Advertisement

“ಕೈ’ಗೆ ಸಿಗದ ದೇಣಿಗೆ; ಕಾಂಗ್ರೆಸ್‌ಗೆ ಮುಜುಗರ

12:30 AM Feb 25, 2019 | |

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಘೋಷಿಸಿರುವ ಜನ ಸಂಪರ್ಕ ಅಭಿಯಾನದಲ್ಲಿ ಜನರಿಂದ ಚಂದಾ ಹಣ ಸಂಗ್ರಹಿಸಲು ಸೂಚಿಸಲಾಗಿದ್ದು, ಕಾರ್ಯಕರ್ತರ ಪಾಲಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಿದೆ.

Advertisement

ರಾಹುಲ್‌ ಆಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲಾ, ಬ್ಲಾಕ್‌ ಹಾಗೂ ಬೂತ್‌ ಮಟ್ಟದ ಅಧ್ಯಕ್ಷರಿಗೆ ಆದೇಶಿಸಲಾಗಿತ್ತು. ಆದರೆ, ಪಕ್ಷದ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ 50, 100 ರೂ. ಸಂಗ್ರಹಿಸಲು ಹೊರಟ ವೇಳೆ, ಸಾರ್ವಜನಿಕರಿಂದ ಸರಿಯಾದ ಸ್ಪಂದನೆ ಸಿಗದೆ ಮುಜುಗರ ಅನುಭವಿಸುವಂತಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನರಿಂದ ಹಣ ಸಂಗ್ರಹಕ್ಕೆ ಮುಂದಾದರೆ, ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಕಾರ್ಯಕರ್ತರಿಂದ ವ್ಯಕ್ತವಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರತಿ ಬೂತ್‌ನಿಂದ ಕನಿಷ್ಠ 25 ಸಾವಿರ ರೂ. ಸಂಗ್ರಹಿಸಿ ಪಕ್ಷಕ್ಕೆ ನೀಡುವಂತೆ ಬೂತ್‌ ಮತ್ತು ಬ್ಲಾಕ್‌ ಮಟ್ಟದ ಅಧ್ಯಕ್ಷರಿಗೆ ಸೂಚಿಸಲಾಗಿತ್ತು. ಕಳೆದ ಅಕ್ಟೋಬರ್‌ 2 ರಂದೇ ರಾಜ್ಯದಲ್ಲಿ ಅಧಿಕೃತವಾಗಿ ಯೋಜನೆಗೆ ಚಾಲನೆ ದೊರೆತಿದ್ದರೂ, ಬಹುತೇಕ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಜಾರಿಗೊಳಿಸಲು ಕಾರ್ಯಕರ್ತರು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಗ್ರಾಮೀಣ ಪ್ರದೇಶದ ಒಂದು ಬೂತ್‌ ಮಟ್ಟದಲ್ಲಿ ಗರಿಷ್ಠ 400 ರಿಂದ 500 ಮತದಾರರಿರುತ್ತಾರೆ. ಅವರಲ್ಲಿ ಬಹುತೇಕರು ಬಡವರೇ ಇರುವುದರಿಂದ ಅವರ ದಿನದ ಕೂಲಿಯೇ 150 ರಿಂದ 200 ರೂ.ಇರುತ್ತದೆ. ಅದರಲ್ಲಿ ನಾವು ಅವರಿಂದ ಹಣ ಕೇಳಲು ಹೋದರೆ, ಅವರಿಂದ ಹಣ ಬರುವುದಿರಲಿ, ಓಟೂ ಬರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ನಾಯಕರು ಮತ್ತೆ ಖಡಕ್ಕಾಗಿ ಎಚ್ಚರಿಕೆ ನೀಡಿದ್ದು, ಜನ ಸಂಪರ್ಕ ಅಭಿಯಾನ ಯಶಸ್ವಿಗೊಳಿಸುವಂತೆ ಸೂಚಿಸಲಾಗಿದೆ. ಹತ್ತು ವರ್ಷಗಳ ಯುಪಿಎ ಸರ್ಕಾರದ ಸಾಧನೆಗಳು ಹಾಗೂ ಕೇಂದ್ರದ ಎನ್‌ಡಿಎ ಸರ್ಕಾರದ ವೈಫ‌ಲ್ಯಗಳನ್ನು ಜನರಿಗೆ ತಿಳಿಸಿ, ಅದೇ ಸಂದರ್ಭದಲ್ಲಿ ಪಕ್ಷಕ್ಕೆ ದೇಣಿಗೆಯನ್ನೂ ಸಂಗ್ರಹಿಸಲು ಹೇಳಲಾಗಿದೆ.

ಪಕ್ಷದ ಈ ಆದೇಶಕ್ಕೆ ಗ್ರಾಮೀಣ ಪ್ರದೇಶದ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದ್ದು, ಜನರ ಬಳಿ ಹಣ ಸಂಗ್ರಹಿಸಲು ಸಾಧ್ಯವಿಲ್ಲ. ಬೇಕಿದ್ದರೆ, ಇದೇ ಅಭಿಪ್ರಾಯವನ್ನು ಹೈ ಕಮಾಂಡ್‌ಗೆ ತಿಳಿಸಿ ಎಂದು ಉಸ್ತುವಾರಿ ಕಾರ್ಯದರ್ಶಿಗಳಿಗೆ ನೇರವಾಗಿಯೇ ಹೇಳುತ್ತಿದ್ದಾರೆ ಎನ್ನಲಾಗಿದೆ. ಬ್ಲಾಕ್‌ ಮತ್ತು ಬೂತ್‌ ಮಟ್ಟದ ಕಾರ್ಯಕರ್ತರ ಈ ಅಭಿಪ್ರಾಯ ಪಕ್ಷದ ರಾಜ್ಯ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Advertisement

ಆದಾಯ ಹಂಚಿಕೆ ಸೂತ್ರ
ಕಾರ್ಯಕರ್ತರು ಸಂಗ್ರಹಿಸಿರುವ ಎಲ್ಲ ದೇಣಿಗೆಯನ್ನು ಹೈಕಮಾಂಡ್‌ಗೆ ಕಳುಹಿಸಿ ಎಂದರೆ ವಿರೋಧ ವ್ಯಕ್ತವಾಗುತ್ತದೆ ಎನ್ನುವ ಕಾರಣಕ್ಕೆ ಆದಾಯ ಹಂಚಿಕೆ ಸೂತ್ರ ನೀಡಲಾಗಿದ್ದು, ಸಂಗ್ರಹಿಸಿರುವ ಒಟ್ಟು ಹಣದಲ್ಲಿ ಎಐಸಿಸಿಗೆ ಶೇ.50, ಕೆಪಿಸಿಸಿಗೆ ಶೇ.25, ಜಿಲ್ಲಾ ಘಟಕಕ್ಕೆ ಶೇ. 15 ಹಾಗೂ ಬ್ಲಾಕ್‌ ಘಟಕಕ್ಕೆ ಶೇ.10 ರಷ್ಟು ಎಂಬ ಅನುಪಾತ ನಿರ್ಧರಿಸಲಾಗಿದೆ.

ಶಂಕರ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next