ಬೆಳಗಾವಿ : ಈ ಬಾರಿಯ ಹೊಸವರ್ಷಾಚರಣೆಗೆ ಮಂಗಳವಾರ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬಹಿರಂಗ ಇವೆಂಟ್ ಮಾಡಲು ಅವಕಾಶ ನೀಡಿಲ್ಲ.
ಹೊಸವರ್ಷಾಚರಣೆ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಮಂಗಳವಾರ ಸಿಎಂ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಮಿತಿಯ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸಿಎಂ ಸುದ್ದಿಗಾರರಿಗೆ ಮಾರ್ಗಸೂಚಿಗಳ ಬಗ್ಗೆ ತಿಳಿಸಿದರು.
ಸಭೆ ಮಾಡಿದ ಪ್ರಮುಖವಾದ ಉದ್ದೇಶ ಒಮಿ ಕ್ರಾನ್ ಮತ್ತು ಕೋವಿಡ್ ತಡೆಗಟ್ಟುವುದಾಗಿದೆ. ತಜ್ಞರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ, ಕೆಲವು ಕ್ರಮಗಳ ಕುರಿತು ಶಿಫಾರಸ್ಸು ಮಾಡಿದ್ದಾರೆ. ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಬಹಿರಂಗ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕಲಾಗಿದೆ. ಕ್ಲಬ್ ಗಳು, ರೆಸ್ಟೋರೆಂಟ್ ಗಳಲ್ಲಿ ವಿಶೇಷ ಇವೆಂಟ್ ಮಾಡುವ ಹಾಗೆ ಇಲ್ಲ. ಕ್ಲಬ್ ಗಳಲ್ಲಿ ಸಾಮರ್ಥ್ಯದ 50 % ಗೆ ಮಾತ್ರ ಅವಕಾಶ ಇದೆ. ಅಪಾರ್ಟ್ಮೆಂಟ್ ಗಳಲ್ಲೂ ಬಹಿರಂಗ ಆಚರಣೆಗೆ ಅವಕಾಶ ಇಲ್ಲ. ಎಲ್ಲಾ ಕ್ರಮಗಳನ್ನು ಅಪಾರ್ಟ್ಮೆಂಟ್ ಅಸೋಸಿಯೇಷನ್ ನವರೇ ಮಾಡಬೇಕು. ರಾಜ್ಯಾದ್ಯಂತ ಡಿ. 30 ರಿಂದ 2 ನೇ ಜನವರಿಗೆ ಮಾರ್ಗಸೂಚಿಗಳು ಅನ್ವಯವಾಗಲಿದೆ ಎಂದರು.
ಕ್ಲಬ್ ಗಳಲ್ಲಿ ಸಿಬ್ಬಂದಿ ಆರ್ ಟಿ-ಪಿಸಿಆರ್ ಟೆಸ್ಟ್ ಮಾಡಿಸುವುದು, ಹೊಟೇಲ್, ರೆಸ್ಟೋರೆಂಟ್, ಕ್ಲಬ್ ಗಳಲ್ಲಿ ಕೆಲಸ ನಿರ್ವಹಿಸುವವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆಯುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ.
ಕ್ರಿಸ್ಮಸ್ ಬಹಿರಂಗ ಪಾರ್ಟಿಗಳಿಗೆ ಅವಕಾಶ ಇಲ್ಲ. ಚರ್ಚ್ ಒಳಗೆ ಪ್ರಾರ್ಥನೆ ಮಾಡುವುದ್ದಕ್ಕೆ ಯಾವುದೇ ತೊಂದರೆ ಇಲ್ಲ, ಸಾಮಾಜಿಕ ಅಂತರ ಪಾಲಿಸಬೇಕು ಎಂದರು.