Advertisement

ಒಳಚರಂಡಿ ಇಲ್ಲದೇ ಇಲ್ಲಿ ಬಹಿರ್ದೆಸೆಗೆ ಮುಕ್ತಿ ಸಿಕ್ತಿಲ್ಲ

09:35 PM Dec 18, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಹಲವು ವಾರ್ಡ್‌ಗಳಲ್ಲಿ ಒಳಚರಂಡಿ ಇದ್ದರೂ ನಿರಂತರವಾಗಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವುದು ಒಂದಡೆಯಾದರೆ ಮತ್ತೂಂದಡೆ ನಗರಸಭೆಯಾಗಿ ದಶಕಗಳೇ ಉರುಳಿದರೂ ನಗರದ ಕಂದರವಾಪೇಟೆ ಹಾಗೂ ಚಾಮರಾಜಪೇಟೆ ನಿವಾಸಿಗಳಿಗೆ ಒಳಚರಂಡಿ ಭಾಗ್ಯ ಇಲ್ಲದೇ ಬಯಲು ಬಹಿರ್ದೆಸೆಯ ಶಿಕ್ಷೆ ಇನ್ನೂ ತಪ್ಪದೇ ಕಾಯಂ ಆಗಿದೆ.

Advertisement

ಇಡೀ ಜಿಲ್ಲಾ ಕೇಂದ್ರದ ನಗರಸಭೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತವಾಗಿಯೆಂದು ಕಳೆದ ಎರಡು ವರ್ಷಗಳ ಹಿಂದೆಯೆ ಸ್ಥಳೀಯ ನಗರಸಭೆ ಅಧಿಕಾರಿಗಳು ಸ್ವಯಂ ಘೋಷಿತವಾಗಿ ಘೋಷಣೆ ಮಾಡಿಕೊಂಡಿದ್ದರೂ ನಗರದ ಒಳಚರಂಡಿ ಅವ್ಯವಸ್ಥೆ ದರ್ಶನಕ್ಕೆ ಹೊರಟ ಉದಯವಾಣಿಗೆ ನಗರದ 14ನೇ ವಾರ್ಡ್‌ ಕಂದವಾರಪೇಟೆಯಲ್ಲಿ ಹಾಗೂ 30ನೇ ವಾರ್ಡ್‌ಗೆ ಸೇರಿದ ಚಾಮರಾಜಪೇಟೆಯಲ್ಲಿ ಇದುವರೆಗೂ ಒಳಚರಂಡಿ ನಿರ್ಮಾಣವಾಗದ ಕಾರಣ ಸ್ಥಳೀಯ ನಿವಾಸಿಗಳು ಇನ್ನಿಲ್ಲದ ಪಡಿಪಾಟಲು ಬೀಳುವಂತಾಗಿದೆ.

ಜನರಿಗೆ ತೀವ್ರ ಸಮಸ್ಯೆ: ಕಂದರವಾರಪೇಟೆ ಹಾಗೂ ಚಾಮರಾಜಪೇಟೆಗಳಲ್ಲಿ ಬಡವರು, ಮದ್ಯಮ ವರ್ಗದ ಜನತೆ ವಾಸ ಮಾಡುತ್ತಿದ್ದು, ಎರಡು ವಾರ್ಡ್‌ಗಳಲ್ಲಿ ಸುಮಾರು ನಾಲ್ಕೈದು ಸಾವಿರ ಜನಸಂಖ್ಯೆ ಇದೆ. ಕಂದವಾರಪೇಟೆಯಲ್ಲಿ ಅಂತೂ ಪ್ರತಿಷ್ಠಿತರು ವಾಸ ಮಾಡುವ ಬಡಾವಣೆಯಾದರೂ ಇದುವರೆಗೂ ಒಳಚರಂಡಿಗೆ ಒಳಪಡಿದಿರುವುದನ್ನು ನೋಡಿದರೆ ಸ್ಥಳೀಯ ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎನ್ನಬಹುದು. ಅಷ್ಟರ ಮಟ್ಟಿಗೆ ಅಲ್ಲಿ ಒಳಚರಂಡಿ ಇಲ್ಲದೇ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಅರ್ಧಕ್ಕೆ ಅರ್ಧ ಶೌಚಾಲಯಗಳು ಇಲ್ಲ: ಈ ವಾರ್ಡ್‌ಳಲ್ಲಿ ಬೆರಳಣಿಕೆಯಷ್ಟು ಮನೆಗಳಿಗೆ ಮಾತ್ರ ವೈಯಕ್ತಿಕ ಶೌಚಾಲಯಗಳು ಸ್ವಚ್ಛ ಭಾರತ ಯೋಜನೆಯಲ್ಲಿ ನಿರ್ಮಾಣವಾಗಿದೆ. ಆದರೆ ಬಹುತೇಕ ಮನೆಗಳಿಗೆ ಶೌಚಾಲಯಗಳು ಮರೀಚಿಕೆಯಾಗಿವೆ. ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯಗಳ ಮಂಜೂರಾದರೂ ನಿರ್ಮಿಸಿಕೊಳ್ಳಲು ಸ್ಥಳದ ಅಭಾವ ಎದ್ದು ಕಾಣುತ್ತಿದೆ. ಈ ವಾರ್ಡ್‌ಗಳಲ್ಲಿ ರಸ್ತೆಗಳು ಮೊದಲೇ ಒತ್ತುವರಿಯಾಗಿ ಕಿರಿದಾಗಿ ಕಿಷ್ಕಿಂದೆಯಾಗಿದ್ದು, ಮನೆಗಳ ಮುಂದೆ ಶೌಚಾಲಯ ಕಟ್ಟಿಕೊಳ್ಳಲು ದುಸ್ತರವಾಗಿದೆ.

