Advertisement

ಸಾಲ ಮನ್ನಾ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಎಸ್‌.ಟಿ. ಸೋಮಶೇಖರ

07:51 PM Jan 24, 2022 | Team Udayavani |

ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತರು ಪಡೆದ ಸಾಲ ಮನ್ನಾ ಮಾಡುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಶೂನ್ಯ ಬಡ್ಡಿ ದರದಲ್ಲಿ ಹೆಚ್ಚಿನ ರೈತರಿಗೆ ಬೆಳೆ ಸಾಲ ನೀಡಿ ಮಾರ್ಚ್‌ ಅಂತ್ಯಕ್ಕೆ 30 ಲಕ್ಷ ರೈತರಿಗೆ ಸಾಲ ನೀಡುವ ಗುರಿ ತಲುಪಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದ್ದಾರೆ.

Advertisement

ಅವರು 2021-22ನೇ ಸಾಲಿನಲ್ಲಿ ಕೃಷಿ ಸಾಲ ವಿತರಣೆ ಹಾಗೂ ವಸೂಲಾತಿ ಕುರಿತಂತೆ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ವಚ್ಯುìವಲ್‌ ಮೂಲಕ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಮಾರ್ಚ್‌ ಅಂತ್ಯದ ವೇಳೆಗೆ 30.86 ಲಕ್ಷ ರೈತರಿಗೆ 20810 ಕೋಟಿ ರೂ. ಸಾಲ ವಿತರಣೆ ಗುರಿ ಮುಟ್ಟಬೇಕು. ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆ ಎಲ್ಲಾ ರೈತರಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಹೊಸ ರೈತರಿಗೆ ಸಾಲ ವಿತರಣೆ ಮಾಡದಿದ್ದರೆ ಡಿಸಿಸಿ ಬ್ಯಾಂಕ್‌ ಎಂಡಿ ಹಾಗೂ ಅಧ್ಯಕ್ಷರನ್ನುಹೊಣೆ ಮಾಡಲಾಗುವುದು ಎಂದು ಸಚಿವರು ಹೇಳಿದರು.

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2021-22 ನೇ ಸಾಲಿನಲ್ಲಿ 30.26 ಲಕ್ಷ ರೈತರಿಗೆ ರೂ.19,370 ಕೋಟಿ ಅಲ್ಪಾವಧಿ ಬೆಳೆ ಸಾಲ, 0.60 ಲಕ್ಷ ರೈತರಿಗೆ ರೂ. 1,440 ಕೋಟಿ ಮಧ್ಯಮಾವಧಿ/ದೀರ್ಘಾವಧಿ ಸಾಲ, ಒಟ್ಟು 30.86 ಲಕ್ಷ ರೈತರಿಗೆ ರೂ.20,810 ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ.

2021ರ ಡಿಸೆಂಬರ್‌ ಅಂತ್ಯದ ವರೆಗೆ 19.27 ಲಕ್ಷ ರೈತರಿಗೆ ರೂ.13,295 ಕೋಟಿಗಳ ಅಲ್ಪಾವಧಿ ಕೃಷಿ ಸಾಲ, 0.31 ಲಕ್ಷ ರೈತರಿಗೆ ರೂ.893 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ಸೇರಿ ಒಟ್ಟು 19.58 ಲಕ್ಷ ರೈತರಿಗೆ ರೂ. 14,188 ಕೋಟಿ ಕೃಷಿ ಸಾಲ ವಿತರಿಸಲಾಗಿದೆ. ಇದುವರೆಗೂ ಶೇ.68.18 ರಷ್ಟು ಪ್ರಗತಿ ಸಾಧಿಸಿದ್ದು, ಮೂರು ತಿಂಗಳಲ್ಲಿ ಉಳಿದ ಗುರಿಯನ್ನು ಸಾಧಿಸಲು ಸಂಬಂಧಿಸಿದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಡಿಸಿಸಿ ಬ್ಯಾಂಕಿನ ಅಲ್ಪಾವಧಿ ಮತ್ತು ಮಧ್ಯಮಾವದಿ ಕೃಷಿ ಸಾಲ ವಸೂಲಾತಿ ಕ್ರಮವಾಗಿ ಶೇ.94.93 ಹಾಗೂ ಶೇ.76.29 ರಷ್ಟಿದೆ. ಈ ಯೋಜನೆ ಅನುಷ್ಟಾನಕ್ಕಾಗಿ ಈ ವರ್ಷದಲ್ಲಿ ಸಹಕಾರ ಸಂಸ್ಥೆಗಳಿಗೆ ರೂ.1,012 ಕೋಟಿಗಳ ಬಡ್ಡಿ ಸಹಾಯಧನ ನೀಡಲು ಅನುದಾನ ಕಲ್ಪಿಸಿದ್ದು, ಇದುವರೆಗೆ ರೂ. 757.21 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು

