Advertisement

ಕಾರ್ಡ್‌ ವಿತರಣೆ ವಿಳಂಬ ಬೇಡ

02:12 PM Feb 15, 2020 | Suhan S |

ಗದಗ: ಅಂಗವಿಕಲರಿಗೆ ಹೊಸದಾಗಿ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ ಕಾರ್ಡ್‌) ವಿತರಣೆಗೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ವೈದ್ಯರು ವಿನಾಃಕಾರಣ ವಿಳಂಬ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಉಪನಿಯಮ 72ರಡಿ ರಚಿತವಾದ ಜಿಲ್ಲಾಮಟ್ಟದ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಂಕಿಅಂಶಗಳ ಪ್ರಕಾರ ವಿಕಲಚೇತನರಿಗೆ ನೀಡಬೇಕಾದ ವಿಶಿಷ್ಟ ಗುರುತಿನ ಚೀಟಿ ಹಂಚಿಕೆ ಕಾರ್ಯ ತುಂಬಾ ವಿಳಂಬವಾಗುತ್ತಿದೆ. ವಿಕಲಚೇತನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಆಯಾ ತಾಲೂಕು ಮಟ್ಟದಲ್ಲಿ ತ್ವರಿತಗತಿಯಲ್ಲಿ ಗುರುತಿನ ಚೀಟಿ ಹಂಚಿಕೆ ಮಾಡಬೇಕು. ಒಂದೊಮ್ಮೆ ತಾಲೂಕು ಮಟ್ಟದಲ್ಲಿ ವೈದ್ಯಾಧಿಕಾರಿಗಳು ಲಭ್ಯವಿಲ್ಲದಿದ್ದರೆ ಜಿಲ್ಲಾಸ್ಪತ್ರೆಯಲ್ಲಿರುವ ವೈದ್ಯರಿಗೆ ಶಿಫಾರಸು ಪತ್ರ ಕಳುಹಿಸಿಕೊಡಬೇಕು ಎಂದು ತಿಳಿಸಿದರು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಆಶು ನದಾಫ್‌ ಮಾತನಾಡಿ, ವಿಕಲಚೇತನರ ಯೋಜನೆಗಳು, ಸಾರ್ವಜನಿಕ ಉಪಯೋಗಿ ಕಟ್ಟಡಗಳಲ್ಲಿ ಕಡ್ಡಾಯವಾಗಿ ರ್‍ಯಾಂಪ್ಸ್‌ ಹಾಗೂ ಬ್ರೈಲ್‌ ಲಿಪಿ ಅಳವಡಿಕೆ, ಸರಕಾರದ ಎಲ್ಲ ಇಲಾಖೆಗಳಲ್ಲಿ ಕಡ್ಡಾಯವಾಗಿ ಶೇ. 5 ಹಣವನ್ನು ವಿಕಲಚೇತನರ ಕ್ಷೇಮಾಭಿವೃದ್ಧಿಗೆ ತೆಗೆದಿರಿಸುವುದು, ಸರಕಾರ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ದೈಹಿಕ ವಿಕಲಚೇತನರಿಗಾಗಿ ಉಚಿತ ತ್ರಿಚಕ್ರ ವಾಹನಗಳನ್ನು ವಿತರಿಸುವುದು, ಕಿವುಡ ಮತ್ತು ಮೂಕ ವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ವಿಶೇಷ ಆ್ಯಪ್‌ ಹೊಂದಿದ ಮೊಬೈಲ್‌ ನೀಡುವಿಕೆಗೆ ಕ್ರಮ ಕೈಗೊಳ್ಳಲಾಗಿದೆ.

ಹೊಸದಾಗಿ ಎಂಆರ್‌ಡಬ್ಲ್ಯೂ, ಯುಆರ್‌ ಡಬ್ಲ್ಯೂ, ವಿಆರ್‌ಡಬ್ಲ್ಯೂಗಳ ಆಯ್ಕೆ ಮತ್ತು ಹೊಸದಾಗಿ ರಚಿತವಾದ ಜಿಲ್ಲಾಮಟ್ಟದ ಸಮಿತಿಗೆ ಅನ್ನದಾನ ವಿಜಯವಿದ್ಯಾ ಸಮಿತಿ ರೋಣ, ಮಂಜು ಶಿಕ್ಷಣ ಸಂಸ್ಥೆ ಬೆಟಗೇರಿ, ಶಶಿಧರ ಶಿರಸಂಗಿ ಯಳವತ್ತಿ ಶಿರಹಟ್ಟಿ ತಾಲೂಕು, ಸುರೇಶ ಹಡಪದ ರೋಣ ತಾಲೂಕು, ರಾಘವೇಂದ್ರ ಪಾಟೀಲ ಮುಂಡರಗಿ ತಾಲೂಕು, ಶಿದ್ದಪ್ಪ ಮರಚಕ್ಕನವರ ನರಗುಂದ ತಾಲೂಕು, ಪರಶುರಾಮ ಹಬೀಬ ಗದಗ ತಾಲೂಕು ಹಾಗೂ ಶ್ರೀನಾಥ ಕುಲಕರ್ಣಿ ಹೊಂಬಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಪೊಲೀಸ್‌ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನ್ಯಾಯಾಂಗ ಇಲಾಖೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next