ಮಂಡ್ಯ: “ಅಧಿಕಾರ ಹಂಚಿಕೆ ಸಂಬಂಧ ಪಕ್ಷದಲ್ಲಿ ಒಪ್ಪಂದವಾಗಿರುವುದು ನಿಜ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಇದನ್ನು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ನನ್ನ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಅಧಿಕಾರ ಹಂಚಿಕೆಯ ಒಪ್ಪಂದ ಆಗಿಲ್ಲ’ ಎಂದಿದ್ದಾರೆ.
ಈ ಸಂಬಂಧ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದೂ ಕೆ.ಆರ್. ಪೇಟೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಸದ್ಯಕ್ಕೆ ಸಂಪುಟ ಪುನಾರಚನೆ ಆಗುವುದಿಲ್ಲ. ಸಂಪುಟ ಪುನಾ ರಚಿಸುವಂತೆ ಹೈಕಮಾಂಡ್ ಸೂಚನೆ ನೀಡಬೇಕು. ಆ ಬಳಿಕ ನಾನು ನಿರ್ಧಾರ ಮಾಡಬೇಕು. ಆದರೆ ಹೈಕಮಾಂಡ್ ಹೇಳಿಯೂ ಇಲ್ಲ. ನಾನು ತೀರ್ಮಾನ ತೆಗೆದು ಕೊಂಡೂ ಇಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನು ಸಿಎಂ ಕುರ್ಚಿ ಹಾಗೂ ಪಕ್ಷಕ್ಕೆ ಸದಾ ನಿಷ್ಠನಾಗಿರುತ್ತೇನೆ. ಮುಖ್ಯಮಂತ್ರಿ ಗಳು ಹೇಳಿದ ಮೇಲೆ ಅದೇ ಅಂತಿಮ. ಅದಕ್ಕೆ ಯಾವುದೇ ತಕರಾರು ಇಲ್ಲ. ಅದರ ಬಗ್ಗೆ ಮರುಪ್ರಶ್ನೆಯೇ ಇಲ್ಲ. ಅವರ ಹೇಳಿಕೆಯ ಅನಂತರ ಈ ವಿಚಾರವಾಗಿ ಯಾವುದೇ ವಾದ ಅಥವಾ ಚರ್ಚೆ ಆವಶ್ಯಕತೆ ಇಲ್ಲ.
-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಒಪ್ಪಂದ ಆಗಿದೆ ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಒಪ್ಪಂದ ಆಗಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೇನು ನಿಮಗೆ ಅಲ್ಲಿಯೇ ಉತ್ತರ ಸಿಕ್ಕಿತಲ್ಲ. ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ? ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಒಪ್ಪಂದ ದ ಬಗ್ಗೆ ನನಗೆ ಮಾಹಿತಿ ಇಲ್ಲ.
-ಡಾ| ಜಿ. ಪರಮೇಶ್ವರ, ಗೃಹ ಸಚಿವ