Advertisement

ಇದನ್ನೂ ಓದಿ:ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ

ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ:
ರಾಜ್ಯದಲ್ಲಿ 19,196 ಸ್ವಸಹಾಯ ಗುಂಪುಗಳಿಗೆ 689 ಕೋಟಿ ರೂ. ಸಾಲ ವಿತರಿಸಲಾಗಿದೆ. ಈ ಸಾಲಿನಲ್ಲಿ ವಸೂಲಾಗುವ ಸಾಲಗಳಿಗೆ ಬಡ್ಡಿ ಸಹಾಯಧನಕ್ಕಾಗಿ ಆಯವ್ಯಯದಲ್ಲಿ ರೂ.90.41 ಕೋಟಿಗಳನ್ನು ಒದಗಿಸಲಾಗಿದ್ದು, ಇದುವರೆಗೆ ರೂ.36.01 ಕೋಟಿಗಳ ಬಡ್ಡಿ ಸಹಾಯಧನವನ್ನು ಡಿಸಿಸಿ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯನ್ನು ಇನ್ನೂ ಹೆಚ್ಚಿನ ಸ್ವಸಹಾಯ ಗುಂಪುಗಳಿಗೆ ತಲುಪಿಸಲು ಸಂಬಂಧಿಸಿದ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಲಾಗಿದೆ. ಸಹಕಾರ ಸಂಘಗಳಲ್ಲಿ ರೈತರ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿ ಶೇ.7 ರ ಬಡ್ಡಿದರದಲ್ಲಿ ಕೃಷಿ ಅಡಮಾನ ಸಾಲ ವಿತರಣೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಮಾರುಕಟ್ಟೆ ಸಹಕಾರ ಸಂಘಗಳು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ತಮ್ಮ ಗೋದಾಮುಗಳಲ್ಲಿ ಶೇಖರಣೆ ಮಾಡಿ ಶೇ.7 ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಈ ಸಾಲಿನಲ್ಲಿ ಡಿಸೆಂಬರ್‌ ಅಂತ್ಯದವರೆಗೆ 18,958 ರೈತರಿಗೆ ರೂ.306 ಕೋಟಿಗಳ ಸಾಲ ವಿತರಿಸಲಾಗಿದೆ. ಈ ಯೋಜನೆಯನ್ನು ಇನ್ನೂ ಹೆಚ್ಚಿನ ರೈತರಿಗೆ ತಲುಪಿಸಲು ಇಲಾಖಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಆತ್ಮನಿರ್ಭರ ಯೋಜನೆ :
ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಮತ್ತು ನಬಾರ್ಡ್‌ ನ ಪ್ಯಾಕ್ಸ್‌ಗಳನ್ನು ಬಹುಪಯೋಗಿ ಕೇಂದ್ರ ಗಳನ್ನಾಗಿ ಸ್ಥಾಪಿಸುವ ಯೋಜನೆ ಇದ್ದು, ಈ ಯೋಜನೆಯಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಗೋದಾಮು ಸೌಲಭ್ಯ ಮತ್ತು ಕೊಯ್ಲು ನಂತರದ ಮೂಲಭೂತ ಸೌಕರ್ಯವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 1,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಾಲ ಒದಗಿಸಲು ಗುರಿ ಹೊಂದಲಾಗಿದ್ದು, ನಬಾರ್ಡ್‌ 873 ಸಂಘಗಳಿಗೆ ರೂ.302 ಕೋಟಿಗಳ ಸಾಲವನ್ನು ಮಂಜೂರು ಮಾಡಿದೆ. ಈ ಪೈಕಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು 581 ಸಂಘಗಳಿಗೆ ರೂ.72.73 ಕೋಟಿಗಳನ್ನು ಬಿಡುಗಡೆ ಮಾಡಿವೆ.

ಆನ್‌ಲೈನ್‌ ವ್ಯವಸ್ಥೆ
ರೈತರಿಗೆ ತ್ವರಿತವಾಗಿ ಕೃಷಿ ಸಾಲ ದೊರೆಯಲು ಅನುಕೂಲವಾಗಲು ಇ-ಆಡಳಿತ ಇಲಾಖೆಯ FRUITS ತಂತ್ರಾಂಶ ಬಳಸಿ ಆನ್‌ಲೈನ್‌ ಮೂಲಕ ಪಹಣಿಯಲ್ಲಿ ಸಾಲದ ಋಣವನ್ನು ದಾಖಲಿಸಲು ಕ್ರಮ ವಹಿಸಲಾಗಿದ್ದು, ಕೆಲವು ಬ್ಯಾಂಕ್‌ಗಳಲ್ಲಿ ಇನ್ನೂ ಸರಿಯಾದ ವ್ಯವಸ್ಥೆ ಜಾರಿಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಳೆ ಮಾದರಿಯಲ್ಲಿಯೇ ರೈತರಿಗೆ ಸಾಲ ವಿತರಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಮಾರ್ಚ್‌ ವೇಳೆಗೆ ಎಲ್ಲವನ್ನೂ ಆನ್‌ಲೈನ್‌ ವ್ಯವಸ್ಥೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next