ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಮೀಸಲು ನಿಧಿಯಿಂದ ಸರಕಾರ 3.6 ಲಕ್ಷ ಕೋಟಿ ರೂ. ವರ್ಗಾವಣೆ ಮಾಡುವ ಬೇಡಿಕೆ ಇಟ್ಟಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಕೇಂದ್ರ ಸರಕಾರ ಹಾಗೂ ಆರ್‌ಬಿಐ ಮಧ್ಯದ ತಿಕ್ಕಾಟಕ್ಕೆ ಈ ವಿಷಯವೇ ಪ್ರಮುಖವಾದದ್ದು ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ಚಂದ್ರ ಗರ್ಗ್, ಮಾಧ್ಯಮದಲ್ಲಿ ಹಲವು ತಪ್ಪು ಮಾಹಿತಿ ಹರಿದಾಡುತ್ತಿದೆ. ಸರಕಾರದ ವಿತ್ತೀಯ ಲೆಕ್ಕಾಚಾರ ಸರಿಯಾದ ರೀತಿಯಲ್ಲೇ ಇದೆ. ಆರ್‌ಬಿಐನಿಂದ 3.6 ಲಕ್ಷ ಕೋಟಿ ರೂ. ಆಗಲೀ ಅಥವಾ 1 ಲಕ್ಷ ಕೋಟಿ ರೂ. ಆಗಲೀ ವರ್ಗಾವಣೆ ಮಾಡುವಂತೆ ಕೇಳುವ ಪ್ರಮೇಯವೆ ಇಲ್ಲ ಎಂದಿದ್ದಾರೆ. ಆದರೆ ಆರ್‌ಬಿಐನ ಆರ್ಥಿಕ ಬಂಡವಾಳ ರೂಪುರೇಷೆಯನ್ನು ಸರಿಪಡಿಸುವ ಬಗ್ಗೆ ಚರ್ಚೆ ನಡೆದಿದೆ. ಸರ್ಕಾರವು 2019 ಮಾರ್ಚ್ ಅಂತ್ಯದ ವೇಳೆಗೆ ಶೇ. 3.3 ವಿತ್ತೀಯ ಕೊರತೆಯನ್ನು ನಿರ್ವಹಿಸುವುದಕ್ಕೆ ಬದ್ಧವಾಗಿದೆ. 013-14ರಲ್ಲಿ ವಿತ್ತೀಯ ಕೊರತೆ ಶೇ. 5.1 ಆಗಿತ್ತು. 2014-15ರಿಂದಲೂ ಇದನ್ನು ಇಳಿಸಲು ಸರಕಾರ ಸತತ ಯತ್ನ ನಡೆಸಿದೆ ಎಂದು ಗರ್ಗ್ ಹೇಳಿದ್ದಾರೆ.