Advertisement

ಜಿಲ್ಲೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ

09:20 PM Mar 17, 2020 | Lakshmi GovindaRaj |

ಹಾಸನ: ಜಿಲ್ಲೆಯಲ್ಲಿ ಇದುವರೆಗೂ ಶಂಕಿತ 152 ಜನರ ತಪಾಸಣೆ ನಡೆಸಲಾಗಿದೆ. 13 ಶಂಕಿತರ ರಕ್ತ, ಕಫ‌ದ ಪರೀಕ್ಷೆಯನ್ನೂ ನಡೆಸಲಾಗಿದ್ದು, ಯಾರೊಬ್ಬರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಸ್ಪಷ್ಟಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50 ಮಂದಿ ದೇಶಿಯರು, 102 ವಿದೇಶಿಗರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಸುಮಾರು 13 ಶಂಕಿತರ ಪರೀಕ್ಷೆ ನಡೆಸಲಾಗಿದ್ದು ಯಾರಲ್ಲಿಯೂ ಸೋಂಕು ಇಲ್ಲವೆಂದು ಖಾತರಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೇಲೂರು, ಹಳೆಬೀಡು ಹಾಗೂ ಶ್ರವಣಬೆಳಗೊಳದಲ್ಲಿ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಕೊರೊನಾ ಪರೀಕ್ಷಾ ಕೇಂದ್ರ ಸ್ಥಾಪನೆ: ಹಾಸನದಲ್ಲಿ ಕೊರೊನಾ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಬಂದ 45 ಜನರ ಸ್ಯಾಂಪಲ್ಸ್‌ ಗಳನ್ನು ಪರೀಕ್ಷೆ ನಡೆಸಿದ್ದು ಸೋಂಕು ಇಲ್ಲವೆಂದು ವರದಿ ಬಂದಿದೆ. ಸಾರ್ವಜನಿಕರು ಗಾಬರಿಯಾಗುವ ಅವಶ್ಯಕತೆ ಇಲ್ಲ ಆದರೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು. ಇಲ್ಲಿಯವರೆಗೆ ಶಂಕಿತರೆಂದು ಗುರುತಿಸಲಾಗಿರುವವರೆಲ್ಲರೂ ಬೇರೆ ಕಡೆಯಿಂದ ಬಂದವರಾಗಿದ್ದಾರೆ. ಬೇರೆ ವಿದೇಶಗಳಿಂದ ಬಂದ ಭಾರತೀಯರನ್ನು ರೋಗ ಲಕ್ಷಣಗಳು ಕಂಡುಬಂದಲ್ಲಿ 14 ದಿನಗಳು ಐಸೋಲೇಷನ್‌ನಲ್ಲಿ ಇಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಿಮ್ಸ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌: ಹಾಸನ ಹಿಮ್ಸ್‌ ಆಸ್ಪತ್ರೆಯಲ್ಲಿ ಪ್ರಸ್ತುತ 20 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಸ್ಥಾಪನೆಯಾಗಿದ್ದು ಅವಶ್ಯಕತೆ ಇದ್ದಲ್ಲಿ ಅದನ್ನು 300 ಹಾಸಿಗೆಗಳವರೆಗೂ ವಿಸ್ತರಿಸಬಹುದು. ವಾರ್ಡ್‌ನಲ್ಲಿ ಈಗ ಯಾವೊಬ್ಬ ಶಂಕಿತರೂ ದಾಖಲಾಗಿಲ್ಲ. ಸರ್ಕಾರದ ಆದೇಶದಂತೆ ಈಗಾಗಲೇ ಶಂಕಿತರಿಗಾಗಿ 50 ಹಾಸಿಗೆಗಳ ಕ್ವಾರಂಟೈನ್‌ (ಪ್ರತ್ಯೇಕ) ವಾರ್ಡ್‌ನ್ನು, 100 ಹಾಸಿಗೆಗಳ ವಾರ್ಡ್‌ ಗೆ ವಿಸ್ತರಿಸಲಾಗುವುದು. ಇಲ್ಲಿಯವರೆಗೆ 14 ಜನರು ಹೋಮ್‌ ಐಸೋಲೇಷನ್‌ ಮುಗಿಸಿದ್ದಾರೆ.

