Advertisement

ಪರಿಹಾರ ವಿಳಂಬ ಬೇಡ ; ಕೋವಿಡ್ ಹುತಾತ್ಮರಿಗೆ ಶೀಘ್ರ ಪರಿಹಾರಕ್ಕೆ ಹಕ್ಕೊತ್ತಾಯ

12:39 AM Oct 19, 2020 | mahesh |

ಬೆಂಗಳೂರು: ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಕೋವಿಡ್ ಯೋಧರ ಬಗ್ಗೆ ಹೆಚ್ಚಿನ ಸರಕಾರ ಕಾಳಜಿ ತೋರಬೇಕು ಎಂದು ಸಮಾಜದ ವಿವಿಧ ವರ್ಗಗಳು ಆಗ್ರಹಿಸಿದ್ದು, “ಹುತಾತ್ಮ’ರಿಗೆ ಪರಿಹಾರ ನೀಡಿಕೆಯಲ್ಲಿ ವಿಳಂಬ ಸಲ್ಲದು ಎಂಬ ಆಗ್ರಹವನ್ನು ಮುಂದಿಟ್ಟಿವೆ.

Advertisement

ಉದಯವಾಣಿ ರವಿವಾರ ಪ್ರಕಟಿಸಿದ ವರದಿಗೆ ಪ್ರತಿಕ್ರಿಯಿಸಿರುವ ರಾಜಕೀಯ ನಾಯಕರು,  ವಿವಿಧ ವೃತ್ತಿಪರ ಸಂಘಟನೆಗಳ ಪದಾಧಿ ಕಾರಿಗಳು ಹುತಾತ್ಮರಿಗೆ ಪರಿಹಾರ ನೀಡುವ ಪ್ರಕ್ರಿಯೆ ಸರಳ ಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ವಿಳಂಬ ನೀತಿಯನ್ನು ವಿಪಕ್ಷಗಳು ಟೀಕಿಸಿವೆ.

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ರಾಜ್ಯದ ಕೋವಿಡ್ ವಾರಿಯರ್‌ಗಳಿಗೆ ಪರಿಹಾರ ಒದಗಿಸಲಾಗುತ್ತಿದೆ. ಜತೆಗೆ ರಾಜ್ಯ ಸರಕಾರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೆಲವು ಪ್ರಕರಣಗಳಲ್ಲಿ ಪರಿಹಾರ ನೀಡುತ್ತಿದೆ. ಸಾಕಷ್ಟು ನಿಯಮಗಳಿರುವುದರಿಂದ ಮೃತರ ಕುಟುಂಬದವರಿಗೆ ಪರಿಹಾರ ವಿಳಂಬವಾಗುತ್ತಿದೆ ಎಂದು ಕೊರೊನಾ ವಾರಿಯರ್ಸ್‌ ನೌಕರರ ಸಂಘಟನೆಗಳು ಹೇಳಿವೆ.

ಕೊರೊನಾದಿಂದ ನಿಧನ ಹೊಂದಿದ ವಾರಿಯರ್‌ಗಳಿಗೆ ಪರಿಹಾರ ನೀಡಲು ಕಾಗದ ಪತ್ರ ಪರಿಶೀಲನೆಗೆ ಪ್ರತ್ಯೇಕ ಸಮಿತಿ ರಚನೆ ಮಾಡಿ, ವೇಗವಾಗಿ ಪರಿಹಾರ ತಲುಪುವಂತೆ ಸರಕಾರ ನೋಡಿಕೊಳ್ಳಬೇಕೆಂಬ ಸಲಹೆ ಕೂಡ ವ್ಯಕ್ತವಾಗಿದೆ. ಸರಕಾರಿ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾಗ ಕೋವಿಡ್ ತಗಲಿ ಜೀವ ಕಳೆದುಕೊಂಡರೆ ಹಾಗೂ ಕೋವಿಡ್ ಕರ್ತವ್ಯದಲ್ಲಿದ್ದಾಗ ಅಪಘಾತಕ್ಕೆ ತುತ್ತಾದರೆ ಮಾತ್ರ ಪರಿಹಾರ ನೀಡಲಾಗುವುದು ಎನ್ನುವ ನಿಯಮಕ್ಕೆ ಕೊರೊನಾ ವಾರಿಯರ್‌ಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ನೇರವಾಗಿ ರೋಗಿಗಳ ಜತೆ ಸಂಪರ್ಕಕ್ಕೆ ಬರುವುದರಿಂದ ಅವರಿಗೆ ಜೀವ ಭಯ ಹೆಚ್ಚಿರುತ್ತದೆ. ರೋಗಿಗಳ ಸ್ಥಿತಿ ನೋಡಿ, ಮಾನಸಿಕ ವಾಗಿ ಆಘಾತಕ್ಕೊಳಗಾಗಿ ಕೆಲಸದ ಒತ್ತಡದಿಂದ ಅನಾರೋಗ್ಯ ಕ್ಕೊಳಗಾಗಿ ಕೋವಿಡ್ ನಿಧನ ಹೊಂದಿರುವ ಪ್ರಕರಣಗಳಿವೆ. ಅವರಿಗೂ ಸಿಎಂ ನಿಧಿಯಿಂದ 30 ಲಕ್ಷ ರೂ. ಕೊಡಬೇಕೆನ್ನುವ ಬೇಡಿಕೆ ಇದೆ.

