ಕೊಪ್ಪಳ : ಬಿಎಸ್ ವೈ ನೇತೃತ್ವದ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಣ್ಣ- ಪುಟ್ಟ ಸಮಸ್ಯೆಗಳನ್ನು ವರಿಷ್ಠರು ಸರಿಪಡಿಸುತ್ತಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ಕೊಪ್ಪಳದ ಪಂಪಾವನದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ರಾಜ್ಯಕ್ಕೆ ಸೂಕ್ತ ಪರಿಹಾರ ನೀಡಿಲ್ಲ ಎಂಬ ಆರೋಪ ಸರಿಯಲ್ಲ. ಪ್ರಕೃತಿ ವಿಕೋಪ ಉಂಟಾದ ಮರುದಿನವೇ ಕೇಂದ್ರ ಹಣ ನೀಡಿರೋ ಉದಾಹರಣೆ ಇಲ್ಲ. ಕೇಂದ್ರ ಸರ್ಕಾರ ತನ್ನದೇ ಅಧಿಕಾರಿಗಳನ್ನು ಕಳುಹಿಸಿ ಸರ್ವೆ ಮಾಡುತ್ತದೆ. ಪ್ರವಾಹಕ್ಕಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಮಟ್ಟದ ನೆರೆವು ಸಿಗುವ ಭರವಸೆ ಇದೆ ಎಂದರು.
ಇಲ್ಲಿಯವರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏಕಾಂಗಿಯಾಗಿ ಅಧಿಕಾರಿಗಳೊಂದಿಗೆ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈಗ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಕೊಪ್ಪಳದಲ್ಲಿ ಪ್ರವಾಹಪೀಡಿತರ ಸಂಕಷ್ಟ ಏನಿದೆ ಎನ್ನುವುದನ್ನ ನೋಡಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಮನೆ ಹಾನಿಗಳ ಸ್ಥಿತಿ ಆಧರಿಸಿ 25 ಸಾವಿರ, 1 ಲಕ್ಷ , 5 ಲಕ್ಷ ಪರಿಹಾರ ನಿಗದಿ ಮಾಡಲಾಗಿದೆ ಎಂದು ನೂತನ ಸಚಿವ ಸಿಸಿ ಪಾಟೀಲ್ ಹೇಳಿದರು.
ಇತ್ತೀಚಿಗೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಹಾಸ್ಟೇಲ್ ವಿದ್ಯಾರ್ಥಿಗಳು ಸಾವನ್ನಪ್ಪಿದ ಬಗ್ಗೆ ಮಾತನಾಡಿದ ಅವರು, ಇದು ನೋವು ತಂದಿದೆ. ಪರಿಹಾರ ನೀಡಲಾಗುವುದು ಎಂದರು.
ತುಂಗಾ ಭದ್ರ ಡ್ಯಾಂ ಕಾಲುವೆ ಗೇಟ್ ಜಖಂ, ಪಂಪಾವನ ಹಾಗೂ ಮನೆಗೆ ಹಾನಿ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, ಮೊದಲು ಸಂತ್ರಸ್ಥರಿಗೆ ಅಧ್ಯತೆ ನೀಡಲಾಗುವುದು. ನಂತರ ಪಂಪಾವನ ಅಭಿವೃದ್ಧಿ ಮಾಡಲಾಗುವುದು. ತುಂಗಾ ಭದ್ರ ಡ್ಯಾಂ ಮುಖ್ಯ ಇಂಜನಿಯರ್ ಸಭೆ ಕರೆದು ಮಾಹಿತಿ ಪಡಿಯುತ್ತೇನೆ . ಗೇಟ್ ಜಖಂ ಆಗಿದ್ದಕ್ಕೆ ಅಧಿಕಾರಿಗಳ ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.