ಜೊತೆಗೆ ಪ್ರವಾಸಕ್ಕೆ ಬರುವ ವಿದೇಶಿಗರ ಮೇಲೆ ನಿಗಾ ವಹಿಸಲಾಗಿದೆ ಎಂದರು. ಜಾತ್ರಾ ಮಹೋತ್ಸವಗಳಿಗೆ ಹೆಚ್ಚು ಜನರು ಸೇರಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ದೇವಸ್ಥಾನದ ಆಡಳಿತ ಮಂಡಳಿಗಳಿಗೆ ಹೆಚ್ಚು ಜನರು ಸೇರದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಾತ್ರಾ ಮಹೋತ್ಸವ ನಡೆಯುವ ಹಿಂದಿನ ದಿನ ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

Advertisement

ಸಂತೆಯಲ್ಲಿ ಕೊರೊನಾ ಜಾಗೃತಿ: ಹಾಸನ ನಗರದಲ್ಲಿ ಎಲ್ಲ ಸೂಪರ್‌ ಮಾರ್ಕೆಟ್‌ಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಬುಧವಾರದಿಂದ ದಿನ ಬಿಟ್ಟು ದಿನ ತೆರೆಯುವಂತೆ ಆದೇಶಿಸಲಾಗಿದೆ. ಸಂತೆ ಹಾಗೂ ಇತರೆ ಜನ ಸೇರುವ ಜಾಗಗಳಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಮದುವೆ ಮತ್ತು ಇತರೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ ಎಂದು ತಿಳಿಸಿದರು.

ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕೇಸ್‌: ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳು ಹರಿದಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು ಆ ರೀತಿ ಮಾಡುವವರ ವಿರುದ್ಧ ಸೈಬರ್‌ ಕ್ರೆçಮ್‌ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ ಅವರು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್‌ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಸರಾಗವಾಗಿ ನಡೆದ ವಾರದ ಸಂತೆ: ಕೊರೊನಾ ವೈರಸ್‌ ಹರಡದಂತೆ ಹೆಚ್ಚು ಜನರು ಸೇರುವ ಎಲ್ಲ ಕಾರ್ಯಕ್ರಮಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ. ಆದರೆ ಹಾಸನನಲ್ಲಿ ಮಂಗಳವಾರದ ಸಂತೆಯ ಮೇಲೆ ನಿರ್ಬಂಧ ಪರಿಣಾಮ ಬೀರಲಿಲ್ಲ. ಹಾಸನದಲ್ಲಿ ಎಂ.ಜಿ.ರಸ್ತೆಗೆ ಹೊಂದಿಕೊಂಡಂತಿರುವ ಮಹಿಳಾ ಕಾಲೇಜು ರಸ್ತೆ, ಬಿ.ಎಂ.ರಸ್ತೆಯ ರೇಷ್ಮೆ ಮಾರುಕಟ್ಟೆಯ ಆವರಣ, ಸಂತೆಪೇಟೆಯಲ್ಲಿ ಮಂಗಳವಾರದ ಸಂತೆ ನಡೆಯುತ್ತವೆ. ಈ ಮಂಗಳವಾರವೂ ಸಂತೆ ಸರಾಗವಾಗಿ ನಡೆಯಿತು. ಸಾವಿರಾರು ಜನರು ಸಂತೆಗೆ ಬಂದು ದಿನ ನಿತ್ಯದ ವಸ್ತುಗಳನ್ನು ಖರೀದಿಸಿದರು. ಕೊರೊನಾ ಬಗ್ಗೆ ಯಾರಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next