Advertisement

ಪ್ರೋತ್ಸಾಹ ಧನ ಸಿಕ್ಕಿಲ್ಲ
ಸರಕಾರ ಈಗಾಗಲೇ 3 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇದುವರೆಗೂ ಹಲವರ ಕೈಸೇರಿಲ್ಲ. ಗೌರವ ಧನವೂ ಸಕಾಲದಲ್ಲಿ ಕೈಸೇರುತ್ತಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಸಿ. ಸೋಮಶೇಖರ್‌ ದೂರಿದ್ದಾರೆ. ಆಶಾ ಕಾರ್ಯಕರ್ತೆಯರ ಗೌರವ ಧನವನ್ನು 12 ಸಾವಿರ ರೂ.ಗೆ ಏರಿಸಬೇಕು ಎಂದು ಹಲವು ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿದೆ. ಆದರೆ ಸರಕಾರ ಈ ಕಡೆ ಗಮನ ಹರಿಸುತ್ತಿಲ್ಲ ಎಂದಿದ್ದಾರೆ.

ಪೊಲೀಸ್‌ ಸಿಬಂದಿಗೆ ಆರೋಗ್ಯ ಕವಚ ಯೋಜನೆ ಅಡಿಯಲ್ಲಿ ಇಲಾಖೆಯಿಂದಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಾವಿಗೀಡಾದರೆ ಇಲಾಖೆ ನೀಡುವ ಪರಿಹಾರ ಸಿಗುವ ಪರಿಹಾರದ ಜತೆಗೆ 30 ಲಕ್ಷ ರೂ.ಗಳನ್ನೂ ಕೊಡಲಾಗು ತ್ತಿದೆ. ಈಗಾಗಲೇ ಕೆಲವರ ಕುಟುಂಬಗಳಿಗೆ ಇಲಾಖೆ ವತಿಯಿಂದ ಪರಿಹಾರ ತಲುಪಿಸಲಾಗಿದೆ. ಪೊಲೀಸರ ಆರೋಗ್ಯದ ಹಿತದೃಷ್ಟಿಯಿಂದ 50 ವರ್ಷ ಮೇಲ್ಪಟ್ಟವರನ್ನು ಕಚೇರಿ ಕೆಲಸಕ್ಕೆ ನಿಯೋಜಿಸಿದ್ದು, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಮಾತ್ರ ಕೊರೊನಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
– ಬಸವರಾಜ್‌ ಬೊಮ್ಮಾಯಿ, ಗೃಹ ಸಚಿವ

ಕೋವಿಡ್ ನಿಯಂತ್ರಣ, ಜಾಗೃತಿ, ಚಿಕಿತ್ಸೆ ಹಂತದಲ್ಲಿ ಹಾಗೂ ಕೋವಿಡ್ ಅಪಾಯದ ನಡುವೆಯೂ ಸಾರ್ವಜನಿಕ ಸೇವೆಯಲ್ಲಿ ತೊಡಗಿ ಜೀವತೆತ್ತ ವಾರಿಯರ್ಸ್‌ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ. ನಿಯಮಾನುಸಾರ ಪರಿಹಾರ ಸೇರಿ ಇತರ ಸವಲತ್ತು ತ್ವರಿತವಾಗಿ ಕಲ್ಪಿಸುವುದು ಸರಕಾರದ ಕರ್ತವ್ಯ. ಇದು ಅವರಿಗೆ ನೀಡುವ ಗೌರವವೂ ಹೌದು. ಈ ಬಗ್ಗೆ ಉದಯವಾಣಿ ಬೆಳಕು ಚೆಲ್ಲಿರುವುದು ಒಳ್ಳೆಯ ಕೆಲಸ.
 - ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಕೋವಿಡ್ ಸಂಕಷ್ಟ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಬಿಜೆಪಿ ಸರಕಾರದ ನಿರ್ಲಕ್ಷ ದ ಬಗ್ಗೆ ಕಾಂಗ್ರೆಸ್‌ ಮೊದಲಿನಿಂದಲೂ ಬೆಳಕು ಚೆಲ್ಲುತ್ತ ಬಂದಿದೆ. ಹುತಾತ್ಮರಾದ ಕೊರೊನಾ ವಾರಿಯರ್ಸ್‌ ಕುಟುಂಬಗಳ ಬಗ್ಗೆ ತಿರಸ್ಕಾರ ಧೋರಣೆ ತಾಳಿ ಪರಿಹಾರದಲ್ಲಿ ವಿಳಂಬ ಮಾಡುವುದು ಸರಿಯಲ್ಲ.
– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಸಲಹೆಗಳು
1ಪರಿಹಾರ ನಿಯಮಗಳನ್ನು ಸರಳಗೊಳಿಸಬೇಕು
2ಗುತ್ತಿಗೆ ನೌಕರರನ್ನೂ ಪರಿಹಾರಕ್ಕೆ ಪರಿಗಣಿಸಬೇಕು
3ಪರಿಶೀಲನೆಗೆ ಪ್ರತ್ಯೇಕ ಸಮಿತಿ ರಚಿಸಬೇಕು
4ಪರಿಹಾರ ವಿತರಣೆ ಪ್ರಕ್ರಿಯೆ ಚುರುಕುಗೊಳಿಸಬೇಕು
5ಸಂತ್ರಸ್ತರಿಗೆ ಕಾಲಮಿತಿಯಲ್ಲಿ ಪರಿಹಾರ ನೀಡಬೇಕು

Advertisement

Udayavani is now on Telegram. Click here to join our channel and stay updated with the latest news.

Next