ಬೆಂಗಳೂರು: ಈ ಬಾರಿ ಎಸೆಸೆಲ್ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮತ್ತು ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ ಮೊದಲಾದ ಕೋರ್ಸ್‌ಗಳ ಸೆಮಿಸ್ಟರ್ ಪರೀಕ್ಷೆ ಬರೆಯಲು ನಿಗದಿತ ಹಾಜರಾತಿಯ ಅಡ್ಡಿ ಇಲ್ಲ!
ವಾರ್ಷಿಕ ಅಥವಾ ಸೆಮಿಸ್ಟರ್ ಪರೀಕ್ಷೆ ಗಳನ್ನು ಶಾಲಾ ಹಾಜರಾತಿ ಇಲ್ಲದೆಯೂ ಎದುರಿಸಬಹುದು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಹ್ವತದ ನಿರ್ಧಾರ ವನ್ನು ಶೀಘ್ರವೇ ತೆಗೆದು ಕೊಳ್ಳಲಿದೆ. ಕೋವಿಡ್ ಕಾರಣ ಇಲಾಖೆಯ ಇತಿ ಹಾಸ ದಲ್ಲೇ ಮೊದಲ ಬಾರಿಗೆ ಕನಿಷ್ಠ ಹಾಜರಾತಿ ನಿಯಮದಲ್ಲಿ ವಿನಾಯಿತಿ ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈಗಾಗಲೇ ಎಸೆಸೆಲ್ಸಿ, ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ, ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆ ದಿನಾಂಕ ನಿಗದಿಯಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಕೋರ್ಸ್‌ಗಳ ಸೆಮಿಸ್ಟರ್ ಪರೀಕ್ಷೆಯ ದಿನಾಂಕ ಗಳನ್ನು ಆಯಾ ವಿ.ವಿ.ಗಳು ನಿರ್ಧ ರಿಸು ತ್ತಿವೆ. ಆದರೆ ಈ ಬಾರಿ ಯಾರಿಗೂ ಕನಿಷ್ಠ ಹಾಜರಾತಿ ಸಮಸ್ಯೆ ಉದ್ಭವಿಸದು.
ಹಳೆಯ ನಿಯಮದ ಪ್ರಕಾರ, ವರ್ಷ ಪೂರ್ತಿ ಅಥವಾ ಸೆಮಿಸ್ಟರ್‌ನಲ್ಲಿ ಶೇ. 70 ಅಥವಾ ಶೇ. 75ರಷ್ಟು ಹಾಜರಾತಿ ಇರಲೇ ಬೇಕಿತ್ತು. ಹಾಜರಾತಿಯ ಕೊರತೆಯಿಂದ ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ನಿಯಮ ಸಡಿಲಿಕೆ ಮಾಡಲಾಗಿ ದ್ದರೂ ನೇರ ತರಗತಿ, ಆನ್‌ಲೈನ್ ಅಥವಾ ಆಫ್ಲೈನ್ ಹೀಗೆ ಯಾವು ದಾದರೂ ವಿಧಾನದಲ್ಲಿ ವಿದ್ಯಾರ್ಥಿ ಗಳ ಹಾಜರಾತಿಯನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್) ಮೂಲಕ ನಿತ್ಯವೂ ದಾಖಲಿಸ ಲಾಗುತ್ತಿದೆ. ವಿದ್ಯಾರ್ಥಿಗಳು ಕಲಿಕೆ ಮುಂದುವರಿಸ ಬೇಕೆಂಬ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ.
ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಕನಿಷ್ಠ ಹಾಜರಾತಿ ನಿಯಮದಿಂದ ವಿನಾಯಿತಿ ಇರಲಿದೆ. ಆದರೆ ನೇರ ತರಗತಿಗೆ ಹಾಜರಾಗುವ ಮೂಲಕ ಅಥವಾ ಅನ್ಯ ವಿಧಾನದಿಂದ ವಿದ್ಯಾರ್ಥಿಗಳು ಕಲಿಕೆಯ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು.
– ಆರ್. ಸ್ನೇಹಲ್,ಪ.ಪೂ. ಶಿಕ್ಷಣ ಇಲಾಖೆಯ ನಿರ್ದೇಶಕಿ
ಪದವಿ ವಿದ್ಯಾರ್ಥಿಗಳ ಹಾಜರಾತಿ ಏರಿಕೆಯಾಗು ತ್ತಿದೆ. ವಿಜ್ಞಾನ ವಿದ್ಯಾರ್ಥಿಗಳ ಹಾಜರಾತಿ ಇನ್ನೂ ಚೆನ್ನಾಗಿದೆ. ಸೆಮಿಸ್ಟರ್ ಪರೀಕ್ಷೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಆಯಾ ವಿ.ವಿ.ಗಳೇ ನಿರ್ಧರಿಸಿಕೊಳ್ಳಲಿವೆ.
–ಪ್ರೊ| ಎಸ್. ಮಲ್ಲೇಶ್ವರಪ್ಪ , ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ
- ರಾಜು ಖಾರ್ವಿ ಕೊಡೇರಿ