ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿ ಮತದಾನಕ್ಕೆ ಮುನ್ನವೇ ಕಸುವು ಕಳೆದುಕೊಂಡಿದೆ. ಗೊತ್ತುವಳಿಯ ಬಗ್ಗೆ ಟಿಡಿಪಿಯಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಅವರನ್ನು ಟೀಕಿಸುತ್ತಲೇ ಬಂದಿರುವ ಶಿವಸೇನೆ ಗುರುವಾರ ಬೆಳಗ್ಗೆ ಸರಕಾರದ ಪರ ನಿಂತಿದ್ದರೆ, ಸಂಜೆ ವೇಳೆಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದೆ. ಶುಕ್ರವಾರದ ಅವಿಶ್ವಾಸ ನಿರ್ಣಯದ ವೇಳೆ ಎಐಎಡಿಎಂಕೆ, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸರಕಾರದ ಪರ ಮತ ಹಾಕಲಿವೆ. ಇನ್ನು ಬಿಜು ಜನತಾ ದಳ (ಬಿಜೆಡಿ) ಪ್ರಕ್ರಿಯೆ ವೇಳೆ ಗೈರಾಗುವ ಸಾಧ್ಯತೆ ಇದೆ.
ಗೊತ್ತುವಳಿ ಮಂಡನೆಯಾಗಿರುವ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಔತಣಕೂಟಗಳು ಶುರುವಾಗಿವೆ. ಜತೆಗೆ ಖುದ್ದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್ ಠಾಕ್ರೆಗೆ ಫೋನ್ ಮಾಡಿ ಸರಕಾರದ ಪರ ಮತದಾನ ಮಾಡುವಂತೆ ಪಕ್ಷದ ಸಂಸದರಿಗೆ ಸೂಚಿಸಬೇಕು ಎಂದು ಮನವಿ ಮಾಡಿದರು. ಅದಕ್ಕೆ ಠಾಕ್ರೆ ಒಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಂಜೆಯ ವೇಳೆ ಅಂತಿಮ ನಿರ್ಧಾರವಾಗಿಲ್ಲ ಎಂದು ಪಕ್ಷದ ಸಂಸದ ಹರ್ಶಲ್ ಪ್ರಧಾನ್ ತಿಳಿಸಿದ್ದು, ಶುಕ್ರವಾರ ಉನ್ನತ ನಾಯಕರ ನಿರ್ಧಾರದಂತೆ ನಡೆಯಲಾಗುವುದು. ಬೆಳಗ್ಗೆ ಸರಕಾರದ ಪರ ಇರುವಂತೆ ಜಾರಿಗೊಳಿಸ ಲಾಗಿದ್ದ ವಿಪ್ “ಎಡವಟ್ಟು’ ಎಂದಿದ್ದಾರೆ.
ಪದೇ ಪದೆ ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿರುವ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕೂಡ ಗೊತ್ತುವಳಿ ವಿರುದ್ಧ ಮತ ಹಾಕುವುದಾಗಿ ಹೇಳಿದ್ದಾರೆ. ಅನಂತಪುರ ಲೋಕಸಭಾ ಕ್ಷೇತ್ರದ ಸದಸ್ಯ ಜೆ.ಸಿ.ದಿವಾಕರ ರೆಡ್ಡಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬೆಳಗ್ಗೆ ಹೇಳಿದ್ದು, ಸಂಜೆ ಪಕ್ಷದ ನಾಯಕರ ಸೂಚನೆಯಂತೆ ಸದನದಲ್ಲಿ ಹಾಜರಿರುವುದಾಗಿ ತಿಳಿಸಿದ್ದಾರೆ.
