Advertisement

ಗಾಂಧಿನಗರದಲ್ಲಿ ನಕಲಿ ಓಟರ್‌ ಐಡಿ ಸಿಕ್ಕಿಲ್ಲ

12:20 AM Apr 17, 2019 | Lakshmi GovindaRaju |

ಬೆಂಗಳೂರು: “ಗಾಂಧಿನಗರದ ಪ್ರಭಾತ್‌ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ರಾತ್ರಿ ನಡೆದಿರುವುದು ನಕಲಿ ಮತದಾರರ ಗುರುತಿನ ಚೀಟಿ ತಯಾರಿಕೆ ಅಥವಾ ನಕಲಿ ಮತದಾರರ ಚೀಟಿ (ಓಟರ್‌ ಸ್ಲಿಪ್‌) ತಯಾರಿಕೆ ಪ್ರಕರಣ ಅಲ್ಲ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ನಗರದ ಪ್ರಭಾತ್‌ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯ ಕೊಠಡಿ ಸಂಖ್ಯೆ 313ರಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಲಾಗುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ದೇವರಾಜ್‌ ಅವರ ನೇತೃತ್ವದ ಫ್ಲೈಯಿಂಗ್‌ ಸ್ಕ್ವಾಡ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಿಯಮದ ಪ್ರಕಾರ ಓಟರ್‌ ಸ್ಲಿಪ್‌ ಮೇಲೆ ಪಕ್ಷದ ಹೆಸರು, ಚಿನ್ಹೆ, ಗುರುತು, ಅಭ್ಯರ್ಥಿ ಹೆಸರು ಹಾಗೂ ಫೋಟೋ ಪ್ರಕಟಿಸುವಂತಿಲ್ಲ. ಆದರೆ, ಘಟನೆ ನಡೆದ ಸ್ಥಳದಲ್ಲಿ ತಪಾಸಣೆ ನಡೆಸಿದ ವೇಳೆ ಒಂದು ನಿರ್ದಿಷ್ಟ ಪಕ್ಷದ ಹೆಸರು, ಚಿನ್ಹೆ, ಅಭ್ಯರ್ಥಿ ಹೆಸರು ಮತ್ತು ಫೋಟೋ ಮುದ್ರಿಸಿದ ಓಟರ್‌ ಸ್ಲಿಪ್‌ಗ್ಳು ಪತ್ತೆಯಾಗಿವೆ. ಅದರಂತೆ ಆರ್‌ಪಿ ಕಾಯ್ದೆ 127 (ಎ) ಹಾಗೂ ಐಪಿಸಿ 171 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.

ಅಲ್ಲದೇ ಘಟನೆ ಸ್ಥಳದಲ್ಲಿ ಕಂಪ್ಯೂಟರ್‌ ಮಾನಿಟರ್‌ಗಳು, 10 ಸಿಪಿಯು, 8 ಕೀ ಬೋರ್ಡ್‌, ಒಂದು ಸ್ಕ್ಯಾನರ್‌, 3 ಲ್ಯಾಪ್‌ಟಾಪ್‌, 270 ಹ್ಯಾಂಡ್‌ ಪ್ರಿಂಟರ್, 45 ಖಾಲಿ ಪ್ಯಾಕೆಟ್‌ಗಳು, 400 ಚಾರ್ಜರ್, 50 ಬ್ಯಾಟರಿಗಳು, 450 ಪೇಪರ್‌ ರೊಲ್‌ ಹಾಗೂ ಭಾಗ ಸಂಖ್ಯೆ 88 ಮತ್ತು 104 ಮತದಾರರ ಪಟ್ಟಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸಂಜೀವ್‌ ಕುಮಾರ್‌ ಮಾಹಿತಿ ನೀಡಿದರು.

ಕಾಂಗ್ರೆಸ್‌ ಕಚೇರಿಯಿಂದ ಪಟ್ಟಿ: “ನಾನು ಕಾಂಗ್ರೆಸ್‌ ಪಕ್ಷದ ಮುಖ್ಯ ಕಚೇರಿಯಿಂದ ಮತದಾರರ ಪಟ್ಟಿ ಪಡೆದುಕೊಂಡಿದ್ದೇನೆ. ವಲಸೆ ಹಾಗೂ ಸ್ಥಳಾಂತರಗೊಂಡ ಮತದಾರರಿಗೆ ಅವರ ಮತಗಟ್ಟೆಯ ಬಗ್ಗೆ ಮಾಹಿತಿ, ಮತದಾನ ಪ್ರಮಾಣ ಹೆಚ್ಚಿಸುವುದೇ ತನ್ನ ಉದ್ದೇಶ. ನನ್ನೊಂದಿಗೆ ಇನ್ನೂ ಹಲವರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಇಬ್ರಾಹಿಂ ಹೇಳಿರುವುದಾಗಿ ಸಂಜೀವ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ ಅಭ್ಯರ್ಥಿ ಪರ ಕೆಲಸ: ಈ ವೇಳೆ ಪರಿಶೀಲನಾ ತಂಡ ಇಬ್ರಾಹಿಂ ಎಂಬವರನ್ನು ವಿಚಾರಣೆಗೆ ಒಳಪಡಿಸಿದೆ. ತಾನು ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದು, ಪಕ್ಷದ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಮತದಾರರ ವಲಸೆ ಮತ್ತು ಸ್ಥಳಾಂತರದ ಟ್ರೆಂಡ್‌ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತಿದೆ.

ಈ ಕಾರಣಕ್ಕಾಗಿ 2018ರ ಅಕ್ಟೋಬರ್‌ನಿಂದ ಸ್ವಯಂ ಸೇವಕರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ-ಮನೆಗೆ ಭೇಟಿ ಕೊಟ್ಟು ಸಮೀಕ್ಷೆ ನಡೆಸಿದ್ದಾರೆ. ಅದರ ಆಧಾರದಲ್ಲಿ ಕ್ಷೇತ್ರದಲ್ಲಿ ಹಾಲಿ ಇರುವ ಹಾಗೂ ಸ್ಥಳಾಂತರಗೊಂಡ ಮತದಾರರ ಕುರಿತು ಅಧ್ಯಯನ ವರದಿ ಸಿದ್ಧಪಡಿಸುತ್ತಿದ್ದೆವು ಎಂದು ಹೇಳಿಕೆ ನೀಡಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next