Advertisement
ಗೋಡೌನ್‌ಗಳಲ್ಲಿರುವ ಸ್ಟಾಕ್‌ಗಳು ಕರಗುತ್ತಿಲ್ಲ. ನಿತ್ಯ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ಬಿಟ್ಟು, ಬೇರೆ ವಸ್ತುಗಳಿಗೆ ಖರೀದಿದಾರರಿಲ್ಲ. ಉತ್ಪಾದನೆ- ಸಂಪಾದನೆ- ಲಾಭ- ಇದ್ಯಾವುದೂ ಇಲ್ಲದ ಕಾರಣದಿಂದ, ಬ್ಯಾಂಕುಗಳಲ್ಲಿ ಸಾಲ ಮರುಪಾವತಿ ಆಗುತ್ತಿಲ್ಲ. ಅರ್ಥಿಕ ಮತ್ತು ಔದ್ಯಮಿಕ ಚಟುವಟಿಕೆಗಳು ಕ್ರಿಯಾಶೀಲವಾಗುವ ಬಗೆಗೆ, ದೃಢವಾದ ಮಾಹಿತಿ ಇಲ್ಲ. ಸಣ್ಣ ಉದ್ಯಮ ನಡೆಸುವವರಿಗೆ ಕೊಡುತ್ತಿದ್ದ ಸಾಲದ ಮಿತಿಯನ್ನು, ಬ್ಯಾಂಕ್‌ಗಳು ಆರು ತಿಂಗಳ ಹಿಂದೆಯೇ ಹೆಚ್ಚಿಸಿವೆ. ಆದರೆ, ಸಾಲ ಪಡೆಯಲು ಉದ್ಯಮಿಗಳೂ ಆಸಕ್ತಿ ತೋರಿಸಿಲ್ಲ. ಪರಿಣಾಮ, ಆ ಹಣ ಕೂಡ ಹಾಗೆಯೇ ಉಳಿದುಹೋಗಿದೆ. ಠೇವಣಿ ಹಣವೇ ಬಳಕೆಯಾಗದಿರುವುದು, ಬ್ಯಾಂಕಿನ ಆದಾಯದ ಮೇಲೆ ಬಾರೀ ಪರಿಣಾಮ ಬೀರಿದೆ. ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನಲ್ಲಿ ರಿವರ್ಸ್ ರೆಪೋ ಇರಿಸುವುದು, ಅಥವಾ ತಮ್ಮಲ್ಲಿಯೇ ಸುಮ್ಮನೆ ಇಟ್ಟುಕೊಳ್ಳುವುದು, ಬ್ಯಾಂಕಿನ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ.
ಬ್ಯಾಂಕ್‌ಗಳೇ ಸಾಲ ಕೊಡುತ್ತೇವೆ ಅಂದರೂ ಅದನ್ನು ಪಡೆಯಲು ಸಣ್ಣ ಉದ್ಯಮದ ಜನರು ಮುಂದೆ ಬರುತ್ತಿಲ್ಲ. ಬ್ಯಾಂಕ್‌ನಲ್ಲಿ ಸಾಲ ಪಡೆದರೆ, ಮುಂದಿನ ತಿಂಗಳಿಂದಲೇ ಕಂತು ಕಟ್ಟಬೇಕು. ಆದರೆ, ಉತ್ಪಾದನೆಯೇ ಇಲ್ಲದಿರುವಾಗ, ಕಂತು ಕಟ್ಟಲು ಹೇಗೆ ಸಾಧ್ಯ? ಈಗ ಸಾಲ ಪಡೆಯುವುದೂ ಬೇಡ, ನಂತರ ಒದ್ದಾಡುವುದೂ ಬೇಡ ಎಂಬುದು ಕೈಗಾರಿಕಾ ವಲಯದ
ಜನರ ಮಾತಾಗಿದೆ. ಅಷ್ಟಾದರೂ ಬಡ್ಡಿ ಸಿಗಲಿ..!
ನಂಬಲರ್ಹ ಮೂಲಗಳ ಪ್ರಕಾರ, ಇಂದು 8.42 ಲಕ್ಷ ಕೋಟಿ ರೂಪಾಯಿಗಳನ್ನು ರಿಸರ್ವ್ ಬ್ಯಾಂಕ್‌ನಲ್ಲಿ “ರಿವರ್ಸ್ ರೆಪೋ’ ಅಡಿಯಲ್ಲಿ ಬ್ಯಾಂಕ್‌ಗಳು ಇರಿಸಿವೆಯಂತೆ. ಈ ಠೇವಣಿಗೆ ರಿಸರ್ವ್ ಬ್ಯಾಂಕ್‌ನಿಂದ ಕೇವಲ ಶೇ.3.75 ಬಡ್ಡಿಯನ್ನು ಪಡೆಯುತ್ತವೆ. ದುಡಿತವಿಲ್ಲದೇ, ಅದಾಯಗಳಿಸದೆ, ಸ್ಟಾಕ್ ರೀತಿಯಲ್ಲಿ ಬಿದ್ದಿರುವ ಈ ಹಣಕ್ಕೆ, ಕಿಂಚಿತ್ತಾದರೂ ಆದಾಯ ಬರಲಿ
ಉದ್ದೇಶದಿಂದಲೇ ರೆಪೋ ಅಡಿಯಲ್ಲಿ ಹಣ ಇಡಲಾಗಿದೆ ಎಂದು ಅರ್ಥಿಕ ತಜ್ಞರು ಹೇಳುತ್ತಿದ್ದಾರೆ. ಈ ಬೆಳವಣಿಗೆ, ಬ್ಯಾಂಕಿಂಗ್ ಇತಿಹಾಸದಲ್ಲೇ ಅಪರೂಪ ಎನ್ನಬಹುದು.
ರಮಾನಂದ ಶರ್ಮಾ