Advertisement

ಈಶ್ವರಮಂಗಲ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ!

10:27 AM Jun 24, 2018 | |

ಈಶ್ವರಮಂಗಲ: ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚುತ್ತಿದ್ದು, ಸಾಂಕ್ರಾಮಿಕ ಜ್ವರದ ಪ್ರಕರಣಗಳೂ ಏರುಗತಿಯಲ್ಲಿವೆ.
ಆಸ್ಪತ್ರೆಗಳಲ್ಲಿ ತಪಾಸಣೆಗೆ ಬರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಆದರೆ, ಕೇರಳ ಕರ್ನಾಟಕ ಗಡಿಭಾಗದಲ್ಲಿರುವ ಈಶ್ವರ ಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಖಾಯಂ ವೈದ್ಯರು ಹಾಗೂ ಸಿಬಂದಿ ಕೊರತೆಯಿರುವ ಕಾರಣ ರೋಗಿಗಳು ಖಾಸಗಿ ಆಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಗೆ ದೌಡಾಯಿಸಬೇಕಾಗಿದೆ.

Advertisement

ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 13 ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಳ್ತಿಗೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತ್‌ ಅವರು ವಾರದಲ್ಲಿ ಮೂರು ದಿನ (ಮಂಗಳವಾರ, ಗುರುವಾರ ಹಾಗೂ ಶನಿವಾರ) ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಒತ್ತಡ, ಸಭೆಗಳು, ಎರಡೂ ಕೇಂದ್ರಗಳ ರೋಗಿಗಳಿಗೆ ಸ್ಪಂದಿಸುವ ಜವಾಬ್ದಾರಿ ಅವರಿಗಿದೆ.

ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ ಈಶ್ವರಮಂಗಲ ಆರೋಗ್ಯ ಕೇಂದ್ರವು 4 ಉಪಕೇಂದ್ರಗಳನ್ನು ಹೊಂದಿದೆ. ಈ ಕೇಂದ್ರಗಳು ಸಿಬಂದಿ ಕೊರತೆಯಿಂದ ಬಾಗಿಲು ಹಾಕಿವೆ. ಕರ್ನೂರು, ಬಡಗನ್ನೂರು, ಪಡುವನ್ನೂರು ಉಪಕೇಂದ್ರಗಳಲ್ಲಿ ಆರೋಗ್ಯ ಸಹಾಯಕಿಯರ ಕೊರತೆಯಿದೆ. ಈಶ್ವರಮಂಗಲ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ 3 ಹುದ್ದೆ, ಪುರುಷ ಆರೋಗ್ಯ ಸಹಾಯಕರ 2 ಹುದ್ದೆ ಖಾಲಿ ಇವೆ. ಲ್ಯಾಬ್‌ ಮತ್ತು ಡಿ ಗ್ರೂಪ್‌ ಹುದ್ದೆಯನ್ನು ಗುತ್ತಿಗೆ ಆಧಾರದಲ್ಲಿ ನಿರ್ವಹಿಸಲಾಗುತ್ತಿದೆ.

ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಕೇಂದ್ರದಲ್ಲಿ ಸಿಬಂದಿಯ ಕೊರತೆಯನ್ನು ಎದುರಿಸುತ್ತಿದ್ದರೂ ಇದ್ದ ಸಿಬಂದಿ
ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಲೇರಿಯಾ ಮಾಸಾಚರಣೆ ನಡೆಸಿ ರೋಗ ನಿಯಂತ್ರಣ ಜಾಗೃತಿ ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಮನೆ ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಜಾಗೃತಿ ಕರಪತ್ರಗಳನ್ನು ನೀಡಲಾಗುತ್ತಿದೆ. ಪರಿಸರದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗುತ್ತಿದೆ. ಕೇಂದ್ರದ ವ್ಯಾಪ್ತಿಯಲ್ಲಿ 13 ಶಂಕಿತ ಡೆಂಗ್ಯೂ ಪ್ರಕರಣಗಳು ಖಾಸಗಿ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ.ಕೆಲವು ಕಡೆಗಳಲ್ಲಿ ಫಾಗಿಂಗ್‌ ಮಾಡಲಾಗಿದ್ದು, ಉಳಿದ ಕಡೆ ಮಳೆ ಅಡ್ಡಿಯಾಗಿದೆ.

