Advertisement

ಸೌಲಭ್ಯವಿಲ್ಲದ ಜನೌಷಧ ಕೇಂದ್ರ

04:32 PM Nov 05, 2022 | Team Udayavani |

ಗೌರಿಬಿದನೂರು: ಮಾರುಕಟ್ಟೆ ದರಕ್ಕಿಂತ ರಿಯಾಯಿತಿ ದರದಲ್ಲಿ ಜನರಿಗೆ ಔಷಧಗಳನ್ನು ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರ ಜನಸಾಮಾನ್ಯರ ಪಾಲಿಗೆ ಮರೀಚಿಕೆ ಆಗುತ್ತಿದೆಯೇ? ಎಂಬ ಅನುಮಾನ ಗೌರಿಬಿದನೂರು ಜನೌಷಧಿ ಕೇಂದ್ರದಲ್ಲಿ ಕಾಡಲಾರಂಭಿಸಿದೆ.

Advertisement

ವೈದ್ಯರ ಚೀಟಿ ಹಿಡಿದು ಬರುವ ಇಲ್ಲಿನ ಜನೌಷಧ ಕೇಂದ್ರದಲ್ಲಿ ಅವರು ಕೇಳುವ ಔಷಧ ದೊರೆಯದೇ ವಾಪಸ್‌ ಮರಳುವ ಸ್ಥಿತಿ ಬಂದೊದಗಿದೆ. ಕೇಂದ್ರಕ್ಕೆ ಸೂಕ್ತ ಸೌಲಭ್ಯ ಒದಗಿಸದ ಕಾರಣ ಜನರಲ್ಲಿ ಭ್ರಮ ನಿರಸನ ಮೂಡಿಸುತ್ತಿದೆ. ತಾಲೂಕು ಕೇಂದ್ರ ಗೌರಿಬಿದನೂರಿನಲ್ಲಿರುವ ಜನೌಷಧಿಕೇಂದ್ರವು ಹಳೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿದ್ದು ಈಗ ಹಳೆಯ ಆಸ್ಪತ್ರೆಯನ್ನು ಕೆಡವಿ ಹೊಸ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಾರಂಭಿಸಿರುವುದರಿಂದ ವಿದ್ಯುತ್‌ ಸಂಪರ್ಕವನ್ನು ಕಡಿತವಾಗಿದೆ. ಇನ್ಸುಲಿನ್‌ ಸೇರಿದಂತೆ ಫ್ರಿಜ್ಡ್ ನಲ್ಲಿ ಸಂಗ್ರಹಿಸುವಂತಹ ಔಷಧಿಗಳನ್ನು ಸಂಗ್ರಹಿಸಲು ವಿದ್ಯುತ್‌ ಕೊರತೆ ಹಾಗೂ ಈ ಬಗ್ಗೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್‌ ಅವರ ನಿರ್ಲಕ್ಷ್ಯ ಧೋರಣೆ 3-4ತಿಂಗಳಿಂದ ಸಮಸ್ಯೆ ಹಾಗೆಯೇ ಮುಂದುವರಿಯಲು ಕಾರಣವಾಗಿದೆ. ಖಾಸಗಿ ಮೆಡಿಕಲ್‌ಗ‌ಳಿಗೆ ವರದಾನ: ಜನೌಷಧಿ ಕೇಂದ್ರಗಳು ಜಾರಿಗೆ ಬಂದಾಗ ಸಾಮಾನ್ಯ ಜನ ಖುಷಿಪಟ್ಟಿದ್ದರು. ಪ್ರತಿ ಔಷಧವೂ ಮಾರುಕಟ್ಟೆ ದರಕ್ಕಿಂತ ಶೇ. 60- 70 ಕಡಿಮೆ ದರದಲ್ಲಿ ಸಿಗಲಿದೆ ಎಂದು ಹಿಗ್ಗಿದ್ದರು. ಆದರೆ ಪದೇ ಪದೆ ಇಲ್ಲಿ ಔಷಧಗಳ ಕೊರತೆ ಉಂಟಾದರೆ ಜನ ಯಥಾಪ್ರಕಾರ ಖಾಸಗಿ ಮೆಡಿಕಲ್‌ಗ‌ಳನ್ನೇ ಆಶ್ರಯಿಸಬೇಕಾಗಿದೆ. ‌

