು ಈಗಾಗಲೇ ಇಡಬೇಕಾಗಿದೆ.

Advertisement

ವಸತಿ ಸಮುಚ್ಚಯಕ್ಕೆ ಕಠಿನ ಕ್ರಮ
ವಸತಿ ಸಮುಚ್ಛಯದ ತ್ಯಾಜ್ಯವನ್ನು ಅವರೇ ವಿಲೇವಾರಿ ಮಾಡಬೇಕು. ತ್ಯಾಜ್ಯ ಘಟಕ ಇಲ್ಲದ ವಸತಿ ಸಮುಚ್ಛಯದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ದ್ರವ ತ್ಯಾಜ್ಯಕ್ಕೂ ಅದೇ ಕ್ರಮ ಅನ್ವಯವಾಗಬೇಕು. ಪೆರ್ಮುದೆ ಗ್ರಾಮ ಪಂಚಾಯತ್‌ನಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣವಾಗಿದೆ. ಕಂದಾವರ ಗ್ರಾಮ ಪಂಚಾಯತ್‌ಗಳು ಘನ ತ್ಯಾಜ್ಯ ಮನೆಮನೆಗಳಿಂದ ಸಂಗ್ರಹ ಮಾಡುತ್ತಿದೆ. ಬಜಪೆ ಪಟ್ಟಣ ಪಂಚಾಯತ್‌ ತ್ಯಾಜ್ಯದಿಂದ ಲಾಭಗಳಿಸುವ ಬಗ್ಗೆ ಹೆಚ್ಚು ಪ್ರಯತ್ನ ಮಾಡಬೇಕಾಗಿದೆ. ತ್ಯಾಜ್ಯ ಒಂದು ಸಮಸ್ಯೆ ಅಲ್ಲ ಅದು ಲಾಭ ಎಂದು ತೋರಿಸಿಕೊಡಬೇಕು.

ಘನ ತ್ಯಾಜ್ಯ ಸಂಗ್ರಹ ಈಗ ಪೇಟೆಯಲ್ಲಿ ಮಾತ್ರ ನಿರ್ವಹಣೆಯಾಗುತ್ತಿದೆ. ಇದನ್ನು ವಿಂಗಡಿಸುವ ಕಾರ್ಯ ಪಟ್ಟಣ ಪಂಚಾಯತ್‌ ಸಮೀಪದಲ್ಲೇ ನಡೆಯುತ್ತಿದೆ. ಈ ಜವಾಬ್ದಾರಿಯನ್ನು ಎಡಪದವಿನಲ್ಲಿ ಆರಂಭದಲ್ಲಿ ಘನ ತ್ಯಾಜ್ಯ ಘಟಕಕ್ಕೆ ನೀಡಬಹುದು. ಬಜಪೆ ಪಟ್ಟಣ ಪಂಚಾಯತ್‌ ಗೆ ತ್ಯಾಜ್ಯ ಘಟಕಕ್ಕೆ ಜಾಗ ಕಾಯ್ದಿರಿಸುವ ಹಾಗೂ ನಿರ್ಮಾಣವಾಗುವವರೆಗೆ ಸದ್ಯ ಪಚ್ಚನಾಡಿ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕಿದೆ.

*ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next