ಅರ್ಜಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ: ಕೆಲವರು ಕಟ್ಟಿಕೊಳ್ಳಲು ಶಕ್ತವಾಗಿದ್ದರೂ ಅಧಿಕಾರಿಗಳು ಅತ್ತ ತಿರುಗಿ ನೋಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿಂದೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಅನಿರುದ್‌ª ಶ್ರವಣ್‌, ರವರ ವಿಶೇಷ ಆಸಕ್ತಿಯಿಂದ ನಗರಸಭೆ ಮೂಲಕ ಬಹಳಷ್ಟು ಮನೆಗಳಿಗೆ ಶೌಚಾಲಯ ಮಂಜೂರಾದವು. ಆದರೆ ಇನ್ನೂ ಅರ್ಧದಷ್ಟು ಮನೆಗಳಿಗೆ ಶೌಚಾಲಯಗಳು ಇಲ್ಲ. ಅವರೆಲ್ಲಾ ಬಯಲಲ್ಲೇ ಬಹಿರ್ದೆಸೆಗೆ ಹೋಗುತ್ತಾರೆ. ಶೌಚಾಲಯ ಕಟ್ಟಿಕೊಳ್ಳಲು ಒಳಚರಂಡಿ ವ್ಯವಸ್ಥೆ ಇಲ್ಲ. ಒಳಚರಂಡಿ ನಿರ್ಮಾಣ ಮಾಡುವಂತೆ ಪದೇ ಪದೇ ನಗರಸಭೆಗೆ ಅರ್ಜಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ ಎಂದು ಚಾಮರಾಜಪೇಟೆ ಹಾಗೂ ಕಂದವಾರಪೇಟೆ ನಿವಾಸಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.

Advertisement

ಅವೈಜ್ಞಾನಿಕ ಒಳಚರಂಡಿ: ನಗರದ ಬಹುತೇಕ ವಾರ್ಡ್‌ಗಳಲ್ಲಿ ಅವೈಜ್ಞಾನಿಕ ಒಳಚರಂಡಿ ನಿರ್ಮಿಸಿ ಸಮರ್ಪಕವಾಗಿ ಕೊಳಚೆ ನೀರು ಒಳಚರಂಡಿಗಳಲ್ಲಿ ಸಾಗದೇ ಪದೇ ಪದೇ ರಸ್ತೆಗಳಿಗೆ ಹರಿದು ಜನ ಹೈರಾಣುತ್ತಿದ್ದರೂ ಕಂದವಾರಪೇಟೆ ಹಾಗೂ ಚಾಮರಾಜಪೇಟೆ ಜನರಿಗೆ ಮಾತ್ರ ಒಳಚರಂಡಿ ಭಾಗ್ಯ ಇಲ್ಲದೇ ದಿನ ದಶಕಗಳಿಂದಲೂ ಬಯಲು ಬಹಿರ್ದೆಸೆಯನ್ನು ಅವಲಂಬಿಸಬೇಕಾದ ದುಸ್ಥಿತಿ ಎದ್ದು ಕಾಣುತ್ತಿದ್ದು, ನಗರಸಭೆ ಅಧಿಕಾರಿಗಳಿಗೆ ಈ ವಾರ್ಡ್‌ಗಳ ಜನ ಅಂದರೆ ಆದೇಕೋ ಆಸಡ್ಡೆಯಾಗಿದೆ.