ಹೀಗಾಗಿ ಖಾಸಗಿ ಮೆಡಿಕಲ್‌ಗ‌ಳಿಗೆ ವರದಾನವಾಗಿ ಪರಿಣಮಿಸಿದೆ. ವೈದ್ಯರು ಬರೆದು ಕೊಡುವ ನಿರ್ದಿಷ್ಟ ಹೆಸರಿನ ಮೆಡಿಸಿನ್‌ಗಳು ಜನೌಷಧ ಕೇಂದ್ರದಲ್ಲಿ ಇಲ್ಲದೇ ಇದ್ದಾಗ ಅದೇ ಸ್ವರೂಪದ ಬೇರೆ ಹೆಸರಿನ ಮೆಡಿಸಿನ್‌ ಕೊಡಲಾಗುತ್ತದೆ. ಆದರೆ ಹೆಚ್ಚಿನ ಸಂದರ್ಭ ವೈದ್ಯರು ಬರೆದ ನಿರ್ದಿಷ್ಟ ಹೆಸರಿನ ಔಷಧ ಮೆಡಿಕಲ್‌ಗ‌ಳಲ್ಲಿ ಸಿಗುವಂಥದ್ದೇ ಆಗಿರುತ್ತದೆ.

ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ನಡೆಸುತ್ತಿರುವುದು ಹಾಗೂ ಪ್ರಾಂಚೈಸಿ ಎಂಎಸ್‌ ಐಎಲ್‌ ನವರು ಆಗಿರುವುದರಿಂದ ಅವರೇ ಅಂಗಡಿ ಹಾಗೂ ವಿದ್ಯುತ್‌ ವ್ಯವಸ್ಥೆ ಮಾಡಬೇಕು ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಲು ಯಾವುದೇ ಅವಕಾಶ ಅಥವಾ ಅಧಿಕಾರವಿಲ್ಲ. -ಡಾ. ಒ. ರತ್ನಮ್ಮ,ಗೌರಿಬಿದನೂರು ಆರೋಗ್ಯಾಧಿಕಾರಿ

ನಗರದ ಹೃದಯ ಭಾಗದಲ್ಲಿರುವ ಜನೌಷಧಿಕೇಂದ್ರಕ್ಕೆ ತಕ್ಷಣವೇ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಮಾಡಲು ಗುತ್ತಿಗೆ ದಾರರಿಗೆ ಸೂಚಿಸಲಾಗಿದ್ದು ಈ ಬಗ್ಗೆ ನ.4ರಂದು ಸ್ಥಳಕ್ಕೆ ಭೇಟಿ ನೀಡಲಿದ್ದೇವೆ. ಎಂಸಿಎಚ್‌ ಆಸ್ಪತ್ರೆ ಬಳಿಯಲ್ಲೂ ಜನೌಷಧಿ ಕೇಂದ್ರದ 2ನೇ ಘಟಕ ಸ್ಥಾಪಿಸಲು ಎಲ್ಲಾ ಕ್ರಮಕೈಗೊಳ್ಳಲಾಗುತ್ತದೆ. -ಮಹೇಶ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ

Advertisement

ಜನೌಷಧಿ ಮಳಿಗೆಯ ಅವ್ಯವಸ್ಥೆ ಸರಿಪಡಿಸಿ ಬಡವರಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯುವಂತೆ ಮಾಡಬೇಕೆಂಬ ಬದ್ಧತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗಾಗಲೀ, ಎಂಎಸ್‌ಐಎಲ್‌ ಅಧಿಕಾರಿಗಳಿಗಾಗಲೀ ಇಲ್ಲದಿರುವುದರಿಂದ ಒಬ್ಬರಮೇಲೊಬ್ಬರು ದೂರುತ್ತಾ ಬೇಬೇಜವಾಬ್ದಾರಿ ತೋರುತ್ತಿದ್ದಾರೆ. -ಕಾದಲವೇಣಿ ಮೋಹನ್‌ ಕುಮಾರ್‌, ಕನ್ನಡ ಪರ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next