Advertisement
ಪ್ರತಿಷ್ಠಿತ ಜಯಮಹಲ್ ರಸ್ತೆಯ ಅರಮನೆ ಮೈದಾನದ ಕಾಂಪೌಂಡ್ ಉದ್ದಕ್ಕೂ ಸುಮಾರು ಒಂದೂವರೆಯಿಂದ ಎರಡು ಕಿ.ಮೀ. ಉದ್ದ ಫುಟ್ಪಾತ್ ನಿರ್ಮಿಸಲಾಗಿದೆ. ಆದರೆ, ನಿರ್ಮಾಣಗೊಂಡ ನಂತರದಿಂದ ಇದುವರೆಗೆ ಪಾದಚಾರಿ ಮಾರ್ಗವಾಗಿ ಅದು ಬಳಕೆ ಆಗೇ ಇಲ್ಲ. ಬದಲಿಗೆ ಬೇಸಿಗೆಯಲ್ಲಿ ಹಣ್ಣುಗಳು, ಚಳಿಗಾಲ ಬಂದರೆ ಬೆಚ್ಚನೆ ಹೊದಿಕೆಗಳು, ಮೇಕೆ ಮತ್ತು ಕುರಿಗಳ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ. ಹೀಗೆ ಋತುಮಾನಕ್ಕೆ ತಕ್ಕಂತೆ ವಿವಿಧ ವರ್ಗದ ವ್ಯಾಪಾರಿಗಳಿಗೆ ವೇದಿಕೆಯಾಗುವ ಮಾರ್ಗದಲ್ಲಿ ಪಾದಚಾರಿಗಳಿಗೆ ನೋ ಎಂಟ್ರಿ.
Related Articles
Advertisement
ಆರ್.ಟಿ.ನಗರ ಸುತ್ತಮುತ್ತಲ ಪ್ರದೇಶದಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯವನ್ನು ಈ ಇದೇ ಜಾಗದಲ್ಲಿ ಅಕ್ರಮವಾಗಿ ಸುರಿಯುತ್ತಿದ್ದಾರೆ. ಈ ಹಿಂದೆ ರಸ್ತೆ ವಿಸ್ತರಣೆಗಾಗಿ ಈ ಜಾಗವನ್ನು ಸ್ವಚ್ಛ ಮಾಡಿದ್ದ ಬಿಬಿಎಂಪಿ, ಆ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಅಲ್ಲಿಯೇ ಬಿಟ್ಟಿದೆ. ಜತೆಗೆ ಹಣ್ಣು ವ್ಯಾಪಾರ ಮಾಡುವರು ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೆ, ರಸ್ತೆ ಪಕ್ಕದಲ್ಲೇ ಹಾಕುತ್ತಿದ್ದಾರೆ. ಇದರಿಂದ ಸೊಳ್ಳೆಗಳು ಹೆಚ್ಚಾಗುತ್ತಿದ್ದು, ದುರ್ವಾಸನೆ, ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಬೀದಿ ದೀಪದ ಸಮಸ್ಯೆ:
ಜಯಮಹಲ್ ರಸ್ತೆಯುದ್ದಕ್ಕೂ ಬೀದಿ ದೀಪದ ಸಮಸ್ಯೆ ಇದೆ. ವಿದ್ಯುತ್ ಕಂಬಗಳಿದ್ದರೂ ಬಲ್ಬ್ ಗಳು ಹಾಳಾಗಿವೆ. ಮೇಖ್ರೀ ವೃತ್ತದಿಂದ ಟಿ.ವಿ ಟವರ್ ಬರುವವರೆಗೆ ಸಂಪೂರ್ಣ ಕತ್ತಲೆ ಆವರಿಸಿರುತ್ತದೆ. ರಾತ್ರಿ ಸಮಯದಲ್ಲಿ ದ್ವಿಚಕ್ರವಾಹನ ಸವಾರರು, ಪಾದಚಾರಿಗಳು ಓಡಾಡಲು ಭಯಪಡುವ ಪರಿಸ್ಥಿತಿಯಿದೆ. ಜತೆಗೆ ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಈಗ ಕುರಿ-ಮೇಕೆ ಕೊಟ್ಟಿಗೆ:
ಜಯಮಹಲ್ ರಸ್ತೆಯ ಟಿ.ವಿ.ಟವರ್ ಬಳಿ ಈಗ ಕುರಿ-ಮೇಕೆ ಮಾರಾಟಗಾರರು ಬೀಡುಬಿಟ್ಟಿದ್ದಾರೆ. 30ಕ್ಕೂ ಹೆಚ್ಚು ಕುರಿ ಮೇಕೆ ಮಾರಾಟಗಾರರಿದ್ದು, ನೂರಕ್ಕೂ ಹೆಚ್ಚು ಮಾರಾಟ ಮಳಿಗೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ.
ಪೊಲೀಸ್ರು, ಪಾಲಿಕೆಗೆ ಹಣ ಕೊಡ್ತೀವಲ್ಲಾ…
ಜಯಮಹಲ್ ರಸ್ತೆ ಪಕ್ಕದಲ್ಲಿ ಜಾಗ ಬೇಕಿದ್ದರೆ, ಹತ್ತು ಸಾವಿರ ರೂ. ಕೊಟ್ಟರೆ ಸಾಕು, ಒಂದು ಋತುಮಾನಕ್ಕೆ ಬಿಟ್ಟುಕೊಡುತ್ತಾರೆ. ಜತೆಗೆ ಪೊಲೀಸ್ ಅಥವಾ ಬಿಬಿಎಂಪಿ ಅಧಿಕಾರಿಗಳ ಕಾಟ ಇರುವುದಿಲ್ಲ. ‘ನಾವು ಮಾವಿನ ಸೀಸನ್ ಆರಂಭವಾದಾಗ ಎಲ್ಲರೂ ಒಟ್ಟಾಗಿ ತಲಾ 10 ಸಾವಿರ ರೂ.ಗಳನ್ನು ನಮ್ಮಲ್ಲೆ ಹಿರಿಯ ವ್ಯಾಪಾರಿ ಒಬ್ಬರಿಗೆ ನೀಡುತ್ತೇವೆ. ಅವರು ಆ ಹಣವನ್ನು ಸಂಗ್ರಹಿಸಿ ಪೊಲೀಸರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಕೊಡುತ್ತಾರೆ. ಹೀಗಾಗಿ, ಟ್ರಾಫಿಕ್, ಅಕ್ರಮ ಜಾಗ ಎಂದು ಯಾರೂ ಪ್ರಶ್ನಿಸುವುದಿಲ್ಲ’ ಎಂದು ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.
.ಜಯಪ್ರಕಾಶ್ ಬಿರಾದಾರ್