ಕುರುಗೋಡು: ಸಮೀಪದ ರಾಮಚಂದ್ರಪುರ ಕ್ಯಾಂಪ್‌ನ 15ನೇ ಅಂಗನವಾಡಿ ಕೇಂದ್ರಕ್ಕೆ ಮೂಲ ಸೌಲಭ್ಯಗಳ ಕೊರತೆ ಉಂಟಾಗಿದೆ. ಅಂಗನವಾಡಿ ಕೇಂದ್ರ 2016ನೇ ಸಾಲಿನಲ್ಲಿ ನಿರ್ಮಾಣವಾಗಿದ್ದು, ಅಂದಿನಿಂದ ಕೇಂದ್ರಕ್ಕೆ ಅಗತ್ಯ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಪೂರೈಕೆ, ತಡೆಗೋಡೆ, ಕೇಂದ್ರಕ್ಕೆ ಸೂಕ್ತವಾದ ರಸ್ತೆ ಸೇರಿದಂತೆ ಇತರೆ ಸೌಲಭ್ಯಗಳು ಕಾಣದೆ ವಂಚಿತಗೊಂಡಿದೆ.
ಕೇಂದ್ರದಲ್ಲಿ ಸುಮಾರು 65 ಮಕ್ಕಳು ಸೇರಿದಂತೆ 1 ಅಂಗನವಾಡಿ ಶಿಕ್ಷಕರು, 1 ಕೇಂದ್ರದ ಸಹಾಯಕರು ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಸೂಕ್ತವಾದ ರಕ್ಷಣೆ ಇಲ್ಲದಂತಾಗಿದೆ. ಮೂಲ ಸೌಲಭ್ಯಗಳು ಕುರಿತು ಸ್ಥಳೀಯ ಗ್ರಾಪಂ ಇಲಾಖೆಗೆ ಮತ್ತು ಸಂಬಂಧಿಸಿದ ಇಲಾಖೆ ಅ ಧಿಕಾರಿಗಳಿಗೆ ಹಲವು ಬಾರಿ ಮನವಿ
ಸಲ್ಲಿಸಿದರೂ ಭರವಸೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹೊರತು ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ.
ಕುಡಿಯುವ ನೀರಿನ ಸಮಸ್ಯೆ: ಕೇಂದ್ರ ನಿರ್ಮಾಣಗೊಂಡಾಗನಿಂದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಕೇಂದ್ರದಲ್ಲಿ ಮಕ್ಕಳಿಗೆ ಕುಡಿಯುವುದಕ್ಕೆ ಹಾಗೂ ಅಡುಗೆಗೆ ಬಳಸುವುದಕ್ಕೆ ಕ್ಯಾಂಪ್‌ನ ಸಾರ್ವಜನಿಕರ ಮನೆಗಳ ಮುಂದೆ ಇರುವ ನಲ್ಲಿಗೆ ಅಡುಗೆ ಸಹಾಯಕರು ತೆರಳಿ ನೀರು ಹಿಡಿದುಕೊಂಡು ಬಂದು ಪ್ರತಿಯೊಂದು ಕೆಲಸಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಕೇಂದ್ರಕ್ಕೆ 2016 ರಿಂದ ಇಂದಿನವರೆಗೆ ವಿದ್ಯುತ್ ಪೂರೈಕೆ ಇಲ್ಲದ ಪರಿಣಾಮ ಪ್ಯಾನ್ ವ್ಯವಸ್ಥೆ ಇಲ್ಲದೆ ಬಿಸಿಲಿನ ತಾಪದೊಂದಿಗೆ ಮಕ್ಕಳು ಕಲಿಕೆ ಕಲಿಯಬೇಕಾಗಿದೆ.
ತಡೆಗೋಡೆ ಮರೀಚಿಕೆ: ಕೇಂದ್ರದ ಸುತ್ತಮುತ್ತ ಹೊಲ ಗದ್ದೆಗಳು ಇದ್ದು, ಕೇಂದ್ರಕ್ಕೆ ಸೂಕ್ತವಾದ ತಡೆಗೋಡೆ ಇಲ್ಲದಂತಾಗಿದೆ. ಇನ್ನೂ ಕೇಂದ್ರದ ಅಕ್ಕಪಕ್ಕದಲ್ಲಿ ಗಿಡಗಂಟೆಗಳು ಬೆಳೆದಿದ್ದು ಮಕ್ಕಳು ಕೇಂದ್ರದಿಂದ ಹೊರಗಡೆ ಬರುವುದು ಕಷ್ಟಕರವಾಗಿದೆ. ಕೇಂದ್ರಕ್ಕೆ ಬರಲು ಸೂಕ್ತ ರಸ್ತೆ ಇಲ್ಲದಾಗಿದೆ. ಹೊಲ ಗದ್ದೆಗಳನ್ನು
ದಾಟಿಕೊಂಡು ಬರಬೇಕಾದ ಸ್ಥಿತಿ ಉದ್ಭವಿಸಿದೆ. ಇನ್ನೂ ಕೇಂದ್ರಕ್ಕೆ ಒಂದು ರಸ್ತೆ ಇದ್ದರೂ ಅದು ಉಪಯೋಗಕ್ಕೆ ಬಾರದಂತಾಗಿದೆ. ಅದರ ತುಂಬ ಹುಲ್ಲು ಬೆಳೆದು
ಸುತ್ತಮುತ್ತ ಗಿಡಗಂಟೆಗಳು ಬೆಳದಿವೆ. ಇದರ ಮಧ್ಯೆ ಓಡಾಡಲು ಕಷ್ಟಕರವಾಗಿದೆ.
ನಿರುಪಯುಕ್ತ ಶೌಚಾಲಯ: ಕೇಂದ್ರದಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಇದ್ದಂತ ಒಂದು ಶೌಚಾಲಯ ಉಪಯೋಗಿಸದೆ ನಿರುಪಯುಕ್ತತೆಯಲ್ಲಿದೆ. ಮಕ್ಕಳು
ಶೌಚಕ್ಕೆ ಬಯಲು ಜಾಗವನ್ನೇ ಬಳಸಬೇಕಾಗಿದೆ. ಸುತ್ತಮುತ್ತ ಗಿಡಗಂಟೆಗಳು ಇದ್ದು ಆತಂಕದಲ್ಲಿ ಪ್ರತಿಯೊಬ್ಬರು ಕಾಲಕಳೆಯಬೇಕಾಗಿದೆ.
ರಾಮಚಂದ್ರಾಪುರ ಕ್ಯಾಂಪ್‌ನ 15ನೇ ಅಂಗನವಾಡಿ ಕೇಂದ್ರದ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿತು ಸಂಬಂಧಿ ಸಿದ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣವೇ ಕೇಂದ್ರಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಜೆ.ಎನ್.ಗಣೇಶ್, ಶಾಸಕರು ಕಂಪ್ಲಿ ವಿಧಾನಸಭಾ ಕ್ಷೇತ್ರ
ಸುಧಾಕರ್ ಮಣ್ಣೂರು