ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಂಭವಿಸಿದ ರೈತರ ಸಾವಿನ ಅಂಕಿಅಂಶ ಸರ್ಕಾರದ ಬಳಿ ಇಲ್ಲ. ಅಲ್ಲದೇ ಕೃಷಿ ಕಾಯ್ದೆಯನ್ನು ಈಗ ರದ್ದುಪಡಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ
ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ವೇಳೆ ಸಾವನ್ನಪ್ಪಿರುವ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಧನ ನೀಡಲಿದೆಯೇ ಎಂದು ವಿಪಕ್ಷಗಳು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ತೋಮರ್, ರೈತರ ಸಾವಿನ ಕುರಿತು ಕೃಷಿ ಸಚಿವಾಲಯದಲ್ಲಿ ಯಾವುದೇ ಅಂಕಿಅಂಶಗಳಿಲ್ಲ. ಹೀಗಾಗಿ ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.
2020ರ ನವೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಸಿಂಘು, ಟಿಕ್ರಿ ಮತ್ತು ಘಾಜಿಪುರ್ ಗಡಿಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ 700ಕ್ಕೂ ಅಧಿಕ ರೈತರು ಸಾವನ್ನಪ್ಪಿರುವುದಾಗಿ ರೈತ ಮುಖಂಡರು ಆರೋಪಿಸಿದ್ದರು.
ಪ್ರತಿಭಟನೆ ವೇಳೆ ಹವಾಮಾನ ವೈಪರೀತ್ಯ, ಅನಾರೋಗ್ಯ ಮತ್ತು ಆತ್ಮಹತ್ಯೆಯಿಂದ ರೈತರ ಸಾವು ಸಂಭವಿಸಿತ್ತು ಎಂದು ವರದಿ ತಿಳಿಸಿದೆ. ಕೇಂದ್ರದ ಕೃಷಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಬಳಿಕ ನವೆಂಬರ್ 29ರಂದು ಸಂಸತ್ ಚಳಿಗಾಲದ ಅಧಿವೇಶನ ಆರಂಭವಾದ ಮೊದಲ ದಿನವೇ ವಿಪಕ್ಷಗಳ ಕೋಲಾಹಲದ ನಡುವೆಯೆ ಕೃಷಿ ಕಾಯ್ದೆಯನ್ನು ರದ್ದುಪಡಿಸುವ ಮಸೂದೆ ಅಂಗೀಕಾರಗೊಂಡಿತ್ತು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರು, ಯಾವುದೇ ಚರ್ಚೆ ಇಲ್ಲದೇ ಕೃಷಿ ಕಾಯ್ದೆಯನ್ನು ರದ್ದುಪಡಿಸಿರುವ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಮಗೆ ಎಂಎಸ್ ಪಿ ಬಗ್ಗೆ ಚರ್ಚೆಯಾಗಬೇಕಿದೆ, ಲಖೀಂಪುರ್ ಘಟನೆ ಹಾಗೂ ಪ್ರತಿಭಟನೆ ವೇಳೆ ಸಾವನ್ನಪ್ಪಿರುವ 700 ರೈತರ ಸಾವಿನ ಕುರಿತು ಕಲಾಪದಲ್ಲಿ ಚರ್ಚೆ ನಡೆಸಬೇಕಾಗಿದೆ. ಆದರೆ ದುರಾದೃಷ್ಟವಶಾತ್ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.