Advertisement

ಭಾರತದೊಂದಿಗೆ ಮಾತುಕತೆಗೆ ವಾತಾವರಣ ಸೂಕ್ತವಾಗಿಲ್ಲ: ಪಾಕ್‌

07:07 PM May 13, 2022 | Team Udayavani |

ಇಸ್ಲಾಮಾಬಾದ್‌:”ಫ‌ಲಪ್ರದ, ರಚನಾತ್ಮಕ ಮಾತುಕತೆಗೆ ಸೂಕ್ತ ವಾತಾವರಣದ ಕೊರತೆಯಿರುವ ಕಾರಣ ಸದ್ಯಕ್ಕೆ ಭಾರತದೊಂದಿಗೆ ಯಾವುದೇ ರೀತಿಯ¬ ಮಾತುಕತೆ ನಡೆಸುವುದಿಲ್ಲ’ ಎಂದು ಪಾಕಿಸ್ತಾನ ಗುರುವಾರ ಸ್ಪಷ್ಟಪಡಿಸಿದೆ.

Advertisement

ಪಾಕಿಸ್ತಾನದಲ್ಲಿ ಸರ್ಕಾರ ಬದಲಾಗಿರುವುದಲ್ಲದೇ, 2 ವರ್ಷಗಳ ಬಳಿಕ ಪಾಕಿಸ್ತಾನವು ತನ್ನ ದೆಹಲಿಯ ಹೈಕಮಿಷನ್‌ನಲ್ಲಿ ವ್ಯಾಪಾರ ಸಚಿವರನ್ನು ನೇಮಕ ಮಾಡಲು ನಿರ್ಧರಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಸಂಬಂಧ ಸುಧಾರಣೆಯಾಗಲಿದೆಯೇ ಎಂಬ ಪ್ರಶ್ನೆ ಮೂಡಿತ್ತು. ಆದರೆ, ಪಾಕ್‌ ವಿದೇಶಾಂಗ ಇಲಾಖೆ ವಕ್ತಾರ ಅಸೀಮ್‌ ಇಫ್ತಿಕಾರ್‌ ಅವರ ಈ ಹೇಳಿಕೆಯು ಎಲ್ಲ ಪ್ರಶ್ನೆಗಳಿಗೂ ತೆರೆ ಎಳೆದಿದೆ.

ಭಾರತದೊಂದಿಗಿನ ಸಂಬಂಧ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಇಫ್ತಿಕಾರ್‌, “ಪಾಕಿಸ್ತಾನದ ಬಹುತೇಕ ಎಲ್ಲ ಸರ್ಕಾರಗಳೂ ಭಾರತದೊಂದಿಗಿನ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸುವಂಥ ನೀತಿಯನ್ನೇ ಪಾಲಿಸುತ್ತಾ ಬಂದಿವೆ. ಈ ವಿಚಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲೇ ಒಮ್ಮತವಿದೆ. ರಾಜತಾಂತ್ರಿಕತೆಯಲ್ಲಿ, ನೀವು ನೇರವಾಗಿ ಬಾಗಿಲು ಮುಚ್ಚಲು ಆಗುವುದೂ ಇಲ್ಲ. ಆದರೆ, ಭಾರತದೊಂದಿಗೆ ಮಾತುಕತೆಗೆ ಇನ್ನೂ ಸೂಕ್ತ ವಾತಾವರಣ ನಿರ್ಮಾಣವಾಗಿಲ್ಲ’ ಎಂದಿದ್ದಾರೆ.

ಭಯೋತ್ಪಾದನೆ ಹಾಗೂ ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಮಾತ್ರ ಪಾಕ್‌ನೊಂದಿಗೆ ಮಾತುಕತೆ ನಡೆಯಲು ಸಾಧ್ಯ ಎಂದು ಭಾರತ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next