Advertisement

ಸೌಕರ್ಯವಿಲ್ಲದೆ ಕೆಂಪೇಗೌಡ ಬಡಾವಣೆ ನಿವೇಶನದಾರರ ಪರದಾಟ

02:00 PM Oct 06, 2022 | Team Udayavani |

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆ ಮೂಲಸೌಕರ್ಯ ಕಾಮಗಾರಿ ಪ್ರಗತಿ ಹಾಗೂ ಹೆಚ್ಚುವರಿ ಅನುದಾನ ನೀಡುವ ಸಂಬಂಧ ಸಮಗ್ರ ಲೆಕ್ಕಪರಿಶೋಧನಾ ವರದಿ ಸಲ್ಲಿಕೆಯಾಗುವಲ್ಲಿನ ವಿಳಂಬದಿಂದಾಗಿ ನಿವೇಶನದಾರರು ಮನೆ ನಿರ್ಮಾಣ ಮಾಡಲಾದೆ ಪರದಾಡುವಂತಾಗಿದೆ.

Advertisement

ಬಿಡಿಎ 2,652 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಸೌಕರ್ಯ ಒದಗಿಸುವ ಕಾಮಗಾರಿಯನ್ನು 2017-18ರಿಂದ ಆರಂಭಿಸಲಾಗಿದೆ. ರಸ್ತೆ, ಚರಂಡಿ, ವಿದ್ಯುತ್‌ ಕಂಬ ಇನ್ನಿತರ ಮೂಲಸೌಕರ್ಯ ಕಾಮಗಾರಿಗಳಿಗಾಗಿ 2,600 ಕೋಟಿ ರೂ. ನಿಗದಿ ಮಾಡಲಾಗಿದೆ. ಈಗಾಗಲೇ ಕಾಮಗಾರಿ ಆರಂಭಿಸಲಾಗಿದ್ದರೂ, ಅನುದಾನ ಕೊರತೆ ಎದುರಾಗುವಂತಾಗಿದೆ.

ಹೀಗಾಗಿ ಉಳಿದ ಕಾಮಗಾರಿಗಾಗಿ ಹೆಚ್ಚುವರಿಯಾಗಿ 650 ಕೋಟಿ ರೂ. ಅವಶ್ಯಕತೆಯಿದ್ದು, ಅದನ್ನು ಬಿಡುಗಡೆ ಮಾಡುವಂತೆ ಗುತ್ತಿಗೆ ಸಂಸ್ಥೆಗಳು ಕೋರಿವೆ. ಆದರೆ, ಹೆಚ್ಚುವರಿ ಅನುದಾನ ನೀಡುವುದಕ್ಕೂ ಮುಂಚೆ ಅನುದಾನದ ಅಗತ್ಯ ಎಷ್ಟಿದೆ ಎಂಬ ಬಗ್ಗೆ ಮೂರನೇ ಸಂಸ್ಥೆಯಿಂದ ಲೆಕ್ಕಪರಿಶೋಧನೆ ಮಾಡಿಸುವುದಾಗಿ ಬಿಡಿಎ ತಿಳಿಸಿದೆ. ಆದರೆ, ಈವರೆಗೆ ಲೆಕ್ಕಪರಿಶೋಧನೆ ಮಾಡಿಸಲು ಬಿಡಿಎ ಸಮರ್ಪಕ ಕ್ರಮ ಕೈಗೊಂಡಿಲ್ಲ.

ಹೆಚ್ಚುವರಿ ಅನುದಾನಕ್ಕೆ ಗುತ್ತಿಗೆದಾರರು 2016ರಿಂದಲೂ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಬಿಡಿಎ ಅದರ ಬಗ್ಗೆ ಗಮನಹರಿಸಿರಲಿಲ್ಲ. 2021ರ ಜನವರಿಯಲ್ಲಿ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿ ಬಿಡಿಎ, ಜಲಮಂಡಳಿ, ಬೆಸ್ಕಾಂ ಸೇರಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ಆಂತರಿಕ ಸಮಿತಿಯ ಲೆಕ್ಕಪರಿಶೋಧನೆಗೆ ನಿರ್ಧರಿಸಲಾಯಿತು. ಅದರಂತೆ ಆಂತರಿಕ ಸಮಿತಿಯು ಸ್ಥಳ ಪರಿಶೀಲನೆ ಸೇರಿ ಇನ್ನಿತರ ಕ್ರಮ ಕೈಗೊಂಡು 650 ಕೋಟಿ ರೂ. ಬೇಡಿಕೆ ಸಮ್ಮತವಾಗಿದೆ ಎಂದು ವರದಿಯನ್ನೂ ನೀಡಿತ್ತು.

