Advertisement

ದೇಶದ ಜಿಡಿಪಿ ಕುಸಿದು ಹೋಗಿದೆ, ಮೋದಿ ಸರ್ಕಾರದಲ್ಲಿ ಆರ್ಥಿಕ ಶಿಸ್ತಿಲ್ಲ : ಸಿದ್ದರಾಮಯ್ಯ

01:43 PM Jun 03, 2020 | keerthan |

ಕೊಪ್ಪಳ: ಕಳೆದ 2019-20ರಲ್ಲಿ ದೇಶದ ಜಿಡಿಪಿ 6% ಇತ್ತು. ಈ ಪ್ರಸಕ್ತ ವರ್ಷದಲ್ಲಿ ಋಣಾತ್ಮಕ ಬೆಳವಣಿಗೆ ಕಾಣಲಿದೆ. ಇದು ಮೋದಿ ಅವರ ಸಾಧನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೋದಿ ಆಡಳಿತ ಟೀಕಿಸಿದರು.

Advertisement

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶದ ಜಿಡಿಪಿ ಕುಸಿದು ಹೋಗಿದೆ. ಮೋದಿಗೆ ಆರ್ಥಿಕ ಶಿಸ್ತು ಇಲ್ಲ. ರಾಜ್ಯ ಸರ್ಕಾರದ ಖಜಾನೆ ದಿವಾಳಿಯಾಗಿದೆ ಎಂದರು.

ವಸತಿ ಸಚಿವ ಸೋಮಣ್ಣನಿಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಸರಕಾರ ಮೊದಲ ಸ್ಥಾನದಲ್ಲಿತ್ತು. ಆಗ ಕೆಂದ್ರದ ವರದಿಯೇ ಇದನ್ನು ಹೇಳಿತ್ತು. ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೂ ಹೇಳಿದ್ದಾರೆ.  ಇನ್ಮುಂದೆ ದೇಶದ ಜಿಡಿಪಿ ಮೈನಸ್ ಆಗುತ್ತಾ ಹೋಗಲಿದೆ ನೋಡಿ ಎಂದರು.

ಸೋಮಣ್ಣ ಯಾವ ಆರ್ಥಿಕ ತಜ್ಞ ಎಂದರಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಇದು ಕರ್ನಾಟಕದ ಕಥೆ ಮಾತ್ರವಲ್ಲ, ಇಡೀ ದೇಶದ ಸ್ಥಿತಿಯೇ ಹೀಗಾಗಿದೆ. ಕೋವಿಡ್-19 ಬರುವುದಕ್ಕಿಂತ ಮುಂಚೆಯೂ ಆರ್ಥಿಕ ಸ್ಥಿತಿ ಹಾಳಾಗಿದೆ ಎಂದರು.

ಇನ್ನೂ ಸೋಮಣ್ಣ ಕಾಂಗ್ರೆಸ್ ನಾಯಕರ ಬಗ್ಗೆ ಕೆಟ್ಟ ಪದ ಬಳಕೆ ವಿಚಾರದಲ್ಲಿ, ಬಿಜೆಪಿಯವರ ಹಾಗೆ ನಾನು ಕೀಳು ಮಟ್ಟಕ್ಕೆ ಇಳಿಯಲ್ಲ ಎಂದರು. ನನ್ನ ಮತ್ತು ಡಿಕೆಶಿ ನಡುವೆ ಅತ್ಯುತ್ತಮ ಬಾಂಧವ್ಯ, ಸಂಬಂಧ ಇದೆ. ನಮ್ಮ ನಡುವೆ ಸರಿ ಇಲ್ಲ ಅನ್ನೋದೆಲ್ಲ ಶುದ್ಧ ಸುಳ್ಳು ಎಂದರು.

Advertisement

ಸಿದ್ದರಾಮಯ್ಯ ಕೋವಿಡ್ ಬಗ್ಗೆ ಯಾವಾಗ ಪಿಎಚ್ ಡಿ ಪಡೆದರು ಎಂಬ  ಬಿ ಸಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕೋವಿಡ್ ಬಗ್ಗೆ ಕಾಮನ್ ಸೆನ್ಸ್ ಇದ್ದರೆ ಸಾಕು ಅದಕ್ಕೆ ಪಿಎಚ್ ಡಿ ಮಾಡಬೇಕಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ಭಿನ್ನಮತ ಇರೋದು ಸತ್ಯ. ಬಿಜೆಪಿಯಲ್ಲಿ ಭಿನ್ನಮತ ಮುಂದುವರಿಯುತ್ತದೆ. ಕೆಲ ಅಸಮಾಧಾನಿತ ಬಿಜೆಪಿ ಶಾಸಕರು ನನ್ನ ಭೇಟಿ ಮಾಡಿದ್ದು ನಿಜ, ಇದರಲ್ಲಿ ಹೊಸದೇನು ಇಲ್ಲ. ಬಿಜೆಪಿ ಬಿನ್ನಮತದಲ್ಲಿ ನಾವು ಕೈ ಹಾಕಲ್ಲ. ಸರಕಾರ ಅದಾಗದೆ ಬಿದ್ದು ಹೋದರೆ ನೋಡೋಣ ಎಂದರು.

ಬಿಜೆಪಿಯಲ್ಲಿ ಸಂವಿಧಾನಿಕ ಸಿಎಂ ಬಿಎಸ್ವೈ, ಅಸಂವಿಧಾನಾತ್ಮಕ ಸಿಎಂ ವಿಜಯೇಂದ್ರ ಇದ್ದಾರೆ ಅಂತ ನಾವಲ್ಲ ಜನ ಹೇಳ್ತಾರೆ. ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ, ಎಲ್ಲ ಮಾಡೋದು ವಿಜಯೇಂದ್ರ ಎಂದರು. ಗ್ರಾ. ಪಂಗೆ ನಾಮನಿರ್ದೇಶನಕ್ಕೆ ನಾವು ವಿರೋಧಿಸಿದ್ದೇವೆ. ಒಂದು ವೇಳೆ ಹಾಗಾದರೆ ನಾವು ಕಾನೂನು ಹೋರಾಟಕ್ಕೂ ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next