Advertisement

ಅಧಿಕಾರಿಗಳಲ್ಲಿ ಅಹಂ ಬೇಡ: ಕೆ.ಆರ್‌. ರಮೇಶ್‌ ಕುಮಾರ್‌

11:26 AM Jul 02, 2019 | Team Udayavani |

ಕಾರ್ಕಳ: ಅಧಿಕಾರ ಮತ್ತು ಜವಾಬ್ದಾರಿಗೆ ಭೂಮಿ ಮತ್ತು ಆಕಾಶದಷ್ಟು ಅಂತರವಿದೆ. ಅಧಿಕಾರಸ್ಥರಿಗೆ ಅಹಂ ಬಂದರೆ ಜವಾಬ್ದಾರಿ ಯಿಂದ ವಿಮುಖರಾಗುತ್ತಾರೆ ಎಂದು ವಿಧಾನಸಭಾ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಅವರು ಅಭಿಪ್ರಾಯಪಟ್ಟರು.

Advertisement

ಅವರು ರವಿವಾರ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅವರ ನೇತೃತ್ವದ ವಿಕಾಸ ಸೇವಾ ಸಂಸ್ಥೆಯ ವತಿಯಿಂದ ನಿಟ್ಟೆ ವಿದ್ಯಾಸಂಸ್ಥೆಯ ಸಂಭ್ರಮ ಸಭಾಂಗಣದಲ್ಲಿ ಸರಕಾರಿ ಅಧಿಕಾರಿಗಳಿಗೆ‌ ಕಾರ್ಯಬದ್ಧತೆ ಎಂಬ ಧ್ಯೇಯದೊಂದಿಗೆ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನೀತಿ, ನಿರೂಪಣೆ, ಕಾನೂನುಗಳು ಸಾರ್ಥಕತೆಯೊಂದಿಗೆ ಅನುಷ್ಠಾನ ವಾಗಬೇಕು. ಅದಕ್ಕಾಗಿ ಅಧಿಕಾರಿಗಳಲ್ಲಿ ಕರ್ತವ್ಯಪರತೆ, ಸಕ್ರಿಯತೆ, ಸೇವಾ ಮನೋಭಾವ ಇರಬೇಕು. ಇದರಿಂದ ಆತ್ಮತೃಪ್ತಿ ಲಭಿಸುವುದು ಎಂದು ರಮೇಶ್‌ ಕುಮಾರ್‌ ಅವರು ವಿವರಿಸಿದರು.

ಗರಿಷ್ಠ ಸೇವೆ ಗುರಿ
ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಶಾಸಕಾಂಗ ಮತ್ತು ಕಾರ್ಯಾಂಗವನ್ನು ಸಮನ್ವಯ ಕಾರ್ಯ ಸೂಚಿಯೊಂದಿಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ. ಶತಮಾನದ ಹೊಸ್ತಿಲಿನಲ್ಲಿರುವ ಕಾರ್ಕಳ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ನಿಟ್ಟಿನಲ್ಲಿ ಅಧಿಕಾರಿಗಳಿಂದ ಗರಿಷ್ಠ ಪ್ರಮಾಣದ ಸೇವೆ ಪಡೆಯುವ ಗುರಿ ಹೊಂದಿದ್ದು ಅದಕ್ಕಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ದಕ್ಷ ಅಧಿಕಾರಿಗಳು ಕಾರ್ಕಳದ ಹೆಮ್ಮೆ: ಸುನಿಲ್‌
ಅಪ್ಪಯ್ಯನಂತಹ ತಹಶೀಲ್ದಾರ್‌, ಅಣ್ಣಾಮಲೈ ಅವರಂತಹ ಪೊಲೀಸ್‌ ಅಧಿಕಾರಿಯನ್ನು ಕಂಡ ಕಾರ್ಕಳ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದೆ. ಅಂತಹ ಅಧಿಕಾರಿಗಳು ನಮ್ಮಲ್ಲಿ ಸೇವೆ ಸಲ್ಲಿಸಿರುವುದೇ ನಮಗೆ ಹೆಮ್ಮೆ ಎಂದು ಶಾಸಕ ಸುನಿಲ್‌ ಕುಮಾರ್‌ ಬಣ್ಣಿಸಿದರು.

ಘಸರಕಾರಿ ಕೆಲಸದಲ್ಲಿ ಅಂತಃಕರಣ ಮತ್ತು ಸಾಮಾಜಿಕ ಕಳಕಳಿ’ ವಿಷಯದಲ್ಲಿ ಉಪನ್ಯಾಸ ನೀಡಿದ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಮಹಾರಾಜ್‌ ಅವರು, ಮಾನವ ಜನ್ಮ ಶ್ರೇಷ್ಠವಾದುದು, ಪ್ರತೀ ಕಾರ್ಯ ಯೋಜನೆಯಲ್ಲಿ ಅಂತಃಕರಣ ಇದ್ದರೆ ಸಮಸ್ಯೆಗಳೇ ಬರುವುದಿಲ್ಲ. ನಾವು ಬದಲಾವಣೆ ಬಯಸಿದಲ್ಲಿ ನಮ್ಮ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಈ ಮೂಲಕ ನವಭಾರತ‌ ನಿರ್ಮಾಣವಾಗಲಿದೆ ಎಂದರು.
ನಿಟ್ಟೆ ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್‌ ಯೋಗೀಶ್‌ ಹೆಗ್ಡೆ, ಕಾರ್ಕಳ ತಹಶೀಲ್ದಾರ್‌ ಪುರಂದರ ಹೆಗ್ಡೆ, ಹೆಬ್ರಿ ತಹಶೀಲ್ದಾರ್‌ ಮಹೇಶ್‌ಚಂದ್ರ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಮೇ| ಡಾ| ಹರ್ಷ ವೇದಿಕೆಯಲ್ಲಿದ್ದರು.  ಪ್ರಾಧ್ಯಾಪಕರಾದ ಸಂಗೀತ ಕುಲಾಲ್‌ ಕಾರ್ಯಕ್ರಮ ನಿರೂಪಿಸಿ, ನವೀನ್‌ ನಾಯಕ್‌ ಅವರು ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next