ದಿವಾಕರ ರೆಡ್ಡಿ ಅವರೊಂದಿಗೆ ಮುಖ್ಯಮಂತ್ರಿ ಮಾತನಾಡಿ, ಪಕ್ಷದ ನಿಲುವಿನಂತೆ ಸಂಸತ್ತಿನಲ್ಲಿ ಹಾಜರಿರಲು ಸೂಚಿಸಿದ್ದಾರೆ ಎನ್ನಲಾಗಿದೆ. ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಗೊತ್ತುವಳಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಸಂಖ್ಯಾ ಬಲ ಮಾತ್ರವಲ್ಲ: ಗೊತ್ತುವಳಿಯ ಫಲಿತಾಂಶ ಸರಕಾರದ ಪರ ಇರಲಿದೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಕಾಂಗ್ರೆಸ್ ಗಲಿಬಿಲಿಗೊಂಡಿದೆ. ಇದು ಸಂಖ್ಯಾಬಲದ ಪ್ರದರ್ಶನವಲ್ಲ. ಸರಕಾರದ ವೈಫಲ್ಯಗಳನ್ನು ಬಯಲಿಗೆಳೆಯಲು ಒಂದು ಅವಕಾಶ ಎಂದಿದ್ದಾರೆ ಮಾಜಿ ಸಚಿವ ಆನಂದ ಶರ್ಮಾ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವನ್ನು ಸೋಲಿಸುವ ವಿಚಾರದಲ್ಲಿ ಇದು ಆರಂಭಿಕ ಹೆಜ್ಜೆ ಎಂದಿದ್ದಾರೆ. ಮತ್ತೂಂದು ಮಹತ್ವದ ಅಂಶವೆಂದರೆ 34 ಸದಸ್ಯರಿರುವ ಟಿಎಂಸಿ ಸದಸ್ಯರ ಪೈಕಿ ಇಬ್ಬರು ಸಂಸದರು ಗೈರಾಗಲಿದ್ದಾರೆ ಎಂದು ಹೇಳಲಾಗಿದೆ.
ರಾಹುಲ್‌ರಿಂದ ಆರಂಭ: ಲೋಕಸಭೆಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಟಿಡಿಪಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆ. ಇದಾದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚರ್ಚೆ ಆರಂಭಿಸಿ ಮಾತನಾಡಲಿದ್ದಾರೆ. ಒಟ್ಟು ಏಳು ಗಂಟೆಗಳ ಕಾಲ ಗೊತ್ತುವಳಿಯ ಬಗ್ಗೆ ಚರ್ಚೆ ನಡೆಯಲಿದೆ. ಹೀಗಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಬುಧವಾರವೇ ಘೋಷಣೆ ಮಾಡಿದ್ದಂತೆ ಪ್ರಶ್ನೋತ್ತರ ಅವಧಿ ರದ್ದು ಮಾಡಲಾಗಿದೆ.
ಔತಣಕೂಟ, ಮಾತುಕತೆ: ಅವಿಶ್ವಾಸ ಗೊತ್ತುವಳಿ ಸರಕಾರದ ಪರವಾಗಿಯೇ ಇರಲಿದ್ದರೂ ಬಿಜೆಪಿ ವರಿಷ್ಠರು ಮೈತ್ರಿಕೂಟ ಮತ್ತು ಇತರ ರಾಜಕೀಯ ಪಕ್ಷಗಳ ನಾಯಕರು ಮತ್ತು ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಪ್ರಮುಖ ನಾಯಕರಿಗೆ ಮೈತ್ರಿಕೂಟದ ನಾಯಕರ ಜತೆ ಔತಣ ಮತ್ತು ಭೋಜನಕೂಟಗಳನ್ನು ಏರ್ಪಡಿಸಿ ಸರಕಾರದ ಪರವಾಗಿಯೇ ಇರುವಂತೆ ಮಾಡುವ ಹೊಣೆ ವಹಿಸಲಾಗಿದೆ.
ಟಿಡಿಪಿಗಿಲ್ಲ ಎಐಎಡಿಎಂಕೆ ಬಲ
ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸಲು ಎಐಎಡಿಎಂಕೆ ಹಿಂದೇಟು ಹಾಕಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಟಿಡಿಪಿ ಅವಿಶ್ವಾಸ ಮಂಡಿಸಿದೆಯಷ್ಟೆ ಎಂದು ಸಿಎಂ ಕೆ. ಪಳನಿಸ್ವಾಮಿ ಹೇಳಿದ್ದಾರೆ. ಕಾವೇರಿ ಸಮಸ್ಯೆ ಬಂದಾಗ ಯಾರೂ ತಮಿಳುನಾಡನ್ನು ಬೆಂಬಲಿಸ ದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.