ಗ್ರಾಮಸಭೆಯಲ್ಲಿ ನಿರ್ಣಯ
ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ| ತನುಜಾ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸಿಬಂದಿ, ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರ ಕೆಲಸದ ಬಗ್ಗೆಯೂ ಸಾರ್ವಜನಿಕರಲ್ಲಿ ಸದಭಿಪ್ರಾಯವಿದೆ. ಡಾ| ತನುಜಾ ಅವರು ಉನ್ನತ ವ್ಯಾಸಂಗಕ್ಕೆ ತೆರಳಿರುವುದರಿಂದ ಇಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿಯಾಗಿದೆ. ಕೂಡಲೇ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಯನ್ನು ನೇಮಕ ಮಾಡುವಂತೆ ನೆಟ್ಟಣಿಗೆಮುಟ್ನೂರು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ .

Advertisement

ಗುತ್ತಿಗೆ ಆಧಾರದಲ್ಲಿ ನೇಮಕ
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದಾರೆ. ಸರಕಾರ ಅಥವಾ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಗಳ ನೇಮಕ ಮಾಡಬೇಕಾಗುತ್ತದೆ. ಗುತ್ತಿಗೆ ಅಧಾರದಲ್ಲಿ ನೇಮಕಕ್ಕೆ ಒಂದು ಬಾರಿ ಕರೆಯಲಾಗಿದೆ. ಯಾರೂ ಬಂದಿಲ್ಲ. ಪುನಃ ಕರೆಯಲಾಗುವುದು. ವೈದ್ಯಾಧಿಕಾರಿಗಳು ಬಂದರೆ ನೇಮಕ ಮಾಡಲಾಗುವುದು. ತಾತ್ಕಾಲಿಕ ವಾಗಿ ನೆರೆಯ ಕೊಳ್ತಿಗೆ ವೈದ್ಯಾಧಿಕಾರಿಯನ್ನು ನೇಮಕ ಮಾಡಲಾಗಿದೆ.
 - ಡಾ| ರಾಮಕೃಷ್ಣ ರಾವ್‌,
    ಜಿಲ್ಲಾ ವೈದ್ಯಾಧಿಕಾರಿ

ಮಳೆಗಾಲದ ಬಳಿಕ ಹೊಸ ಕಟ್ಟಡ
ಕೇಂದ್ರದ ಕಟ್ಟಡವನ್ನು ಹೊಸದಾಗಿ ನಿರ್ಮಿಸುವುದಕ್ಕಾಗಿ ಕರ್ನಾಟಕ ಹೆಲ್ತ್‌ ಡೆವೆಲಪ್‌ಮೆಂಟ್‌ ಸಿಸ್ಟಮ್‌ ಪ್ರಾಜೆಕ್ಟ್ ಅಡಿಯಲ್ಲಿ 1.78 ಕೋಟಿ ರೂ. ಮಂಜೂರಾಗಿದ್ದು, ಮಳೆಗಾಲದ ನಂತರ ಹೊಸ ಕಟ್ಟಡದ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಕೂಡಲೇ ಖಾಯಂ ವೈದ್ಯಾಧಿಕಾರಿಯನ್ನು ನೇಮಿಸುವಂತೆ ಜಿಲ್ಲಾ ವೈದ್ಯಾಧಿಕಾರಿಯಲ್ಲಿ ಒತ್ತಾಯ ಮಾಡಲಾಗಿದೆ.
– ಅನಿತಾ ಹೇಮನಾಥ ಶೆಟ್ಟಿ, ಅಧ್ಯಕ್ಷರು, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣದ ಸ್ಥಾಯಿ ಸಮಿತಿ

ಮಾಧವ ನಾಯಕ್ 

Advertisement

Udayavani is now on Telegram. Click here to join our channel and stay updated with the latest news.

Next