ಅದಾದ ನಂತರ ಮುಖ್ಯಮಂತ್ರಿಗಳು 3ನೇ ಸಂಸ್ಥೆಯಿಂದ ಲೆಕ್ಕಪರಿಶೋಧನೆ ನಡೆಸಿ ವರದಿ ಪಡೆಯುವಂತೆ ಸೂಚಿಸಿದರು. ಅದರಂತೆ 2022ರ ಫೆಬ್ರವರಿಯಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಲೆಕ್ಕಪರಿಶೋಧನೆಯ ವರದಿ ನೀಡುವ ಹೊಣೆಯನ್ನು ನೀಡಲಾಯಿತು. ಲೆಕ್ಕಪರಿಶೋಧನೆ ಕೆಲಸ ಆರಂಭಿಸಿದ ಸಂಸ್ಥೆ ಮತ್ತು ಬಿಡಿಎ ನಡುವೆ ಟೆಂಡರ್‌ ಮೊತ್ತದ ನಡುವೆ ಗುದ್ದಾಟ ಆರಂಭವಾಯಿತು. ಖಾಸಗಿ ಸಂಸ್ಥೆ ಲೆಕ್ಕಪರಿಶೋಧನೆಗೆ 9 ಕೋಟಿ ರೂ.ಗೆ ಬೇಡಿಕೆ ಸಲ್ಲಿಸಿದರೆ, ಬಿಡಿಎ ಮಾತ್ರ 2 ಕೋಟಿ ರೂ. ನೀಡುವುದಾಗಿ ತಿಳಿಸಿದೆ. ಈ ಕಾರಣದಿಂದಾಗಿ ಲೆಕ್ಕಪರಿಶೋಧನಾ ವರದಿ ಸಿದ್ಧಪಡಿಸುವ ಕಾರ್ಯ

Advertisement

10 ಸಾವಿರ ನಿವೇಶನದಾರರಿಗೆ ಸಮಸ್ಯೆ

ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ 9,971 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈವರೆಗೆ ಬಡಾವಣೆಯಲ್ಲಿ ಒಂದೂ ಕಟ್ಟಡ ನಿರ್ಮಾಣವಾಗಿಲ್ಲ. ಮೂಲಸೌಕರ್ಯ ಕೊರತೆಯ ಕಾರಣದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಯಾವೊಬ್ಬ ನಿವೇಶನದಾರರು ಮನಸ್ಸು ಮಾಡುತ್ತಿಲ್ಲ. ಲೆಕ್ಕಪರಿಶೋಧನೆ ನಡೆಸಿ ಮೂಲಸೌಕರ್ಯ ಅನುಷ್ಠಾನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಾದ ಬಿಡಿಎ ವೃಥಾ ಕಾಲಹರಣ ಮಾಡುತ್ತಿರುವುದು ನಿವೇಶನದಾರರು ಸಮಸ್ಯೆ ಅನುಭವಿಸುವಂತಾಗಿದೆ. 2016-17ರಲ್ಲಿ ಮೂಲಸೌಕರ್ಯ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯೋಜನಾ ವೆಚ್ಚ ಸಿದ್ಧಪಡಿಸುವ ಸಂದರ್ಭದಲ್ಲಿ ಕಡಿಮೆ ವೆಚ್ಚವನ್ನು ಅಂದಾಜಿಸಿದ್ದೇ ಈಗಿನ ಸಮಸ್ಯೆಗೆ ಕಾರಣ ಎಂಬ ಆರೋಪ ಕೇಳಿಬರುತ್ತಿವೆ. ಮೂಲಸೌಕರ್ಯ ವೆಚ್ಚದ ಕುರಿತಂತೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಸಂದರ್ಭದಲ್ಲಿ ಭೂಮಿಯ ಸಮರ್ಪಕ ವಿಸ್ತೀರ್ಣ, ರಸ್ತೆಯ ಉದ್ದ ಎಷ್ಟಾಗಲಿದೆ? ವಿದ್ಯುತ್‌ ಕಂಬಗಳು ಎಷ್ಟು ಅವಶ್ಯಕವಿದೆ? ಚರಂಡಿಯ ಉದ್ದ ಎಷ್ಟಿರಲಿದೆ? ಎಂಬ ಬಗ್ಗೆ ಸಮರ್ಪಕವಾಗಿ ಲೆಕ್ಕ ಹಾಕದ ಕಾರಣ ನಿಖರ ಯೋಜನಾ ವೆಚ್ಚವನ್ನು ನಿಗದಿ ಮಾಡುವಲ್ಲಿ ಬಿಡಿಎ ಅಧಿಕಾರಿಗಳು ಎಡವಿದ್ದು ಗೊಂದಲಕ್ಕೆ ಕಾರಣವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಡಿಎ ಕಾಲಹರಣ ಮಾಡುತ್ತಿದೆ. ಇದರಿಂದಾಗಿ ನಿವೇಶನದಾರರು ಮನೆ ನಿರ್ಮಾಣ ಸೇರಿ ಇನ್ನಿತರ ಚಟುವಟಿಕೆ ಮಾಡಲು ಸಾಧ್ಯವಾಗದಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಸಮರ್ಪಕ ಉತ್ತರಿಸುತ್ತಿಲ್ಲ. ಶೀಘ್ರ ವಿವಾದ ಇತ್ಯರ್ಥಪಡಿಸಿ ಮೂಲಸೌಕರ್ಯ ಕಲ್ಪಿಸಬೇಕು. ●ಸೂರ್ಯಕಿರಣ್‌, ನಿವೇಶನದಾರ

●ಗಿರೀಶ್‌ ಗರಗ

 

Advertisement

Udayavani is now on Telegram. Click here to join our channel and stay updated with the latest news.

Next