ಸ್ವಚ್ಛ ಭಾರತ ಆಟಕ್ಕುಂಟು ಲೆಕ್ಕಕ್ಕಿಲ್ಲ!: ಮೊದಲೇ ಚಿಕ್ಕಬಳ್ಳಾಪುರ ನಗರ ಸ್ವಚ್ಛತೆಯಲ್ಲಿ ಒಂದು ಹೆಜ್ಜೆ ಹಿಂದಿದೆ. ಎಲ್ಲೆಂದರಲ್ಲಿ ಕಸದ ರಾಶಿಗಳು ತುಂಬಿ ತುಳುಕುತ್ತಿವೆ. ಇತಂಹ ಸಂದರ್ಭದಲ್ಲಿ ಚಾಮರಾಜಪೇಟೆ ಹಾಗೂ ಕಂದರವಾರಪೇಟೆಯಲ್ಲಿ ಸ್ವಚ್ಛತೆಯ ಮರಿಚೀಕೆಯಾಗಿದ್ದು, ಸ್ವಚ್ಛ ಭಾರತ ಇಲ್ಲಿ ಆಟಕ್ಕುಂಟು ಲೆಕ್ಕಿಕ್ಕಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ. ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದು ಒಂದಡೆಯಾದರೆ ಶೌಚಾಲಯಗಳ ನಿರ್ಮಿಸಿ ಕೊಡುವ ವಿಚಾರದಲ್ಲಿ ನಗರಸಭೆ ಮೀನಾಮೇಷ ಎಣಿಸುತ್ತಿದೆಯೆಂಬ ಆರೋಪ ಸ್ಥಳೀಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇನ್ನೂ ಈ ಎರಡು ವಾರ್ಡ್‌ಗಳಲ್ಲಿ ಒಳಚರಂಡಿ ಇಲ್ಲದೇ ತೆರೆದ ಚರಂಡಿಗಳಲ್ಲಿ ಕೊಳಚೆ ನೀರು ಹರಿಯುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ.

ನಮ್ಮ ವಾರ್ಡ್‌ನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ಬಹುತೇಕರು ಶೌಚಾಲಯ ಕಟ್ಟಿಸಿಕೊಂಡಿಲ್ಲ. ಹೀಗಾಗಿ ಅರ್ಧಕ್ಕೆ ಅರ್ಧದಷ್ಟು ಜನ ಬಯಲು ಬಹಿರ್ದೆಸೆಯನ್ನು ಅವಲಂಬಿಸಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿ ಅನಿರುದ್‌ª ಶ್ರವಣ್‌ ರವರ ಕಾಳಜಿಯಿಂದ ಒಂದಿಷ್ಟು ಶೌಚಾಲಯಗಳು ನಿರ್ಮಾಣ ಆದವು. ಆದರೆ ಮತ್ತೆ ನಗರಸಭೆ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಇಲ್ಲಿ ಹೆಸರಿಗಷ್ಟೇ ಸ್ವಚ್ಛ ಭಾರತ ಅನುಷ್ಟಾನಗೊಳ್ಳುತ್ತಿದೆ. ಬಯಲಲ್ಲೇ ಎಲ್ಲವು ನಡೆಯುತ್ತದೆ.
-ಕೃಷ್ಣ, ಚಾಮರಾಜಪೇಟೆ ಕಾಲೋನಿ ನಿವಾಸಿ

ನಗರಸಭೆ ವ್ಯಾಪ್ತಿಗೆ ಬರುವ ಚಾಮರಾಜಪೇಟೆ ಹಾಗೂ ಕಂದವಾರಪೇಟೆಯಲ್ಲಿ ಇನ್ನೂ ಒಳಚರಂಡಿ ಯೋಜನೆ ಅನುಷ್ಠಾನವಾಗಿಲ್ಲ. ಆದರೂ ಆ ವಾರ್ಡ್‌ಗಳಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮದಡಿ ಶೌಚಾಲಯಗಳ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಆ ಪ್ರದೇಶಗಳಲ್ಲಿ ಒಳಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು. ಯಾರಿಗೆ ಶೌಚಾಲಯ ಇಲ್ಲವೋ ಅವರು ನಗರಸಭೆಯನ್ನು ಸಂಪರ್ಕಿಸಿದರೆ ಸ್ವಚ್ಛ ಭಾರತ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗುವುದು.
-ಡಿ.ಲೋಹಿತ್‌ ಕುಮಾರ್‌, ನಗರಸಭೆ ಆಯುಕ್ತರು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next